
ಪ್ರಧಾನಿ ನರೇಂದ್ರ ಮೋದಿ ಇದೇ ಸೆಪ್ಟೆಂಬರ್ 13ರಂದು ಮಿಜೋರಾಂ ಮತ್ತು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಐಜ್ವಾಲ್‌ನಲ್ಲಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲಿಗೆ ಮಿಜೋರಾಂಗೆ ಆಗಮಿಸಲಿರುವ ಪ್ರಧಾನಿ ಮೋದಿ ಅಲ್ಲಿ ನೂತನ ಬೈರಬಿ – ಸೈರಾಂಗ್ ರೈಲ್ವೆ ಯೋಜನೆ ಉದ್ಘಾಟನೆ ಮಾಡಲಿದ್ದಾರೆ. ಈ ಕುರಿತು ಮಿಜೋರಾಂ ಸರ್ಕಾರದ ಹಲವಾರು ಅಧಿಕಾರಿಗಳು ಐಜ್ವಾಲ್‌ನಿಂದ ಪ್ರಧಾನಿ ಮಣಿಪುರಕ್ಕೆ ವಿಮಾನದಲ್ಲಿ ಆಗಮಿಸಲಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ. 2023ರ ಮೇನಲ್ಲಿ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಮಣಿಪುರಕ್ಕೆ ಪ್ರಧಾನಿ ಮೋದಿ ಮೊದಲ ಭೇಟಿ ಇದಾಗಿದೆ.
ಪ್ರಧಾನಿ ಮೋದಿ ಆಗಮನದ ಕುರಿತು ಇನ್ನು ಕೂಡ ಅಂತಿಮ ಪ್ರವಾಸ ಮಾಹಿತಿ ಲಭ್ಯವಾಗಿಲ್ಲ ಎಂದು ಇಂಫಾಲದ ಅಧಿಕಾರಿಗಳು ತಿಳಿಸಿದರೂ, ಅವರ ಆಗಮನವನ್ನು ದೃಢಪಡಿಸಿದ್ದಾರೆ. ಮಿಜೋರಾಂ ಮುಖ್ಯ ಕಾರ್ಯದರ್ಶಿ ಖಿಲ್ಲಿ ರಾಮ್ ಮೀನಾ, ಪ್ರಧಾನಿ ಆಗಮನದ ಹಿನ್ನೆಲೆ ವಿವಿಧ ಇಲಾಖೆ ಮತ್ತು ಕಾನೂನು ಜಾರಿ ಸಂಸ್ಥೆಗಳ ಜೊತೆ ಸಭೆ ನಡೆಸಿದ್ದು, ಸನ್ನದ್ಧತೆ ಕುರಿತು ಚರ್ಚಿಸಿದ್ದಾರೆ.
ಸಭೆಯಲ್ಲಿ ಭದ್ರತಾ ಕ್ರಮ, ಸಂಚಾರ ನಿರ್ವಹಣೆ, ಸ್ವಾಗತ, ರಸ್ತೆ ಅಲಂಕಾರಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಲಾಗಿದೆ. ಜೊತೆಗೆ ಸಭೆಯಲ್ಲಿ ಐಜ್ವಾಲ್‌ನ ಲಮ್ಮೌಲ್‌ನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ನೌಕರರು, ರೈತರು ಮತ್ತು ವಿವಿಧ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ನೀಡುವ ಕುರಿತು ಹಾಗೂ ವ್ಯವಸ್ಥೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
51.38 ಕಿ.ಮೀ ಉದ್ದದ ಈ ರೈಲು ಮಾರ್ಗವು ಕೇಂದ್ರದ ಆಕ್ಟ್ ಈಸ್ಟ್ ನೀತಿಯ ಭಾಗವಾಗಿದ್ದು, ಈಶಾನ್ಯ ಪ್ರದೇಶದಾದ್ಯಂತ ಸಂಪರ್ಕ ಮತ್ತು ಆರ್ಥಿಕ ಏಕೀಕರಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹೊಸ ರೈಲು ಮಾರ್ಗವು ಅಸ್ಸಾಂನ ಸಿಲ್ಚಾರ್ ಪಟ್ಟಣದ ಮೂಲಕ ಐಜ್ವಾಲ್ ಅನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.

