
ರಾಜ್ಯದಲ್ಲಿ ಮತ್ತೆ ಮಳೆ ಚುರುಕುಗೊಂಡಿದೆ. ಉತ್ತರ ಹಾಗೂ ದಕ್ಷಿಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನ ಮಳೆ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಲರ್ಟ್ ಘೋಷಣೆ: ಉತ್ತರ ಒಳನಾಡಿನಲ್ಲಿ ಇಂದಿನಿಂದ ಮಳೆ ಜೋರಾಗಲಿದೆ. ವಿಜಯಪುರ, ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಬಳ್ಳಾರಿ, ಮೈಸೂರು, ಮಂಡ್ಯ, ತುಮಕೂರು, ಬೆಳಗಾವಿ, ಬೀದರ್, ಗದಗ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ದಕ್ಷಿಣ ಒಳನಾಡು, ಉಡುಪಿ, ಉತ್ತರ ಕನ್ನಡ, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ರಾಮನಗರ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಮಳೆ ವರದಿ: ಮಲೆಮಹದೇಶ್ವರ ಬೆಟ್ಟ, ಟಿ.ಜಿ.ಹಳ್ಳಿ, ಕೋಲಾರ, ಗಂಗಾವತಿ, ಆಳಂದ, ಸೇಡಂ, ಹುಣಸಗಿ, ಅಫ್ಜಲ್ಪುರ, ವಿಜಯಪುರ, ತಾವರಗೇರಾ, ಸಿಂಧನೂರು, ರಾಯಚೂರು, ಮುನಿರಾಬಾದ್, ಮಾನ್ವಿ, ಕಲಬುರಗಿ, ಲಿಂಗಸುಗೂರು, ಕುರ್ಡಿ, ಕೆಂಭಾವಿ, ಇಂಡಿ, ದೇವರಹಿಪ್ಪರಗಿ, ಶೋರಾಪುರ, ನಾಗಮಂಗಲ, ಮಾಗಡಿ, ಕೃಷ್ಣರಾಜಸಾಗರ, ಕೆ.ಆರ್.ನಗರ, ಇಳಕಲ್, ಚಿಂಚೋಳಿ, ಚಿಕ್ಕಬಳ್ಳಾಪುರ, ಭಾಲ್ಕಿ ಹಾಗೂ ಬಸವನಬಾಗೇವಾಡಿಯಲ್ಲಿ ಗುರುವಾರ ಹೆಚ್ಚಿನ ಮಳೆಯಾಗಿದೆ.
ರಾಜಧಾನಿಯ ವಾತಾವರಣ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. ನಗರದಲ್ಲಿ 29.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹೆಚ್ಎಎಲ್ನಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 31.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಅತ್ಯಧಿಕ ಮಳೆ ಎಚ್ಚರಿಕೆ: ದೇಶದ ಹಲವೆಡೆ ಸೆಪ್ಟೆಂಬರ್ ತಿಂಗಳಲ್ಲೂ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇತ್ತೀಚೆಗೆ ಮುನ್ಸೂಚನೆ ನೀಡಿದೆ. ಸಾಮಾನ್ಯವಾಗಿ, ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ 167.9 ಮಿ.ಮೀ ಮಳೆಯಾಗುತ್ತದೆ. ಈ ಬಾರಿ, ಸಾಮಾನ್ಯಕ್ಕಿಂತ ಶೇ.109ರಷ್ಟು ಹೆಚ್ಚಿನ ಮಳೆಯಾಗುವ ಸೂಚನೆಗಳಿವೆ ಎಂದು ತಿಳಿಸಿತ್ತು.
ಈಶಾನ್ಯ ಭಾರತ, ಪೂರ್ವ ಭಾರತ, ದಕ್ಷಿಣ ಭಾರತ ಮತ್ತು ವಾಯುವ್ಯ ಭಾರತದ ಅನೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ದೇಶದ ಉಳಿದ ಭಾಗಗಳಲ್ಲಿ ಸಾಧಾರಣಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಅವರು ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.
ಸೆಪ್ಟೆಂಬರ್ ತಿಂಗಳ ತಾಪಮಾನ ಹೀಗಿರಲಿದೆ: ಭಾರತದಲ್ಲಿ 1980ರಿಂದ ಪ್ರತಿ ವರ್ಷವೂ ಸೆಪ್ಟೆಂಬರ್‌ನಲ್ಲಿ ಮಳೆ ಹೆಚ್ಚುತ್ತಿದೆ. 1986, 1991, 2001, 2004, 2010, 2015 ಮತ್ತು 2019 ವರ್ಷಗಳಲ್ಲಿ ಸೆಪ್ಟೆಂಬರ್‌ನಲ್ಲಿ ಕಡಿಮೆ ಮಳೆ ದಾಖಲಾಗಿದೆ. ಆ ತಿಂಗಳಲ್ಲಿ ಪಶ್ಚಿಮ ಮಧ್ಯ ಭಾರತ, ವಾಯುವ್ಯ ಭಾರತ ಮತ್ತು ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ಮಾಸಿಕ ಸರಾಸರಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದೆ ಎಂದು ಐಎಂಡಿ ಮಹಾನಿರ್ದೇಶಕರು ಹೇಳಿದ್ದರು.


