ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿರುವ ಕೌನ್ಸಿಲ್ ಕಟ್ಟಡದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆಯ ಕುರಿತು ಸ್ಪಷ್ಠೀಕರಣ: ಡಾ. ನಿರ್ಮಲಾ ಬುಗ್ಗಿ

ಬೆಂಗಳೂರು: ಮಾ. 06: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗೋವಿಂದರಾಜ ನಗರದ ಎಂ.ಸಿ ಲೇಔಟ್ ನಲ್ಲಿರುವ ಬಿ.ಜಿ.ಎಸ್ ಆಸ್ಪತ್ರೆಯಲ್ಲಿ ವಿಜಯ ನಗರದ ನಿವಾಸಿಯಾದ ಶ್ರೀಮತಿ ಉಮಾ ಮಹೇಶ್ವರಿ ಎಂಬುವರು 16ನೇ ಆಗಸ್ಟ್ 2024 ರಂದು ಚಿಕಿತ್ಸೆಗಾಗಿ ತೆರಳಿದ್ದು, ಅಲ್ಲಿ ನೀಡಿರುವ ಔಷಧಗಳಿಂದ ನನಗೆ ಸಮಸ್ಯೆಯಾಗಿದೆ ಅದಕ್ಕಾಗಿ ಪರಿಹಾರ ನೀಡುತ್ತಿಲ್ಲವೆಂದು ಇಂದು ಪಾಲಿಕೆ ಕೇಂದ್ರ ಕಛೇರಿಯ ಕೌನ್ಸಿಲ್ ಸಭಾಂಗಣದ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಮುಂದುವರಿದು, ಎಂ.ಸಿ ಲೇಔಟ್ ನಲ್ಲಿರುವ ಆಸ್ಪತ್ರೆಗೆ ಕಳೆದ ವರ್ಷ 16ನೇ ಆಗಸ್ಟ್ 2024 ರಂದು ತಲೆನೋವು, ಮೈಕೈ ನೋವು ಎಂದು ಚಿಕಿತ್ಸೆಗೆ ತೆರಳಿದ್ದಾಗ, ವೈದ್ಯರು ಚಿಕಿತ್ಸೆ ನೀಡಿ ಕಳುಹಿಸಿರುತ್ತಾರೆ. ಅದಾದ ಬಳಿಕ 8 ದಿನಗಳ ನಂತರ 24ನೇ ಆಗಸ್ಟ್ 2024 ಮತ್ತೆ ಸದರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿರುತ್ತಾರೆ. ಆಗಲೂ ವೈದ್ಯರು ಚಿಕಿತ್ಸೆ ನೀಡಿ ಕಳುಹಿಸಿರುತ್ತಾರೆ.
ಅದಾದ ಬಳಿಕ ವಿಕ್ಟೋರಿಯಾ, ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮೇಲ್ನೋಟಕ್ಕೆ ಆ ಮಹಿಳೆಯು ಮಾನಸಿಕ ಖಿನ್ನತೆಗೆ ಒಳಗಾಗಿರುವುದು ಕಂಡು ಬಂದಿದೆ. ಚಿಕಿತ್ಸೆಯ ಬಳಿಕ ಹಲವು ಬಾರಿ ಸರ್ಕಾರಿ ಕಛೇರಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ತೆರಳಿ ಪರಿಹಾರ ನೀಡುವಂತೆ ಒತ್ತಾಯಿಸಿರುತ್ತಾರೆ.(ಪ್ರತಿ ಲಗತ್ತಿಸಿದೆ) ಜೀವನಾಂಶ ನೀಡುವವರೆಗೂ ತೆರಳುವುದಿಲ್ಲ ಹಾಗೂ ಓಲಾ ಚಾರ್ಜ್ ಸೇರಿದಂತೆ ಇನ್ನಿತರೆ ವಿಚಾರಗಳಿಗೆ ಹಣ ನೀಡಲು ಅಧಿಕಾರಿಗಳಲ್ಲಿ ಒತ್ತಾಯಿಸಿರುತ್ತಾರೆ.
ಶ್ರೀಮತಿ ಉಮಾ ಮಹೇಶ್ವರಿ ರವರಿಗೆ ಎಂ.ಸಿ ಲೇಔಟ್ ನಲ್ಲಿ ಚಿಕಿತ್ಸೆ ನೀಡಿರುವ ವಿಚಾರವಾಗಿ ವೈದ್ಯಕೀಯ ತನಿಕಾ ತಂಡವು ಈಗಾಗಲೇ ಪ್ರಥಮ ವಿಚಾರಣೆ ನಡೆಸಿದ್ದು, ಇದರಿಂದ ಯಾವುದೇ ಲೋಪವಾಗಿರುವುದಿಲ್ಲ ಎಂದು ವರದಿ ನೀಡಿರುತ್ತಾರೆ. ಈ ಪ್ರಕರಣಕ್ಕೂ ಬಿಬಿಎಂಪಿಗೆ ಯಾವುದೇ ಸಂಬಂಧವಿರುವುದಿಲ್ಲ.
ಸದರಿ ವಿಚಾರವಾಗಿ, ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಮತ್ತೊಂದು ಸುತ್ತಿನ ತನಿಖೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆರೋಗ್ಯಾಧಿಕಾರಿ(ಕ್ಲಿನಿಕಲ್) ಆದ ಡಾ. ನಿರ್ಮಲಾ ಬುಗ್ಗಿ ರವರು ಸ್ಪಷ್ಟಪಡಿಸಿದ್ದಾರೆ.