ನಿಷ್ಕ್ರಿಯೆಗೊಂಡಿರುವ ಮೈಸೂರು ರೇಷ್ಮೆ ತಯಾರಕರ ಸಂಘದ ಆಸ್ತಿಗಳ ಸ್ವಾಧೀನಕ್ಕೆ ಸರ್ಕಾರ ಮುಂದಾಗಬೇಕು

ಪ್ರಸ್ತುತ ನಿಷ್ಕ್ರಿಯೆಗೊಂಡಿರುವ ಮೈಸೂರು ರೇಷ್ಮೆ ತಯಾರಕರ ಸಂಘ(ಮೈಸೂರು ಸಿಲ್ಕ್ ಮ್ಯಾನುಫ್ಯಾಕ್ಚರಿಂಗ್ ಅಸೋಸಿಯೇಷನ್- ಪವರ್ಲೂಮ್)ದ ಆಸ್ತಿಗಳನ್ನು ಸ್ವಾಧೀನ ಪಡೆಯುವ ಪ್ರಕ್ರಿಯೆ ಮುಂದುವರೆಸುವ ಕುರಿತು ಗಮನ ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಅಲ್ಲದೆ, ಮೈಸೂರು ರೇಷ್ಮೆ ತಯಾರಿಕರ ಸಂಘಕ್ಕೆ ಹೋಲಿಕೆಯಾಗುವಂತೆ ಮತ್ತೊಂದು ಸಂಘವನ್ನು ರಚಿಸಿ ಆಸ್ತಿಗಳನ್ನು ಕಬಳಿಸಲು ಮುಂದಾಗಿದ್ದ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ರದ್ದುಪಡಿಸಲು ನಿರಾಕರಿಸಿದೆ.
ತಮ್ಮ ವಿರುದ್ಧದ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಆದೇಶಿಸಿರುವ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ದಿವಂಗತ ಹೊಟ್ಟೆ ಪಕ್ಷದ ರಂಗಸ್ವಾಮಿ ಅವರ ಪುತ್ರ ರಾಜೇಂದ್ರ ಪ್ರಸಾದ್ ಮತ್ತಿರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ. ಎಂ. ಖಾಜಿ ಅವರಿಂದ ನ್ಯಾಯಪೀಠ ಅರ್ಜಿಯನ್ನು ವಜಾ ಗೊಳಿಸಿ, ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.
ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರು, ಸಂಘಕ್ಕೆ ಸೇರಿದ ಜಮೀನನ್ನು ಸ್ವಾಧೀನಪಡೆದುಕೊಳ್ಳುವುದಕ್ಕೆ ಯಾವುದೇ ಹಕ್ಕನ್ನು ಹೊಂದಿಲ್ಲ. ಆದರೂ, ಜಮೀನನ್ನು ಕಬಳಿಸುವುದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ನಿಜ ಎಂಬುದಾಗಿ ಬಳಕೆ ಮಾಕೊಂಡಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ ವಿಚಾರಣಾ ನ್ಯಾಯಾಲಯ ಆರೋಪಿಗಳ ವಿರುದ್ಧ ತನಿಖೆ ನಡೆಸುವುದಕ್ಕೆ ಸಾಕ್ಷ್ಯವಿದೆ ಎಂದು ತಿಳಿಸಿದೆ. ಹೀಗಾಗಿ, ಎಫ್ಐಆರ್ ದಾಖಲಿಸಲು ವಿಚಾರಣೆಗೆ ನಿರ್ದೇಶನ ನೀಡಿದೆ.
ಪ್ರಕರಣದ ಆರೋಪಿಗಳಲ್ಲಿ ಇಬ್ಬರು ಮೃತಪಟ್ಟಿರುವ ಅಂಶವನ್ನು ವಿಚಾರಣಾ ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ಆದ್ದರಿಂದ ಮೃತರ ಕುರಿತು ವಿಚಾರಣಾ ನ್ಯಾಯಾಲಯದ ಗಮನಕ್ಕೆ ತರಬೇಕೆಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಮೈಸೂರು ರೇಷ್ಮೆ ತಯಾರಕರ ಸಂಘವನ್ನು ಮೈಸೂರು ಸಂಘಗಳ ನೋಂದಣಿ ಕಾಯ್ದೆ 3ರ ಅಡಿ 1904ರಲ್ಲಿ ನೋಂದಣಿ ಮಾಡಲಾಗಿದೆ. ಆದರೆ, ಅರ್ಜಿದಾರರು ರೇಷ್ಮೆ ಉತ್ಪಾದನಾ ಸಂಘ ಎಂಬ ಹೆಸರಿನಲ್ಲಿ ಸಂಘವೊಂದನ್ನು ರಚನೆ ಮಾಡಿದ್ದಾರೆ. ಅರ್ಜಿದಾರರ ಸಂಘಕ್ಕೂ ಮೈಸೂರು ರೇಷ್ಮೆ ತಯಾರಕರ ಸಂಘಕ್ಕೂ ಸಂಬಂಧವಿದೆ ಎಂದು ತೋರಿಸಲು ಪ್ರಯತ್ನ ಮಾಡಿದ್ದು, ಅದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆದರೂ, ಮೈಸೂರು ರೇಷ್ಮೆ ಉತ್ಪಾದಕರ ಸಂಘದ ಆಸ್ತಿ ಕಬಳಿಸುವುದಕ್ಕಾಗಿ ಮತ್ತೊಂದು ಸಂಘ ರಚನೆ ಮಾಡಿಕೊಂಡಿದ್ದಾರೆ.
ಜಮೀನಿನ ಕುರಿತಂತೆ ನ್ಯಾಯಾಲಯದಲ್ಲಿ ವಿವಿಧ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮತ್ತೊಬ್ಬರಿಗೆ ಜಮೀನು ಮಾರಾಟ ಮಾಡಿರುವ ಸಂಬಂಧ ಮಾರಾಟ ಪತ್ರವನ್ನೂ ನೋಂದಾಯಿಸಿದ್ದಾರೆ. ಆದ್ದರಿಂದ ಪ್ರಕರಣದ ತನಿಖೆ ನಡೆಸಬೇಕಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ : ಬೆಂಗಳೂರು ನಗರದ ಜಿ.ಎಂ.ಕ್ರಾಸ್ ಬಳಿಯಿರುವ ದೊಡ್ಡಬಸವಣ್ಣ ದೇವಸ್ಥಾನ ರಸ್ತೆಯಲ್ಲಿರುವ ನಿವೇಶನವು, 1904ರಲ್ಲಿ ಮೈಸೂರು ಸಂಘಗಳ ನೋಂದಣಿ ಕಾಯ್ದೆಯಡಿ ನೋಂದಣಿ ಆಗಿರುವ ಮೈಸೂರು ರೇಷ್ಮೆ ತಯಾರಕರ ಸಂಘದ ಹೆಸರಿಗೆ 1957ರ ಏಪ್ರಿಲ್ 10 ರಂದು ಖರೀದಿ ಮಾಡಿತ್ತು. ಈ ಸಂಬಂಧ ಗಾಂಧಿನಗರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿನ ದಾಖಲೆಗಳಲ್ಲಿ ಸ್ಟಷ್ಟವಾಗಿದೆ.
ಈ ನಡುವೆ ಸಂಘ ಯಾವುದೇ ಕಾರ್ಯಚಟುವಟಿಕೆ ಕೈಗೊಳ್ಳದೆ ತಟಸ್ಥವಾಗಿತ್ತು. ಸದ್ಯದ ಪರಿಷ್ಕರಣೆ ಮತ್ತು ಸಂಘದ ಪದಾಧಿಕಾರಿಗಳ ನೇಮಕ ಸಂಬಂಧ ಮಾಹಿತಿ ಒದಗಿಸದ ಪರಿಣಾಮ 1992ರ ಅಕ್ಟೋಬರ್ 19ರಂದು ನೋಟಿಸ್ ಸಹ ನೀಡಲಾಗಿತ್ತು. ಆದರೆ., ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕಾಗಿ ಆರೋಪಿ ರಾಜೇಂದ್ರ ಪ್ರಸಾದ್ ಅವರ ತಂದೆ ಹೊಟ್ಟೆ ಪಕ್ಷದ ರಂಗಸ್ವಾಮಿ 1999 – 2000 ಅವಧಿಯಲ್ಲಿ ರೆಷ್ಮೆ ಉತ್ಪಾದಕರ ಸಂಘ ಎಂಬ ಹೆಸರಿನಲ್ಲಿ ಸಂಘವೊಂದನ್ನು ನೋಂದಣಿ ಮಾಡಿಸಿಕೊಂಡಿದ್ದರು. ಈ ಸಂಘ ಮತ್ತು ಮೈಸೂರು ರೇಷ್ಮೆ ಉತ್ಪಾದಕರ ಸಂಘಕ್ಕೂ ಯಾವುದೇ ಸಂಬಂಧವಿರಲಿಲ್ಲ. ಆದರೂ, ಪ್ರಸ್ತಾವಿತ ನಿವೇಶನ ತಮಗೆ ಸೇರಿದ್ದು ಎಂದು ಹೇಳಿಕೊಳ್ಳುವುದಕ್ಕೆ ಮುಂದಾಗಿದ್ದರು. ಬಳಿಕ ಪ್ರಭಾವ ಬಳಸಿ ನಿವೇಶನದ ಖಾತಾವನ್ನು ತಮ್ಮ ಸಂಘದ ಹೆಸರಿಗೆ ಬದಲಾವಣೆ ಮಾಡಿಕೊಂಡಿದ್ದರು. ಇದಾದ ಬಳಿಕ ಇಬ್ಬರು ಆರೋಪಿಗಳು ಸೇರಿ ಮತ್ತೊಬ್ಬ ಆರೋಪಿಗೆ ನಿವೇಶನವನ್ನು ಮಾರಾಟ ಮಾಡಿದ್ದು, ಮತ್ತಿಬ್ಬರು ಆರೋಪಿಗಳು ಇದಕ್ಕೆ ಸಾಕ್ಷಿಗಳಾಗಿದ್ದರು.
ಬಳಿಕ ಸಿವಿಲ್ ನ್ಯಾಯಾಲಯಕ್ಕೆ ಅಸಲು ದಾವೆ ಹೂಡಿ ನಿವೇಶನ ಕಾನೂನು ಬದ್ಧವಾಗಿ ಮಾರಾಟ ಮಾಡಿಲ್ಲ. ನೋಂದಣಿ ರದ್ದು ಮಾಡಬೇಕು ಎಂದು ಮನವಿ ಮಾಡಿದ್ದರು. ಬಳಿಕ ನ್ಯಾಯಾಲಯದ ಹೊರಗಡೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿ ಅರ್ಜಿಯನ್ನು ಹಿಂಪಡೆದಿದ್ದರು.
ಈ ಎಲ್ಲ ಪ್ರಕ್ರಿಯೆಗೆ ರಾಜೇಂದ್ರ ಪ್ರಸಾದ್ ಕಿಂಗ್ ಪಿನ್ ಆಗಿದ್ದರು. ಈ ಎಲ್ಲ ಅಂಶಗಳನ್ನು ಗಮನಿಸಿದ್ದ ಬಿ.ಉಮಾಶಂಕರ್ ಎಂಬುವರು ಪ್ರಕರಣದ ತನಿಖೆಗೆ ಕೋರಿ ಖಾಸಗಿ ದೂರು ದಾಖಲಿಸಿದ್ದರು. ಪ್ರಕರಣದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ವಿಚಾರಣಾ ನ್ಯಾಯಾಲಯಯು ಆರೋಪಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚನೆ ನೀಡಿತ್ತು.
ಈ ಆದೇಶ ರದ್ದು ಕೋರಿ ಈ. ಶೇಖರ್, ಡಿ.ಲಿಂಗರಾಜು, ಪಿ.ರಾಜೇಂದ್ರ, ಜ್ಞಾನೇಶ್ವರ, ಕೆ.ವಿನೋದ್ ಕುಮಾರ್, ಸುರೇಶಕುಮಾರ್ ಅಲಿಯಾಸ್ ಸಂಜಯ್, ರಾಜೇಂದ್ರ ಪ್ರಸಾದ್ ಮತ್ತು ರಮೇಶ್ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣ ಸಿವಿಲ್ ಸ್ವರೂಪದ್ದಾಗಿದ್ದು, ಕ್ರಿಮಿನಲ್ ತನಿಖೆ ನಡೆಸುವುದಕ್ಕೆ ಅವಕಾಶವಿಲ್ಲ. ಅಲ್ಲದೆ, ಪ್ರಕರಣ ಸಂಬಂಧ ಇಬ್ಬರು ಮೃತಪಟ್ಟಿದ್ದಾರೆ. ಅವರ ವಿರುದ್ದ ತನಿಖೆಗೆ ಆದೇಶಿಸಲಾಗಿದೆ. ಆದ್ದರಿಂದ ಪ್ರಕರಣದ ತನಿಖೆಗೆ ವಹಿಸಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.


