ವಿಧಾನಸಭೆ
Trending

ಆದಾಯ ಸಂಗ್ರಹಕ್ಕೆ ಸಂಪುಟದ ಮಹತ್ವದ ನಿರ್ಧಾರ

ಬೆಂಗಳೂರು : ಸಂಪನ್ಮೂಲ ಕ್ರೋಡೀಕರಣ ದೃಷ್ಟಿಯಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ನೀಡಿ ಆಸ್ತಿ ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಪಂಚಾಯಿತಿಗಳಿಗೆ ವಾರ್ಷಿಕ ಸಾವಿರಾರು ಕೋಟಿ ರೂ. ತೆರಿಗೆ ಸಂಗ್ರಹಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯಿತಿ ರಾಜ್‌ (ತಿದ್ದುಪಡಿ) ವಿಧೇಯಕ -2025’ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಉದ್ದೇಶಿತ ವಿಧೇಯಕಕ್ಕೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತು.ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಯಲ್ಲಿರುವಂತೆ ಗ್ರಾಮೀಣ ಪ್ರದೇಶಗಳಲ್ಲೂ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಬಡಾವಣೆಗಳು, ನಿವೇಶನಗಳು, ಕಟ್ಟಡಗಳಿಗೆ ‘ಬಿ-ಖಾತಾ’ ನೀಡಿ ಆಸ್ತಿ ತೆರಿಗೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಸರಕಾರ ಮಹತ್ವದ ಹೆಜ್ಜೆ ಇಟ್ಟಿದೆ.ಅನಧಿಕೃತ ಬಡಾವಣೆಗಳ ರಚನೆ ತಡೆಗಟ್ಟಲು ಇ-ಸ್ವತ್ತು ತಂತ್ರಾಂಶವನ್ನು 2013 ರ ಜೂ. 15 ರಿಂದ ಜಾರಿಗೊಳಿಸಿದ್ದು, ಪಂಚತಂತ್ರ ತಂತ್ರಾಂಶದಲ್ಲಿ 1.40 ಕೋಟಿ ಆಸ್ತಿಗಳ ವಿವರ ನಮೂದಾಗಿದೆ. ಆದರೆ ಇ-ಸ್ವತ್ತು ತಂತ್ರಾಂಶದಲ್ಲಿ 40 ಲಕ್ಷ ಆಸ್ತಿಗಳಷ್ಟೇ ನೋಂದಣಿಯಾಗಿದ್ದು, ಬಾಕಿ 96 ಲಕ್ಷ ಆಸ್ತಿಗಳು ಇ-ಸ್ವತ್ತು ವ್ಯಾಪ್ತಿಯಿಂದ ಹೊರಗಿವೆ.ಸದ್ಯ ಇ-ಸ್ವತ್ತು ವ್ಯಾಪ್ತಿಯಲ್ಲಿರುವ 40 ಲಕ್ಷ ಆಸ್ತಿಗಳ ಪೈಕಿ 34 ಲಕ್ಷ ಆಸ್ತಿಯಿಂದ 800 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಬಾಕಿ 96 ಲಕ್ಷ ಆಸ್ತಿಗಳು ಬಿ- ಖಾತಾ ಪಡೆದರೆ ಪಂಚಾಯಿತಿಗಳಿಗೆ ಎರಡು- ಮೂರು ಪಟ್ಟು ಆಸ್ತಿ ತೆರಿಗೆ ಹೆಚ್ಚಾಗಲಿದೆ.ಈ ತೀರ್ಮಾನಕ್ಕೆ ಪೂರಕವಾಗಿ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಕಾಯಿದೆಗೆ ಸೆಕ್ಷನ್‌ 199(ಬಿ) ಮತ್ತು 199(ಸಿ) ಸೇರ್ಪಡೆ ಮೂಲಕ ಇದೇ ವಿಧಾನಮಂಡಲ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ವಿಧೇಯಕ ಮಂಡನೆ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮೂಲಗಳಿಂದ ಖಚಿತಪಟ್ಟಿದೆ.

Related Articles

Leave a Reply

Your email address will not be published. Required fields are marked *

Back to top button