
ಬೆಂಗಳೂರು: ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ತೊಡಕಾಗಿರುವ ಕಟ್ಟಡಗಳನ್ನು ವಿಪತ್ತು ನಿರ್ವಹಣೆ ಕಾಯಿದೆಯಡಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.ನಗರದ ಮಾನ್ಯತಾ ಟೆಕ್ಪಾರ್ಕ್ ಬಳಿ ಪ್ರವಾಹ ಪರಿಸ್ಥಿತಿಗೆ ಕಾರಣವಾದ ರಾಜಕಾಲುವೆ ಹಾಗೂ ನಾಲೆಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ”ಈಗಾಗಲೇ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇವೆ. ಮಾನ್ಯತಾ ಟೆಕ್ಪಾರ್ಕ್ ಬಹುಮುಖ್ಯ ಜಂಕ್ಷನ್ ಆಗಿದ್ದು, ಇಲ್ಲಿ ಸಮಸ್ಯೆ ಶುರುವಾಗಿ ಉಳಿದ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. (ಬೆಂಗಳೂರು ಮಳೆ ಮುನ್ಸೂಚನೆ)ಕೆಲವರು ತೆರವು ಕಾರ್ಯಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅಡ್ಡಿಪಡಿಸುತ್ತಿದ್ದಾರೆ. ಅಧಿಕಾರಿಗಳಿಗೂ ಸಹಕಾರ ನೀಡಿಲ್ಲ. ಹೀಗಾಗಿ, ಸಮಸ್ಯೆಗೆ ಕಾರಣವಾದ ಪ್ರದೇಶಗಳಲ್ಲಿವಿಪತ್ತು ನಿರ್ವಹಣಾ ಕಾಯಿದೆಯಡಿ ಕಟ್ಟಡಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ,” ಎಂದು ಹೇಳಿದರು.
”ಸರಕಾರಕ್ಕೆ ಸಾರ್ವಜನಿಕರ ಆಸ್ತಿಯನ್ನು ನಷ್ಟ ಮಾಡಲು ಇಷ್ಟವಿಲ್ಲ. ಯಾರಿಗೂ ಅನ್ಯಾಯ ಮಾಡಲು ಬಯಸುವುದಿಲ್ಲ. ಆದರೆ, ಮಳೆ ನೀರು ಸರಾಗವಾಗಿ ಹರಿಯಬೇಕು. ಈ ಹಿನ್ನೆಲೆಯಲ್ಲಿಖುದ್ದು ನಾನೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದೇನೆ. ಕಾಮಗಾರಿ ಮುಂದುವರಿಸಲು ಸ್ಥಳೀಯರೆಲ್ಲರೂ ಒಪ್ಪಿಕೊಂಡಿದ್ದಾರೆ,” ಎಂದು ತಿಳಿಸಿದರು.
“ಮಳೆ ನೀರು ಸರಾಗವಾಗಿ ಹರಿಯುವುದು ಇಲ್ಲಿ ಮುಖ್ಯವೇ ಹೊರತು ಇನ್ಯಾರೂ ಅಲ್ಲ. ನಾವು ಯಾವುದೇ ಕಟ್ಟಡಗಳಿಗೆ ಅಡಚಣೆ ಮಾಡಲು ಬಯಸುವುದಿಲ್ಲ. ನಾವು ಬೆಂಗಳೂರಿನ ಘನತೆ ಹಾಳಾಗಲು ಬಿಡುವುದಿಲ್ಲ. ಹೀಗಾಗಿ ಈ ಭಾಗದ ಭೂಮಾಲೀಕರಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದೇವೆ. ತಾಂತ್ರಿಕ ಕಾರಣಗಳಿಂದಾಗಿ ತಪ್ಪಾಗಿದ್ದರೆ ನಾವು ಅದಕ್ಕೆ ಪರಿಹಾರ ನೀಡುತ್ತೇವೆ. ನಮಗೆ ಈ ವಿಚಾರವಾಗಿ ಶಾಶ್ವತ ಪರಿಹಾರ ಬೇಕಾಗಿದೆ. ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದು, ನಾವು ನಮ್ಮ ಕೆಲಸ ಮುಂದುವರಿಸುತ್ತೇವೆ. ನಮ್ಮ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಕಾರ್ಯದರ್ಶಿಗಳಿಗೆ ಈ ವಿಚಾರದಲ್ಲಿ ಇರುವ ಅಡಚಣೆಗಳನ್ನು ತೆರವುಗೊಳಿಸಲು ಸಂಪೂರ್ಣ ಅಧಿಕಾರ ನೀಡಲಾಗಿದೆ” ಎಂದು ತಿಳಿಸಿದರು.
ಬಿಬಿಎಂಪಿ ಒಡೆತನದ ಶಿಶುವಿಹಾರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು 29ನೇ ಮೇ 2025 ರಿಂದ ಪ್ರಾರಂಭವಾಗುತ್ತಿವೆ ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿದ್ದಾರೆ. 2025-26 ನೇ ಶೈಕ್ಷಣಿಕ ಸಾಲಿನ ವಿವಿಧ ತರಗತಿಗಳ ವಿದ್ಯಾಭ್ಯಾಸಕ್ಕಾಗಿ ಈಗಾಗಲೇ ಪ್ರವೇಶಾತಿಗಳು ಪ್ರಾರಂಭವಾಗಿದ್ದು, 20 ನೇ ಜೂನ್ 2025 ರವರೆಗೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಹತ್ತಿರದ ಪಾಲಿಕೆಯ ಶಾಲಾ/ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬಹುದಾಗಿರುತ್ತದೆ.


