World
Trending

ನೇಪಾಳದಲ್ಲಿ ಭಾರೀ ಸಂಘರ್ಷದ ಬಳಿಕ ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ತೆರವು

ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸಿರುವ ತನ್ನ ಕ್ರಮವನ್ನು ಇದೀಗ ನೇಪಾಳ ಸರ್ಕಾರ ಹಿಂತೆಗೆದುಕೊಂಡಿದೆ. ಸರ್ಕಾರ ವಿಧಿಸಿದ ನಿಷೇಧ ಕ್ರಮದ ವಿರುದ್ಧ ಜೆನ್ ಝೆಡ್ (ಯುವಜನತೆ) ಬೀದಿಗಿಳಿದು ಪ್ರತಿಭಟಿಸಿದ್ದು, ಫಲ ನೀಡಿದೆ.

ಸೋಮವಾರ ಪೊಲೀಸರು ಮತ್ತು ಜನರ ನಡುವಿನ ಸಂಘರ್ಷದಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ, 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಂಭೀರ ಪರಿಸ್ಥಿತಿಯ ನಡುವೆ ಗೃಹ ಸಚಿವ ರಮೇಶ್ ಲೇಖಕ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ನೇಪಾಳಿ ಸೇನೆಯನ್ನು ರಾಜಧಾನಿ ಕಠ್ಮಂಡುವಿನಲ್ಲಿ ನಿಯೋಜಿಸಲಾಗಿತ್ತು. ನ್ಯೂ ಬನೇಶ್ವರ್‌ನಲ್ಲಿರುವ ಸಂಸತ್ ಸಂಕೀರ್ಣದ ಸುತ್ತಲಿನ ರಸ್ತೆಗಳನ್ನು ಸೇನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು.

ಜನರ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ಕೆ.ಪಿ.ಶರ್ಮಾ ಓಲಿ, ಶಾಂತಿಯುತ ಪ್ರತಿಭಟನೆಯಲ್ಲಿ ಕೆಲವು ಅನಗತ್ಯ ವಿಚಾರಗಳ ಮಧ್ಯಪ್ರವೇಶ ಆಗಿತ್ತು. ಈ ಬೆಳವಣಿಗೆಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗುವುದನ್ನು ತಡೆಯಲು ಸರ್ಕಾರ ಬಲವಂತವಾಗಿ ಕ್ರಮ ಕೈಗೊಳ್ಳಬೇಕಾಯಿತು ಎಂದು ಹೇಳಿದ್ದಾರೆ.

ಸರ್ಕಾರಕ್ಕೆ ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸುವ ಉದ್ದೇಶ ಇರಲಿಲ್ಲ. ಆದರೆ ಅವುಗಳನ್ನು ನಿಯಂತ್ರಿಸುವ ಗುರಿ ಇತ್ತಷ್ಟೇ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ. ಘಟನಾವಳಿಗಳ ಕುರಿತು ಮುಂದಿನ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿ ತನಿಖಾ ಸಮಿತಿ ರಚಿಸಲಾಗುವುದು ಎಂದು ಪ್ರಧಾನಿ ಓಲಿ ಘೋಷಿಸಿದ್ದಾರೆ.

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ನೇಪಾಳದ ಸಂವಹನ, ಮಾಹಿತಿ ಮತ್ತು ಪ್ರಸಾರ ಸಚಿವರಾದ ಪೃಥ್ವಿ ಸುಬ್ಬಾ ಗುರುಂಗ್ ಅವರು ತುರ್ತು ಸಚಿವ ಸಂಪುಟ ಸಭೆಯ ನಂತರ ಸರ್ಕಾರ ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸುವ ತನ್ನ ಹಿಂದಿನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ ಎಂದು ಪ್ರಕಟಿಸಿದ್ದಾರೆ.

ಸಂಸತ್ ಕಟ್ಟಡದ ಎದುರು ಬೃಹತ್ ಪ್ರತಿಭಟನೆ ನಡೆಸುತ್ತಿರುವ ‘ಜೆನ್ ಝಡ್'(ಯುವಜನತೆ)ಬೇಡಿಕೆಗಳಂತೆ, ಸಾಮಾಜಿಕ ಮಾಧ್ಯಮ ತಾಣಗಳನ್ನು ಪುನರಾರಂಭಿಸುವ ಪ್ರಕ್ರಿಯೆ ಪ್ರಾರಂಭಿಸಲು ಮಾಹಿತಿ ಸಚಿವಾಲಯ ಸಂಬಂಧಪಟ್ಟ ಸಂಸ್ಥೆಗಳಿಗೆ ಆದೇಶಿಸಿದೆ ಎಂದು ಗುರುಂಗ್ ಹೇಳಿದ್ದಾರೆ. ಹೀಗಾಗಿ, ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆಯೂ ಸಚಿವರು ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ, ಜೆನ್ ಝಡ್ ಬ್ಯಾನರ್ ಅಡಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಯುವಕರು ಕಠ್ಮಂಡುವಿನ ಹೃದಯಭಾಗದಲ್ಲಿರುವ ಸಂಸತ್ತಿನ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರದ ನಿಷೇಧ ಕ್ರಮವನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ್ದಾರೆ.

ಕೆಲವು ಪ್ರತಿಭಟನಾಕಾರರು ಸಂಸತ್ ಸಂಕೀರ್ಣ ಪ್ರವೇಶಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಹಿಂಸೆಗೆ ತಿರುಗಿತು. ಪೊಲೀಸರು ಜನರ ಗುಂಪುಗಳನ್ನು ಚದುರಿಸಲು ಜಲಫಿರಂಗಿ, ಅಶ್ರುವಾಯು ಮತ್ತು ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

ನೇಪಾಳ ಸಂಘರ್ಷದ ಪೂರ್ಣ ಚಿತ್ರಣ:

  • 26 ಸಾಮಾಜಿಕ ಜಾಲತಾಣ ವೇದಿಕೆಗಳನ್ನು ನಿಷೇಧಿಸಿದ ನೇಪಾಳ ಸರ್ಕಾರ
  • ಫೇಸ್ ಬುಕ್, ಯೂಟ್ಯೂಬ್, ಎಕ್ಸ್, ಇನ್ ಸ್ಟಾಗ್ರಾಂ ಎಲ್ಲವೂ ಬ್ಯಾನ್
  • ನಕಲಿ ಸುದ್ದಿಗಳು ಮತ್ತು ಸೈಬರ್ ಅಪರಾಧಗಳನ್ನು ತಡೆಯಲು ಕ್ರಮ ಎಂದ ಸರ್ಕಾರ
  • ಸರ್ಕಾರದ ಕ್ರಮಕ್ಕೆ ಜನರೇಶನ್ ಜೆಡ್ ಅಥವಾ ಜೆನ್ ಜೆಡ್(ಯುವ ಜನತೆ)ಯಿಂದ ಭಾರೀ ಆಕ್ರೋಶ
  • ಇದು ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಖಂಡನೆ
  • ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಪೊಲೀಸರೊಂದಿಗೆ ಘರ್ಷಣೆ
  • 19 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ
  • ಕಠ್ಮಂಡುವಿನಲ್ಲಿ ಸೇನೆ ನಿಯೋಜನೆ, ಕಂಡಲ್ಲಿ ಗುಂಡು ಆದೇಶ
  • ಹಲವು ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು
  • ರಾಜೀನಾಮೆ ನೀಡಿದ ಗೃಹ ಸಚಿವ ಲೇಖಕ್
  • ತುರ್ತು ಸಚಿವ ಸಂಪುಟ ಸಭೆ ಕರೆದ ಸರ್ಕಾರ
  • ಸರ್ಕಾರದ ನಡೆಗೆ ಸಾರ್ವಜನಿಕರಿಂದ ಟೀಕೆ
  • ಘಟನೆಗಳ ತನಿಖೆಗೆ ತನಿಖಾ ಸಮಿತಿ ರಚನೆ ಘೋಷಣೆ
  • ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ನಿಷೇಧ ನಿರ್ಧಾರ ವಾಪಸ್ ಪಡೆದ ಸರ್ಕಾರ

ನೇಪಾಳ ಪೊಲೀಸ್ ಇಲಾಖೆಯ ವಕ್ತಾರ ಬಿನೋದ್ ಘಿಮಿರೆ ಅವರು ಪ್ರತಿಕ್ರಿಯಿಸಿ, ಪ್ರತಿಭಟನೆಯ ಸಂದರ್ಭದಲ್ಲಿ ಕಠ್ಮಂಡುವಿನ ವಿವಿಧೆಡೆ ನಡೆದ ಘರ್ಷಣೆಗಳಲ್ಲಿ 17 ಜನ ಸಾವನ್ನಪ್ಪಿದ್ದಾರೆ. ಪೂರ್ವ ನೇಪಾಳದ ಸುನ್ಸಾರಿ ಜಿಲ್ಲೆಯಲ್ಲಿ ಇಬ್ಬರು ಪೊಲೀಸ್ ಗುಂಡಿಗೆ ಅಸುನೀಗಿದರು ಎಂದು ಮಾಹಿತಿ ನೀಡಿದರು.

ಪ್ರಧಾನಿ ಓಲಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ನೇಪಾಳಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿರುವ ಗೃಹ ಸಚಿವ ರಮೇಶ್ ಲೇಖಕ್ ಅವರು ಭಾರೀ ಸಂಘರ್ಷಗಳ ನಂತರ ನೈತಿಕ ನೆಲೆಗಟ್ಟಿನಲ್ಲಿ ರಾಜೀನಾಮೆ ನೀಡಿದರು ಎಂದು ನೇಪಾಳಿ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸಚಿವರೊಬ್ಬರ ಪ್ರಕಾರ, ಸಂಜೆ ಪ್ರಧಾನಿ ನಿವಾಸ ಬಲುವಾತರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಲೇಖಕ್ ಅವರು ಪ್ರಧಾನಿ ಓಲಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ವ್ಯಾಪಕ ಹಿಂಸಾಚಾರದ ನಂತರ ಸ್ಥಳೀಯ ಆಡಳಿತ ರಾಜಧಾನಿಯ ಹಲವು ಭಾಗಗಳಲ್ಲಿ ಕರ್ಫ್ಯೂ ಜಾರಿ ಮಾಡಿತು. ಕಠ್ಮಂಡುವಿನೊಂದಿಗೆ ಲಲಿತ್ಪುರ, ಪೋಖರಾ, ಬುಟ್ವಾಲ್ ಮತ್ತು ಸುನ್ಸರೈ ಜಿಲ್ಲೆಯ ಇಟಹರಿಯಲ್ಲಿ ಕರ್ಫ್ಯೂ ಆದೇಶವಿದೆ. ಪರಿಸ್ಥಿತಿ ಕೈಮೀರುವುದನ್ನು ತಡೆಯಲು ರಾಷ್ಟ್ರಪತಿ ಭವನ, ಉಪರಾಷ್ಟ್ರಪತಿ ನಿವಾಸ ಮತ್ತು ಪ್ರಧಾನ ಮಂತ್ರಿ ಕಚೇರಿಯ ಸುತ್ತಮುತ್ತಲ ವಿವಿಧ ಪ್ರದೇಶಗಳಿಗೂ ಈ ಆದೇಶವನ್ನು ವಿಸ್ತರಿಸಲಾಗಿದೆ.

ನಿಗದಿತ ಗಡುವಿನೊಳಗೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ನೋಂದಾಯಿಸಲು ವಿಫಲವಾದ ಕಾರಣಕ್ಕೆ ಸರ್ಕಾರ ಗುರುವಾರ ಫೇಸ್‌ಬುಕ್, ವಾಟ್ಸ್ ಆ್ಯಪ್, ಎಕ್ಸ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸಿತ್ತು. ಸರ್ಕಾರದ ಈ ನಡೆಯನ್ನು ಖಂಡಿಸಿದ ಯುವಜನತೆ ಬೀದಿಗಿಳಿದು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೇಪಾಳದೊಂದಿಗೆ ಗಡಿ ಹಂಚಿಕೊಳ್ಳುವ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button