
ಬೆಂಗಳೂರು, ಏಪ್ರಿಲ್ 1: ದುಬಾರಿ ದುನಿಯಾ… ಇಂದಿನಿಂದಲೇ ಕರ್ನಾಟಕ (Karnataka) ಜನರಿಗೆ ಬೆಲೆ ಏರಿಕೆಯ (Price Hike) ಬರೆ ಬೀಳುತ್ತಿದೆ. ಸಾಲು ಸಾಲು ಬೆಲೆ ಏರಿಕೆಯ ಬೆಂಕಿ ಸಾಮಾನ್ಯ ಜನರ ಮತ್ತು ಬಡವರ ಜೇಬು ಸುಡಲಿವೆ. ಹಾಲು, ಮೊಸರು, ವಿದ್ಯುತ್, ಟೋಲ್, ಮುದ್ರಾಂಕ ಶುಲ್ಕ ಸೇರಿ ಅನೇಕ ವಸ್ತುಗಳು ಅಥವಾ ಸೇವೆಗಳ ದರ ಏರಿಕೆ ಜಾರಿಗೆ ಬಂದಿದೆ. ಮತ್ತೊಂದೆಡೆ, ಕಸ ಸಂಗ್ರಹ ಸೆಸ್ ಕೂಡ ಜಾರಿಯಾಗುತ್ತಿದೆ. ಇಂದಿನಿಂದ ಯಾವೆಲ್ಲ ವಸ್ತು, ಸೇವೆಗಳ ದರ ಎಷ್ಟು ಹೆಚ್ಚಳವಾಗಿದೆ ಎಂಬ ಮಾಹಿತಿ ಇಲ್ಲಿದೆ.
ಇಂದಿನಿಂದ ನಂದಿನಿ ಹಾಲಿನ ಎಲ್ಲಾ ಮಾದರಿಯ ಪ್ಯಾಕೆಟ್ ದರ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆಯಾಗಿದೆ. ಜೊತೆಗೆ ಮೊಸರಿನ ದರವೂ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆಯಾಗಿದೆ.
ಇಂದಿನಿಂದ ಪ್ರತಿಯೂನಿಟ್ಗೆ 36 ಪೈಸೆ ವಿದ್ಯುತ್ ದರ ಏರಿಕೆಯಾಗಿದೆ. ಇದರ ಜೊತೆಗೆ ಮಾಸಿಕ ಶುಲ್ಕವೂ 20 ರೂಪಾಯಿ ಹೆಚ್ಚಳವಾಗುತ್ತಿದೆ. ಇದರಿಂದ 120 ರೂಪಾಯಿ ಇದ್ದ ನಿಗದಿತ ಶುಲ್ಕ, 140 ರೂಪಾಯಿಗೆ ಏರಿಕೆಯಾಗಲಿದೆ. ಗೃಹಜ್ಯೋತಿ ಬಳಕೆದಾರರು 200 ಯೂನಿಟ್ ದಾಟಿದರೆ, ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಹಾಲು, ವಿದ್ಯುತ್ ಜೊತೆ ರಾಜಧಾನಿ ಬೆಂಗಳೂರಿನ ಜನರಿಗೆ ಕಸದ ಸಂಗ್ರಹದ ಸೆಸ್ ಹೆಚ್ಚಳ ಮಾಡಿರುವುದು ಶಾಕ್ ಕೊಡಲಿದೆ. ವಸತಿ ಕಟ್ಟಡಗಳಿಗೆ 600 ಚದರಡಿವರೆಗೆ 10 ರೂಪಾಯಿ ಸೆಸ್ ಇರಲಿದ್ದು, 601 ರಿಂದ ಸಾವಿರ ಚದರಡಿವರೆಗೆ 50 ರೂಪಾಯಿ ಇರಲಿದೆ. ಇನ್ನು 1001 ರಿಂದ 2 ಸಾವಿರ ಚದರಡಿವರೆಗೂ 100 ರೂಪಾಯಿ, 2001 ರಿಂದ 3000 ಚದರಡಿವರೆಗೂ 150 ರೂಪಾಯಿ, 3001-4000 ಚದರಡಿ 200 ರೂಪಾಯಿ ಇರಲಿದೆ. ಇನ್ನು 4000 ಚದರಡಿ ಮೇಲ್ಪಟ್ಟು ಇದ್ರೆ, 400 ರೂಪಾಯಿ ಕಸದ ಸೆಸ್ ಕೊಡಬೇಕಾಗುತ್ತದೆ.ವಸತಿ ಕಟ್ಟಡದ ದರ ಒಂದು ರೀತಿಯಾಗಿದ್ರೆ,ವಾಣಿಜ್ಯ ಕಟ್ಟಡಗಳ ಕಸದ ಸಂಗ್ರಹ ಸೆಸ್ ಕೆಜಿ ರೂಪದಲ್ಲಿ ಇರಲಿದೆ. ಯಾವುದೇ ಒಂದು ವಾಣಿಜ್ಯ ಕಟ್ಟಡದಲ್ಲಿ ನಿತ್ಯ 5 ಕೆಜಿ ಕಸ ಸಂಗ್ರಹ ಮಾಡಿದರೆ ಅದಕ್ಕೆ 500 ರೂಪಾಯಿ ಕೊಡಬೇಕಾಗುತ್ತದೆ. ಇನ್ನು 10 ಕೆಜಿ ಕಸಕ್ಕೆ 1,400ರೂಪಾಯಿ ಇರಲಿದೆ. 25 ಕೆಜಿ ಕಸಕ್ಕೆ 3 ಸಾವಿರ 500 ರೂಪಾಯಿ ಆದ್ರೆ, ನಿತ್ಯ 50 ಕೆಜಿ ಕಸ ಇದ್ರೆ 7,000ರೂಪಾಯಿ ಇರಲಿದೆ. ಇನ್ನು 100 ಕೆಜಿ ಕಸಕ್ಕೆ ಭರ್ತಿ 14 ಸಾವಿರ ರೂಪಾಯಿ ಇರಲಿದೆ.
ಇಂದಿನಿಂದ ಉಕ್ಕು, ವಾಹನಗಳ ಬಿಡಿಭಾಗಳ ಆಮದು, ಉಕ್ಕುಗಳ ಆಮದು ದರ ಹೆಚ್ಚಾಗುತ್ತಿದೆ. ಇದರ ಪರಿಣಾಮ ಇಂದಿನಿಂದ ಹೊಸ ವಾಹನ ಖರೀದಿಸಿದರೆ ಬೆಲೆ ಹೆಚ್ಚು ತೆರಬೇಕಾಗುತ್ತದೆ.
ಮುದ್ರಾಂಕ ಶುಲ್ಕ 50 ರೂಪಾಯಿಯಿಂದ 500 ರೂಪಾಯಿಗೆ ಏರಿಕೆ ಆಗಲಿದ್ದು, ಅಫಿಡವಿಟ್ ಶುಲ್ಕ 20 ರೂಪಾಯಿಯಿಂದ 100 ರೂಪಾಯಿಗೆ ಏರಿಕೆ ಆಗುತ್ತಿದೆ.
ಇನ್ನು ಹೆದ್ದಾರಿ ಪ್ರಾಧಿಕಾರ ಕೂಡ ಟೋಲ್ ದರವನ್ನು ಶೇಕಡಾ 3 ರಿಂದ 5 ರಷ್ಟು ಹೆಚ್ಚಳ ಮಾಡುತ್ತಿದ್ದು, ಇಂದಿನಿಂದಲೇ ಜಾರಿಗೆ ಬರುತ್ತಿದೆ. ರಾಜ್ಯದ ಒಟ್ಟು 66 ಟೋಲ್ ಪ್ಲಾಜಾಗಳಲ್ಲಿನ ದರ ಏರಿಕೆ ವಾಹನ ಸವಾರರಿಗೆ ಬಿಸಿ ತಟ್ಟಲಿದೆ.
ಈ ಮಧ್ಯೆ ಇಂಧನ ಇಲಾಖೆಯ ಡಿಪಾರ್ಟ್ಮೆಂಟ್ ಆಫ್ ಎಲೆಕ್ಟ್ರಿಲ್ ಇನ್ಸ್ಪೆಕ್ಟೋರೇಟ್ ಸಹ, ಮನೆಯ ಲಿಫ್ಟ್ ಪರಿಶೀಲನೆ ಮತ್ತು ರಿನಿವಲ್ ಹಾಗೂ ಟ್ರಾನ್ಸ್ಫಾರ್ಮರ್ ಪರಿಶೀಲನೆ ಮತ್ತು ರಿನಿವಲ್ ಮಾಡುವ ಶುಲ್ಕವನ್ನು ದುಪಟ್ಟು ಹೆಚ್ಚಿಸಿದೆ.
ಮನೆ 3 ಫ್ಲೋರ್ ಇದ್ದು ಲಿಫ್ಟ್ ಬಳಸುತ್ತಿದ್ದರೆ, ಅದರ ಪರಿಶೀಲನೆ ಮತ್ತು ರಿನಿವಲ್ಗೆ ಈವರೆಗೆ 800 ರೂಪಾಯಿಯಿಂದ 1 ಸಾವಿರ ರೂಪಾಯಿ ಇತ್ತು. ಅದು ಈಗ 5 ಸಾವಿರ ರೂಪಾಯಿಯಿಂದ 8 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ. ಫ್ಲೋರ್ಗಳು ಏರಿಕೆಯಾದಂತೆ ದರವೂ ಹೆಚ್ಚಾಗಲಿದೆ.
ಇನ್ನು ಮನೆ, ಕಚೇರಿ ಹಾಗೂ ಫ್ಯಾಕ್ಟರಿಗಳ 25 ಕೆವಿಎ ಟ್ರಾನ್ಸ್ಫಾರ್ಮರ್ ಪರಿಶೀಲನೆ ಮತ್ತು ರಿನಿವಲ್ಗೆ ಸದ್ಯ 1,300 ರೂಪಾಯಿಂದ 1500 ರೂಪಾಯಿ ಇದೆ. ಇದು ಇಂದಿನಿಂದ 3 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ. ಈ ಬೆಲೆ ಏರಿಕೆಗೆ FKCCI ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಲೆ ಏರಿಕೆ ವಿರುದ್ಧ ಬಿಜೆಪಿ ಕಿಡಿಕಾರಿದೆ. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬುಧವಾರ ಮತ್ತು ಏಪ್ರಿಲ್ 5ಕ್ಕೆ ರಾಜ್ಯದ ಎಲ್ಲಾ, ಜಿಲ್ಲೆ, ತಾಲೂಕುಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
ಒಟ್ಟಿನಲ್ಲಿ ಮೊದಲೇ ಬೆಲೆ ಏರಿಕೆಯಿಂದ ಬಸವಳಿದ ಜನರಿಗೆ ಇಂದಿನಿಂದ ಜಗತ್ತು ಮತ್ತಷ್ಟು ದುಬಾರಿಯಾಗುವುದು ನಿಶ್ಚಿತವಾಗಿದೆ.