
ಬೆಳಗಾವಿ, ಏಪ್ರಿಲ್ 15: ಬೆಳಗಾವಿ (Belagavi) ರೈಲ್ವೆ ನಿಲ್ದಾಣದಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ (Goods train derail) ಕಾರಣ ಸುಮಾರು 4 ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಯಿತು. ಅಪಘಾತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಅದೇ ಮಾರ್ಗವಾಗಿ ರಾಣಿ ಚೆನ್ನಮ್ಮ ರೈಲು ಸಂಚರಿಸುವುದರಲ್ಲಿತ್ತು. ಅಧಿಕಾರಿಗಳ ಸಮಯಪ್ರಜ್ಞೆಯಿಂದ ರಾಣಿ ಚೆನ್ನಮ್ಮ ರೈಲು (Rani Chennamma Train) ನಿಲುಗಡೆಗೊಳಿಸಲಾಯಿತು. ಇದರಿಂದಾಗಿ ಸಂಭಾವ್ಯ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.ಗೂಡ್ಸ್ ರೈಲು ಎರಡು ಗಂಟೆಗಳ ಕಾಲ ವಿಳಂಬವಾಗಿ ಚಲಿಸುತ್ತಿತ್ತು. ಹೀಗಾಗಿ, ಅದಾದ ಬೆನ್ನಲ್ಲೇ ರಾಣಿ ಚೆನ್ನಮ್ಮ ರೈಲು ಆಗಮಿಸುತ್ತಿತ್ತು. ಬೆಳಗ್ಗೆ 8 ಗಂಟೆಗೆ ರಾಣಿ ಚೆನ್ನಮ್ಮ (ಬೆಂಗಳೂರು-ಕೊಲ್ಹಾಪುರ ರೈಲು) ಸಂಚರಿಸಬೇಕಿತ್ತು. ರೈಲು ಬರುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು, ರೈಲನ್ನು ಬೆಳಗಾವಿಯಿಂದ 8 ಕಿ.ಮೀ. ದೂರದಲ್ಲಿರುವ ದೇಸೂರ ನಿಲ್ದಾಣದಲ್ಲಿ ನಿಲುಗಡೆ ಮಾಡಿಸಿದರು.
ಗೂಡ್ಸ್ ರೈಲು ಹಳಿ ತಪ್ಪಿದ ಹಿನ್ನೆಲೆ 5 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೆಂಗಳೂರು-ಕೊಲ್ಹಾಪುರ ರಾಣಿ ಚೆನ್ನಮ್ಮ ರೈಲು, ಮುಂಬೈ-ಹುಬ್ಬಳ್ಳಿ-ದಾದರ್ ಎಕ್ಸ್ಪ್ರೆಸ್ ರೈಲು, ಮುಂಬೈ-ಬೆಂಗಳೂರು ಚಾಲುಕ್ಯ ಎಕ್ಸ್ಪ್ರೆಸ್ ರೈಲು, ಗೋವಾ-ಮಿರಜ್ ಪ್ಯಾಸೆಂಜರ್ ರೈಲು ಹಾಗೂ ಬೆಳಗಾವಿ – ಬೆಂಗಳೂರು – ಮೈಸೂರು ಸಂಚಾರದಲ್ಲಿ ವ್ಯತ್ಯಯವಾಗಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ರೈಲುಗಳ ಸಂಚಾರ ಸ್ಥಗಿತವಾಗುತ್ತಿದೆ ಎಂದು ಅಂದಾಜಿಸಲಾಗಿದೆ.ಗೂಡ್ಸ್ ರೈಲು ಬೆಳಗಾವಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಹಳಿ ತಪ್ಪಿ ಮೂರು ಬೋಗಿಗಳು ಪಕ್ಕಕ್ಕೆ ಜರುಗಿವೆ. ಸ್ಥಳಕ್ಕೆ ರೈಲ್ವೆ ಪೊಲೀಸರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಹಳಿ ತೆರವು ಕಾರ್ಯ ಪ್ರಗತಿಯಲ್ಲಿದ್ದು, ತ್ವರಿತ ಗತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕೆಲವೇ ಕ್ಷಣಗಳಲ್ಲಿ ರೈಲು ಸಂಚಾರ ಸಹಜ ಸ್ಥಿತಿಗೆ ಮರಳಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಒಮ್ಮೆ ಹಳಿ ತೆರವು ಕಾರ್ಯ ಪೂರ್ಣಗೊಂಡ ಕೂಡಲೇ ಬೆಂಗಳೂರು-ಕೊಲ್ಹಾಪುರ ರಾಣಿ ಚೆನ್ನಮ್ಮ ರೈಲು, ಮುಂಬೈ-ಹುಬ್ಬಳ್ಳಿ-ದಾದರ್ ಎಕ್ಸ್ಪ್ರೆಸ್ ರೈಲು, ಮುಂಬೈ-ಬೆಂಗಳೂರು ಚಾಲುಕ್ಯ ಎಕ್ಸ್ಪ್ರೆಸ್ ರೈಲು, ಗೋವಾ-ಮಿರಜ್ ಪ್ಯಾಸೆಂಜರ್ ರೈಲು ಹಾಗೂ ಬೆಳಗಾವಿ – ಬೆಂಗಳೂರು – ಮೈಸೂರು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಉಳಿದಂತೆ, ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲೆ ಎಂದೂ ತಿಳಿಸಿದ್ದಾರೆ.