ನಗರಸಭೆ
Trending

ಬೈಲಹೊಂಗಲದಲ್ಲಿ ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನೇ ಮಂಗಮಾಯ!

ಬೆಳಗಾವಿ: ಕರ್ನಾಟಕ ರಾಜ್ಯಪಾಲರ (Karnataka Governor) ಹೆಸರಿನಲ್ಲಿರುವ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲಾಗಿರುವ ಗಂಭೀರ ಪ್ರಕರಣ ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಬಡ ಜನರಿಗೆ ನಿವೇಶನ ಹಂಚಲು ಸರ್ಕಾರವು ಖರೀದಿಸಿದ್ದ ಜಮೀನನ್ನು ಇತ್ತೀಚೆಗೆ ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿಕೊಂಡು ತಿದ್ದುಪಡಿ ಮಾಡುವ ಮೂಲಕ ವಂಚನೆ ಎಸಗಲಾಗಿದೆ. ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ 6 ಎಕರೆ ಜಮೀನನ್ನು 2002ರಲ್ಲಿ ಖರೀದಿಸಿ, ರಾಜ್ಯಪಾಲರ ಹೆಸರಿನಲ್ಲಿ ನೋಂದಣಿ ಮಾಡಲಾಗಿತ್ತು. ಜಮೀನನ್ನು ಬಡ ಜನರಿಗೆ ಹಂಚುವ ಉದ್ದೇಶದಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿತ್ತು.

ಆದರೆ, ಕೆಲವು ವರ್ಷಗಳ ಹಿಂದೆ ಇದೇ ಸರ್ವೇ ನಂಬರ್​​ನ ಜಮೀನಿನ ಪಹಣಿ ಪತ್ರ ಸರಿಪಡಿಸುವ ನೆಪದಲ್ಲಿ ಗೋಲ್​ಮಾಲ್ ಎಸಗಲಾಗಿದೆ. ಜೊತೆಗೆ, ಜಮೀನಿನಲ್ಲಿ ಯಾವುದೇ ಅನುಮತಿ ಇಲ್ಲದೆ ಖಾಸಗಿ ವ್ಯಕ್ತಿಗಳ ಹೆಸರು ಸೇರ್ಪಡೆ ಮಾಡಲಾಗಿದೆ ಎಂದು ಆರ್​​ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಗಂಭೀರ ಆರೋಪ ಮಾಡಿದ್ದಾರೆ.ಪಹಣಿ ತಿದ್ದುಪಡಿಯ ಸಮಯದಲ್ಲಿ, ರಾಜ್ಯಪಾಲರ ಹೆಸರಿನ 6 ಎಕರೆ ಜಮೀನಿನಲ್ಲಿ 35 ಗುಂಟೆ ಮಾತ್ರ ಉಳಿಸಿಕೊಂಡು ಉಳಿದ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಭೀಮಪ್ಪ ಗಡಾದ್ ಆರೋಪಿಸಿದ್ದಾರೆ.ಆಗಿನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮತ್ತು ಬೈಲಹೊಂಗಲ ಎಸಿ ಪ್ರಭಾವತಿಯವರು ತಿದ್ದುಪಡಿ ಕಾರ್ಯದಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಡಾದ್ ಆಗ್ರಹಿಸಿದ್ದಾರೆ.

ಅಕ್ರಮ ಸಂಬಂಧ ಪ್ರತಿಕ್ರಿಯೆ ನೀಡಿರುವ ಪ್ರಭಾವತಿ, ಯಾವುದೇ ತಪ್ಪೆಸಗಿಲ್ಲ ಎಂದಿದ್ದಾರೆ. 2023ರಲ್ಲಿ ಡಿಸಿ ಅವರಿಗೆ ಫೈಲ್ ಕಳುಹಿಸಿದ್ದೇನೆ. ಯಾವುದನ್ನೂ ತಿದ್ದಪಡಿ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ, ರಾಜ್ಯಪಾಲರ ಅನುಮತಿ ಪಡೆಯದೇ ಆಗಿನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರೇ ಪೋಡಿ ಮಾಡಿದ್ದರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಆಗಿನ ಡಿಸಿ ನಿತೇಶ್ ಪಾಟೀಲ್ ಅವರೇ ಕಾನೂನು ಬಾಹಿರವಾಗಿ ರಾಜ್ಯಪಾಲರ ಜಮೀನನ್ನೇ ಪೋಡಿ ಮಾಡಿದ್ದಾರೆ ಎಂದು ಭೀಮಪ್ಪ ಗಡಾದ್ ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ, ರಾಜ್ಯಪಾಲರ ಹೆಸರಿನ ಜಮೀನಿಗೇ ಕನ್ನ ಹಾಕಿರುವ ಈ ಪ್ರಕರಣ ಸಂಚಲನ ಮೂಡಿಸಿದೆ.

Related Articles

Leave a Reply

Your email address will not be published. Required fields are marked *

Back to top button