
ರೈತರ ಭೂಮಿ ಉಳಿಸಿಕೊಳ್ಳಲು ಕಳೆದ 1180 ದಿನಗಳಿಂದ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿರುವ ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ ಸಮಿತಿ ಬುಧವಾರ ಕರೆ ನೀಡಿದ್ದ ದೇವನಹಳ್ಳಿ ಚಲೋಗೆ ಭಾರಿ ಸ್ಪಂದನೆ ವ್ಯಕ್ತವಾಯಿತು. ನಾನಾ ರೈತಪರ ಸಂಘಟನೆಗಳು ಸೇರಿದಂತೆ ಸಾಹಿತಿ, ಚಿಂತಕರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಎರಡು ಸಾವಿರಕ್ಕೂ ಹೆಚ್ಚು ರೈತರು ಚಲೋದಲ್ಲಿ ಭಾಗಿಯಾಗಿದ್ದರು.
ಸಾವಿರಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿರುವ ರೈತರ ಮನವೊಲಿಸುವ ಪ್ರಯತ್ನ ಮಂಗಳವಾರ ನಡೆಯಿತು. ಮಂಗಳವಾರ ಸಂಜೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಜಂಟಿ ಸುದ್ದಿಗೋಷ್ಠಿ ನಡೆಸಿ ಮೂರು ಹಳ್ಳಿಗಳ ರೈತರ ಜಮೀನನ್ನು ಭೂಸ್ವಾದೀನದಿಂದ ಕೈಬಿಟ್ಟು ಉಳಿಕೆ ಜಮೀನು ಕೈಗಾರಿಕಾ ಉದ್ದೇಶಕ್ಕೆ ವಶಪಡಿಸಿಕೊಳ್ಳಲಾಗುವುದು. ಜಮೀನು ವಶಕ್ಕೆ ಪಡೆದ ರೈತರಿಗೆ ಅಭಿವೃದ್ಧಿ ಪಡಿಸಿದ ಜಾಗದಲ್ಲಿ 10,781 ಚದರ ಅಡಿ ಜಾಗ ಹಾಗೂ ಪರಿಹಾರ ನೀಡಲಾಗುವುದು. ದೇವನಹಳ್ಳಿ ಚಲೋ ಹೋರಾಟವನ್ನು ಕೈಬಿಡುವಂತೆ ಮನವಿ ಮಾಡಿದ್ದರು.
ಸಚಿವರ ಮನವಿಯನ್ನು ತಿರಸ್ಕರಿಸಿರುವ ರೈತರು ಚನ್ನರಾಯಪಟ್ಟಣದ 13 ಹಳ್ಳಿಗಳ 1777 ಎಕರೆ ಜಮೀನನ್ನು ಭೂಸ್ವಾದೀನದಿಂದ ಕೈಬಿಡುವಂತೆ ದೇವನಹಳ್ಳಿ ಚಲೋಗೆ ಕರೆಕೊಟ್ಟಿದ್ದು ಅದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸಂಯುಕ್ತ ಹೋರಾಟ ಕರ್ನಾಟಕ ಸಂಯೋಜಕ ಬಡಗಲಪುರ ನಾಗೇಂದ್ರ ಮಾತನಾಡಿ, ಸರಕಾರದ ಒಡೆದಾಳುವ ನೀತಿಯನ್ನು ಖಂಡಿಸಿದರು. ಚನ್ನರಾಯಪಟ್ಟಣದ ಶೇ.99ರಷ್ಟು ರೈತರು ಭೂಮಿ ನೀಡಲು ನಿರಾಕರಿಸಿದ್ದಾರೆ. ದೇಶದಲ್ಲಿ ಶೇ.60ರಷ್ಟು ರೈತರಿದ್ದಾರೆ. ಅದನ್ನು ಶೇ.20ಕ್ಕೆ ಇಳಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮುಂದಾಗಿವೆ. ಸಿದ್ದರಾಮಯ್ಯನವರು ಪ್ರತಿಪಕ್ಷದ ನಾಯಕರಾಗಿದ್ದಾಗ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ. ಸರಕಾರ ರೈತರ ಬಾಳಿನ ಜತೆ ಚೆಲ್ಲಾಟ ಆಡುತ್ತಿದೆ. ರೈತ ಕುಲವನ್ನು ನಿರ್ವಂಶ ಮಾಡಲು ಸರಕಾರ ಹೊರಟಿದೆ. ರೈತರ ತಂಟೆಗೆ ಬಂದ ಸರಕಾರಗಳು ಉಳಿಯುವುದಿಲ್ಲ, ಸಚಿವ ಎಂ.ಬಿ.ಪಾಟೀಲ್ ಕುರ್ಚಿ ಮುರಿಯುತೇವೆ ಎಂದರು.
ನಟ ಪ್ರಕಾಶ್ರಾಜ್ ಮಾತನಾಡಿ, ಸಿಎಂ, ಎಂ.ಬಿ.ಪಾಟೀಲರೆ ಏನು ಮಾಡುತ್ತಿದ್ದೀರಿ?, ಒಬ್ಬ ಮನುಷ್ಯನಿಗೆ ಒಂದೆರಡು ಬಾರಿ ಹೇಳಬಹುದು. ನಾವು ನಿಮ್ಮ ವಿರುದ್ಧ ಮೂರು ವರ್ಷ ಬಾಯಿ ಬಡ್ಕೊಬೇಕಾ? ನಿಮಗೆ ಅರ್ಥ ಆಗಬೇಕು. 13 ಹಳ್ಳಿಯ ಹೆಣ್ಣು ಮಕ್ಕಳು ಅಲ್ಲಿನ ಮಣ್ಣನ್ನು ತಂದು ಗಿಡಕ್ಕೆ ಹಾಕಿ, ನಾವು ಮಣ್ಣನ್ನು ಮಾರುವುದಿಲ್ಲಎಂದು ಹೇಳುತ್ತಿದ್ದಾರೆ. ನಿಮಗೆ ಧಿಕ್ಕಾರ ಹಾಕುವ ಸಮಯ ತುಂಬಾ ದೂರ ಇಲ್ಲ. ಸಿದ್ದರಾಮಯ್ಯನವರೇ? ಜನಪರ, ರೈತರ ಪರ ಅಂತೀರಿ. ಇದೇ ಹೋರಾಟದ ಮಧ್ಯೆ ಪ್ರತಿಪಕ್ಷದ ನಾಯಕರಾಗಿದ್ದಾಗ, ಬೆಂಬಲ ಸೂಚಿಸಿದ್ದಿರಿ. ಮಾತು ಕೊಟ್ಟಿದ್ದೀರಿ ಕೊಟ್ಟಮಾತನ್ನು ಉಳಿಸಿಕೊಳ್ಳಿ. ರೈತರು ಭೂಮಿಯನ್ನು ಮಾರುವುದಿಲ್ಲ. ಈ ರೈತರ ಜತೆಗೆ ಇಲ್ಲೇ ಮಲಗುತ್ತೇನೆ. ಜೈಲಿಗೆ ಹಾಕುವುದಾದರೆ ಹಾಕಿ, ಬೇಲ್ ಕೂಡ ತೆಗೆದುಕೊಳ್ಳುವುದಿಲ್ಲಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್ ಮಾತನಾಡಿ, ಸ್ವಾತಂತ್ರ್ಯಾ ನಂತರ ಈ ದೇಶ ವಿರುದ್ಧ ದಿಕ್ಕಿಗೆ ಹೊರಟಿದೆ. ರಾಷ್ಟ್ರೀಕರಣದ ಕನಸ್ಸನ್ನು ಕಂಡದ್ದು, ಆದರೆ ಇಂದು ಖಾಸಗೀಕರಣದ ಪರವಾಗಿ ಹೊರಟಿದೆ. ಖಾಸಗಿ ಬಂಡವಾಳಶಾಹಿಗಳ ಕಂಪೆನಿಗಳು ಇಂದು ಸರಕಾರಗಳನ್ನು ರಚನೆ ಮಾಡುತ್ತಿವೆ. ಸರಕಾರಗಳು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿವೆ. ದೇಶದ ರೈತ ಸೋಲಬಾರದು ಎಂದು ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಇಂದು ರಾಹುಲ್ ಗಾಂದಿ ಸಂವಿಧಾನ ಉಳಿಸಿ ಎಂದು ದೇಶ ಸುತ್ತಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ಏನು ಮಾಡುತ್ತಿದ್ದಾರೆ? ಸಿದ್ದರಾಮಯ್ಯ ಐದು ಗ್ಯಾರಂಟಿಗಳನ್ನು ನೀಡಿದ್ದಾರೆ. 6ನೇ ಗ್ಯಾರಂಟಿಯಾಗಿ ಚನ್ನರಾಯಪಟ್ಟಣ ಭೂ ಸ್ವಾಧೀನ ಮಾಡುವುದಿಲ್ಲಎಂದು ಘೋಷಿಸಬೇಕು ಎಂದು ಹೇಳಿದರು.
ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ನಮ್ಮ ಮಾತು ಹೃದಯಹೀನ ಸರಕಾರಕ್ಕೆ ಕೇಳಬೇಕು. ಪ್ರತಿದಿನ ಹೊಟ್ಟೆಗೆ ಹಾಕುವ ಅನ್ನವನ್ನು ನೆನಪಿಸಿಕೊಳ್ಳಿ. ಪ್ರತಿ ಅನ್ನದ ಹಿಂದೆ ರೈತನ ಶ್ರಮವಿದೆ. ಇದನ್ನು ನೀವು ಅರಿವಿಗೆ ತಂದುಕೊಂಡರೆ ನೀವು ಈ ರೀತಿಯಾಗಿ ನಡೆದುಕೊಳ್ಳುವುದಿಲ್ಲ. ಅರಸು ಅವರ ಕಾಲದಲ್ಲಿರೈತರಿಗೆ ಭೂಮಿಯನ್ನು ನೀಡಿದ್ದರು, ಆದರೆ ನೀವು ರೈತರ ಭೂಮಿಯನ್ನು ಕಸಿದುಕೊಳ್ಳು್ಳತ್ತಿದ್ದೀರಿ. ರೈತರು ಒಂದಾಗಿ ಬಾಳಬೇಕು. ಅದಕ್ಕಾಗಿ ರೈತರಿಂದ ಕಿತ್ತುಕೊಂಡ ಭೂಮಿಯನ್ನು ವಾಪಸ್ ನೀಡಬೇಕು ಎಂದರು.ಸಂಯುಕ್ತ ಕರ್ನಾಟಕದ ನಾಯಕಿ ಎಸ್. ವರಲಕ್ಷ್ಮಿ ಮಾತನಾಡಿ, ಭೂಮಿಯನ್ನು ಕೊಡಿ ಎಂದು ಹಲವಾರು ವರ್ಷಗಳಿಂದ ರೈತರು ಚಳವಳಿ ಮಾಡುತ್ತಲೇ ಬಂದಿದ್ದಾರೆ. ಆದರೆ ಈಗ ರೈತರು ನಮ್ಮ ಭೂಮಿ ಕಿತ್ತುಕೊಳ್ಳಬೇಡಿ ಎಂದು ಹೋರಾಟ ನಡೆಸುವ ಸಂದರ್ಭ ಬಂದಿದೆ. ಇದಕ್ಕಿಂತ ಕೆಟ್ಟ ಪರಿಸ್ಥಿತಿ ಏನಿದೆ. ಈ ಬಗ್ಗೆ ಕೇಳಲು ಹೋದರೆ ಕೈಗಾರಿಕೆಗಳು ಬರಬೇಕು ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ರಾಜ್ಯದಲ್ಲಿಶೇ 80 ಕೆಲಸಗಾರರು ಕಾಯಂ ಉದ್ಯೋಗಿಗಳು ಇಲ್ಲ, ಹೊರಗುತ್ತಿಗೆ ಆಧಾರದಲ್ಲಿಕೆಲಸ ಮಾಡುತ್ತಿದ್ದಾರೆ. ಭೂಮಿ ಕಿತ್ತುಕೊಳ್ಳುವಾಗ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಎಂದು ಹೇಳುತ್ತಿದ್ದಾರೆ. ಆದರೆ ಯಾವುದೇ ಉದ್ಯೋಗ ಸಿಗುತ್ತಿಲ್ಲಎಂದರು.ಚನ್ನರಾಯಪಟ್ಟಣ ಭೂಸ್ವಾದೀನ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳು, ನಟ ಮುಖ್ಯಮಂತ್ರಿ ಚಂದ್ರು, ಇಂದಿರಾ ಕೃಷ್ಣಪ್ಪ, ಕಾರಹಳ್ಳಿ ಶ್ರೀನಿವಾಸ್, ಶಿವಾನಂದ್, ಶಿವಪ್ರಸಾದ್, ತಾರಾರಾಮ್, ಚಂದ್ರಜೇಜಸ್ವಿ, ಸಾಹಿತಿಗಳು ಚಿಂತಕರು, ನಾನಾ ರೈತ ಪರ ಸಂಘಟನೆಯ ಮುಖಂಡರು, ರೈತರು ಇದ್ದರು.


