
ಹನೂರು : ಮಲೆ ಮಹದೇಶ್ವರ ಬೆಟ್ಟದಲ್ಲಿ ಅಧಿಕಾರಿಗಳ ಪಾಲಿಗೆ ಅನಧಿಕೃತ ಆದಾಯ ಪ್ರಾಧಿಕಾರದ ಪಾಲಿಗೆ ಕೋಟ್ಯಾಂತರ ರೂ ಆರ್ಥಿಕ ನಷ್ಟಕ್ಕೆ ಕಾರಣವಾಗಿದ್ದ 21 ಅಕ್ರಮ ಅಂಗಡಿಗಳನ್ನು ಮೀನ-ಮೇಷ ಎಣಿಸಿ ತಿಣುಕಾಡಿ ಕೊನೆಗೂ ತೆರವುಗೊಳಿಸುವಲ್ಲಿ ಪ್ರಾಧಿಕಾರದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ಮಂಗಳವಾರ ಬೆಳ್ಳಂಬೆಳಗ್ಗೆ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಮ.ಬೆಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬೆಂಗಾವಲಿನೊಂದಿಗೆ ಪೌರಕಾರ್ಮಿಕರ ನೆರವಿನಲ್ಲಿ ಮ.ಬೆಟ್ಟದ ರಂಗ ಮಂದಿರದ ಮುಂಭಾಗ ಮುಚ್ಚಿದ ಮಳಿಗೆಗಳ ಮುಂದೆ ಅಕ್ರಮ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ 21 ಅಕ್ರಮ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಮಲೆ ಮಹದೇಶ್ವರ ಬೆಟ್ಟ ದೇಗುಲದ ಮುಂಭಾಗದಲ್ಲಿರುವ ಮೂಡಲ ಮಲೆ ವಾಣಿಜ್ಯ ಸಂಕೀರ್ಣದಲ್ಲಿನ 21 ಮುಚ್ಚಿದ ಮಳಿಗೆಗಳ ಮುಂದೆ ಯಾವುದೇ ಬಾಡಿಗೆಯಿಲ್ಲದೆ ಕಳೆದ ಏಳೆಂಟು ವರ್ಷಗಳಿಂದ ಬಿಟ್ಟಿಯಾಗಿ ಇವರುಗಳು ಅಂಗಡಿಯಿಟ್ಟು ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟ ಅಧಿಕಾರಿಗಳು ಒಳಗೊಳಗೆ ವರ್ತಕರಿಂದ ಲಕ್ಷಾಂತರ ರೂ ಪಡೆಯುವ ಮೂಲಕ ಪ್ರಾಧಿಕಾರಕ್ಕೆ ಪಂಗನಾಮ ಹಾಕಿ ತಮಗೆ ಹಣದ ಉಗಮ ಆಗುವ ರೀತಿ ವ್ಯವಸ್ಥೆ ಮಾಡಿಕೊಂಡಿರುವುದು ರಾಜಾರೋಷವಾಗಿ ನಡೆದುಕೊಂಡೇ ಬಂದಿದ್ದರೂ ಪ್ರಶ್ನಿಸುವವರೇ ಇಲ್ಲವಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಸರಣಿ ವರದಿ ಪ್ರಕಟಗೊಂಡಿತ್ತು.
ಜತೆಗೆ ಈ ಅಕ್ರಮದ ವಿರುದ್ದ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯ ಶರವಣ ಕೂಡಾ ಪತ್ರಿಕಾಗೋಷ್ಠಿ ಕರೆದು ಪ್ರಾಧಿಕಾರದ ಅಧಿಕಾರಿಗಳ ಬಂಡವಾಳವನ್ನು ಬಯಲು ಮಾಡುವುದರ ಜತೆಗೆ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ದ ವಿವಿಧೆಡೆ ದೂರು ಸಲ್ಲಿಸಿ ಪ್ರಾಧಿಕಾರದ ವಿರುದ್ದ ಸಮರವನ್ನೇ ಸಾರಿದ್ದರು. ಹೀಗಿದ್ದರೂ ಭಂಡತನವನ್ನೇ ಬಂಡವಾಳ ಮಾಡಿಕೊಂಡು ಲೂಟಿಯಲ್ಲಿ ನಿರತರಾಗಿದ್ದ ಅಧಿಕಾರಿಗಳು, ಇದೀಗ ಇದೇ ತಿಂಗಳ 24 ಕ್ಕೆ ಮ.ಬೆಟ್ಟದಲ್ಲಿ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರದ ಅಧ್ಯಕ್ಷರೂ ಆದ ಮುಖ್ಯಮಂತ್ರಿಗಳ ಆಗಮನದ ಸಂದರ್ಭದಲ್ಲಿ ಇಲ್ಲಿನ ಗೋಲ್ ಮಾಲ್ ಕಂಡು ಎಲ್ಲಿ ಉಗಿದು ಉಪ್ಪಾಕಿ ಮನೆಗಟ್ಟುವರೋ ಎಂಬ ಆತಂಕದಿಂದ ಅನ್ಯದಾರಿ ಕಾಣದ ಅಧಿಕಾರಿಗಳು ಅಪರೂಪಕ್ಕೆ ಕಚೇರಿ ಬಿಟ್ಟು ಬೀದಿಗಿಳಿದ ಪರಿಣಾಮವೇ ಈ ತೆರವು ಕಾರ್ಯಾಚರಣೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಮ.ಬೆಟ್ಟ ದೇಗುಲದ ಮುಂದಿನ ರಂಗಮಂದಿರದ ಮುಂಭಾಗ ಭಕ್ತಾದಿಗಳು ವಿಶ್ರಮಿಸಲು ನಿರ್ಮಿಸಿರುವ ಬೃಹತ್ ವಿಶ್ರಾಂತಿ ತಾಣದ ಮೇಲ್ಛಾವಣಿ ಕಾಮಗಾರಿ ನಡೆಯುತ್ತಿದ್ದ ವೇಳೆ 2017 ರಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಈ ಅಂಗಡಿಗಳಿಗೆ ಸಂಪರ್ಕ ಕಲ್ಪಿಸುವ ಪೊಲೀಸ್ ಠಾಣೆ ರಸ್ತೆ, ಪಾರ್ಕಿಂಗ್ ಸ್ಥಳದ ರಸ್ತೆ ಹಾಗೂ ತಮಿಳುನಾಡು ಕಡೆಯಿಂದ ಬರುವ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಜನರ ಓಡಾಟವನ್ನು ನಿರ್ಬಂಧಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ತಮಗೆ ವ್ಯಾಪಾರವಿಲ್ಲದೆ ನಷ್ಟವುಂಟಾಗಿರುವುದರಿಂದ ಆ ಸಂದರ್ಭದಲ್ಲಿನ ಬಾಡಿಗೆಯನ್ನು ಕಡಿತಗೊಳಿಸುವಂತೆ ಕೋರಿ ಅಲ್ಲಿನ ವರ್ತಕರು ಹೈಕೋರ್ಟ್ ಮೆಟ್ಟಲೇರಿದ್ದರು. ವರ್ತಕರ ಮನವಿಗೆ ಸ್ಪಂಧಿಸಿದ ನ್ಯಾಯಾಲಯ ಹತ್ತು ತಿಂಗಳ ಬಾಡಿಗೆಯನ್ನು ಕಡಿತಗೊಳಿಸಲು ಪ್ರಾಧಿಕಾರಕ್ಕೆ ಆದೇಶ ನೀಡಿತು.
ಇದಾದ ತರುವಾಯ ಕಾಮಗಾರಿ ಮುಗಿದು 2017 ರಲ್ಲಿ ಮುಚ್ಚಿದ್ದ ಎಲ್ಲಾ ರಸ್ತೆಗಳ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ನಂತರ ಎಂದಿನಂತೆ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದರೂ ವ್ಯಾಪಾರಿಗಳು ಬಾಡಿಗೆ ನೀಡಲು ಹಿಂದೇಟು ಹಾಕಿದರು. ನಾನಾ ಕುಂಟು ನೆಪವೊಡ್ಡಿ ಬಾಡಿಗೆ ಪಾವತಿಸದ ಕಾರಣ 2021 ರಲ್ಲಿ ಅಂದಿನ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದ ಜಯವಿಭವಸ್ವಾಮಿಯವರು ಎಲ್ಲಾ 21 ಅಂಗಡಿ ಮಳಿಗೆಗಳನ್ನು ಮುಚ್ಚಿ ಬೀಗ ಜಡಿದರು.
ಇದಾಗಿ ಅವರ ನಿರ್ಗಮನದ ತರುವಾಯ ಐದಾರು ತಿಂಗಳ ನಂತರದಲ್ಲಿ ಬಂದ ಪ್ರಾಧಿಕಾರದ ಕಾರ್ಯದರ್ಶಿ ಮತ್ತಿತರೆ ಆಯಕಟ್ಟಿನ ಅಧಿಕಾರಿಗಳನ್ನು ಸರಿಪಡಿಸಿಕೊಂಡ ವರ್ತಕರು ಮುಚ್ಚಿದ ಮಳಿಗೆ ಮುಚ್ಚಿದ ಹಾಗೆ ಇದ್ದರೂ ಅದರ ಮುಂದೆ ಮೇಲ್ಛಾವಣಿ ಅಳವಡಿಸಿಕೊಂಡು ಎಂದಿನಂತೆ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಪಾತ್ರೆ ಪಗಡೆ, ಮಿಠಾಯಿ, ಪ್ಯಾನ್ಸಿ ಸ್ಟೋರ್, ಹೋಟೆಲ್, ದಿನಸಿ ಅಂಗಡಿ ಹೀಗೆ ಸಾಮಾನು ಸರಂಜಾಮುಗಳನ್ನು ಪೇರಿಸಿಕೊಂಡು ಅಕ್ರಮ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು.
ಇದು ಅಂದಿನಿಂದ ಮುಂದುವರೆದು ಸುಮಾರು ಎಂಟು ವರ್ಷಗಳಿಂದ ಇಲ್ಲಿಯ ತನಕ ನಡೆದುಕೊಂಡು ಬರುತ್ತಿದ್ದರೂ ಈ ವಿವಾಧಕ್ಕೆ ತಾರ್ಕಿಕ ಅಂತ್ಯ ಕಾಣಿಸಿದರೆ ಎಲ್ಲಿ ತಮ್ಮ ಆದಾಯಕ್ಕೆ ಕುತ್ತಾಗುವುದೋ ಎಂದು ವಿವಾಧದಲ್ಲೇ ಇರಿಸಿದ ನಂತರದಲ್ಲೂ ಬಂದ ಪ್ರಾಧಿಕಾರದ ಅಧಿಕಾರಿಗಳು ತಮ್ಮ ಆದಾಯವನ್ನು ವೃದ್ದಿಸಿಕೊಳ್ಳುವುದರಲ್ಲಿ ಮಗ್ನರಾಗಿರುವುದಾಗಿ ಗಂಭೀರ ಆರೋಪ ಕೇಳಿಬಂದಿತ್ತು.
ಈ ಬಾಬತ್ತಿನಿಂದಲೇ ಪ್ರಾಧಿಕಾರಕ್ಕೆ ಕೋಟ್ಯಾಂತರ ರೂ ನಷ್ಟವಾಗಿದ್ದು ಅದು ಅಧಿಕಾರಿಗಳ ತಿಜೋರಿ ತುಂಬಿರುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಅನಧಿಕೃತ ಅಂಗಡಿಗಳ ತೆರವು ಓಕೆ..ಅದರ ಬಾಡಿಗೆ ಬಾಬತ್ತು ಕೋಟ್ಯಾಂತರ ರೂ ವಸೂಲಿ ಇಲ್ಲ ಯಾಕೆ..?
ಮಂಗಳವಾರ ಮ.ಬೆಟ್ಟದ ರಂಗಮಂದಿರದ ಮುಂಭಾಗದಲ್ಲಿ ಮುಚ್ಚಿದ್ದ ಅಂಗಡಿ ಮಳಿಗೆಗಳ ಮುಂದೆ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ 21 ಅನಧಿಕೃತ ಅಂಗಡಿಗಳನ್ನು ವಿಳಂಬವಾಗಿಯಾದರೂ ತೆರವುಗೊಳಿಸಿದ ಪ್ರಾಧಿಕಾರದ ಕಾರ್ಯ ಶ್ಲಾಘನೀಯ.ಆದರೆ ನಿರ್ಗಮಿತ ಅಂಗಡಿಗಳವರು ಏಳೆಂಟು ವರ್ಷಗಳಿಂದ ಉಳಿಸಿಕೊಂಡಿರುವ ಕೋಟ್ಯಾಂತರ ರೂಪಾಯಿ ಬಾಡಿಗೆಯನ್ನು ಯಾವ ರೂಪದಲ್ಲಿ ವಸೂಲು ಮಾಡುವರೋ ಎಂಬುದೇ ಇದೀಗ ಯಕ್ಷಪ್ರಶ್ನೆಯಾಗಿದೆ.ಇದರಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಸದರಿ ಅಂಗಡಿಗಳ ಹಿಂಭಾಗವಿದ್ದ 21 ಅಂಗಡಿ ಮಳಿಗೆಗಳಿಗೆ ಇದೀಗ ಟೆಂಡರ್ ನಡೆದಿದ್ದು ನಿರ್ಗಮಿತ ಅಂಗಡಿಗಳವರೇ ಹಳೆಯ ಬಾಡಿಗೆ ನೀಡುವುದನ್ನು ತಪ್ಪಿಸಿಕೊಳ್ಳಲು ಬೇರೆ ತಂತ್ರ ಹೂಡಿದ್ದು ಬೇರೆ ಬೇರೆ ಅವರ ಸಂಬಂಧಿಕರ ಹೆಸರಿನಲ್ಲೆ ತಾವು ಈ ಹಿಂದೆ ಇದ್ದಂತಹ ಅಂಗಡಿ ಮಳಿಗೆಗಳನ್ನೇ ಟೆಂಡರ್ ಪಡೆದುಕೊಂಡಿದ್ದು ಅಲ್ಲೇ ಎಂದಿನಂತೆ ತಮ್ಮ ವ್ಯಾಪಾರ ವಹಿವಾಟು ಮುಂದುವರೆಸುವ ಇರಾದೆ ಹೊಂದಿರುವುದು ಜಗಜಾಹೀರಾಗಿದ್ದು ಇವರುಗಳಿಂದ ಬಾಕಿ ಬಾಡಿಗೆ ವಸೂಲಿಗೆ ಪ್ರಾಧಿಕಾರ ಯಾವ ಕ್ರಮ ಕೈಗೊಳ್ಳುವುದೋ ಇಲ್ಲ ಮೌನ ತಂತ್ರ ಅನುಸರಿಸಿ ಮುಂದೂಡಿಕೊಂಡೇ ಬರುವುದೋ ಕಾದು ನೋಡಬೇಕಿದೆ.
ಕೋಟ್ಯಾಂತರ ಬಾಡಿಗೆ ಹಣ ಭ್ರಷ್ಟಾಚಾರದ ವಿರುದ್ಧ ತನಿಖೆಗೆ ಆಗ್ರಹ..!
ಇಂದು ಮ.ಬೆಟ್ಟದಲ್ಲಿ ತೆರವುಗೊಳಿಸಿದ ಅನಧಿಕೃತ ಅಂಗಡಿಗಳ ಪ್ರಕರಣದಲ್ಲಿ ಪ್ರಾಧಿಕಾರದ ವಿಳಂಬ ಧೋರಣೆ ಹಾಗೂ ಈ ಬಾಡಿಗೆ ಬಾಬತ್ತಿನಿಂದ ಪ್ರಾಧಿಕಾರಕ್ಕೆ ಉಂಟಾಗಿರುವ ಕೋಟ್ಯಾಂತರ ರೂ ಆರ್ಥಿಕ ನಷ್ಟ ಹಾಗೂ ಈ ಅಕ್ರಮಕ್ಕೆ ಅನುವು ಮಾಡಿಕೊಟ್ಟು ಅಕ್ರಮವೆಸಗಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಂಡು ಕ್ರಿಮಿನಲ್ ಪ್ರಕರಣ ದಾಖಲಿಸುವ ಮೂಲಕ ಸೋರಿಕೆಯಾಗಿರುವ ಕೋಟ್ಯಾಂತರ ರೂ ಆರ್ಥಿಕ ನಷ್ಟವನ್ನು ಅವರಿಂದಲೇ ವಸೂಲು ಮಾಡುವಂತೆ ಪ್ರಬುದ್ದ ನಾಗರೀಕರು ಆಗ್ರಹಿಸಿದ್ದಾರೆ.ಕೋಟ್ಯಾಂತರ ರೂಪಾಯಿ ಈ ಬಾಡಿಗೆ ಹಗರಣದ ವಿರುದ್ದ ಸಚಿವ ಸಂಪುಟ ಸಭೆಗೆ ಬರುವ ಮುಖ್ಯ ಮಂತ್ರಿಗಳಿಗೆ ದೂರು ಸಲ್ಲಿಸಲು ಕೆಲ ಕನ್ನಡಪರ ಹಾಗೂ ಇತರೆ ಸಂಘಟನೆಗಳವರು ತಯಾರಿ ನಡೆಸುತ್ತಿರುವುದರ ಬಗ್ಗೆಯೂ ಪತ್ರಿಕೆಗೆ ಮಾಹಿತಿ ಲಭ್ಯವಾಗಿದೆ.