
ಭಾರತೀಯ ನೌಕಾಪಡೆಯು ಶಾರ್ಟ್ ಸರ್ವಿಸ್ ಕಮಿಷನ್ ಮೂಲಕ 260 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ನೌಕಾಪಡೆ ಅಧಿಕಾರಿಯಾಗಿ ಕೆಲಸ ಪಡೆಯಲು ಬಯಸುವವರಿಗೆ ಇದೊಂದು ಸುವರ್ಣಾವಕಾಶ. ಇಲ್ಲಿ ಉಲ್ಲೇಖಿಸಿರುವ ಹುದ್ದೆಗಳಿಗೆ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ನೀಡಿರುವ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಬಿಇ/ಬಿ.ಟೆಕ್, ಎಂಎಸ್ಸಿ, ಎಂಬಿಎ, ಎಂಸಿಎ, ಎಂಟೆಕ್, ಎಲ್ಎಲ್ಬಿ ಸೇರಿದಂತೆ ಕಾನೂನು, ಭೌತಶಾಸ್ತ್ರ, ಎಲೆಕ್ಟ್ರಾನಿಕ್ಸ್, ಐಟಿಯಂತಹ ಕ್ಷೇತ್ರಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಎಲ್ಲಾ ಹುದ್ದೆಗಳನ್ನು ಸಂದರ್ಶನದ ಮೂಲಕ ತುಂಬಲಾಗುತ್ತದೆ. ಸಂದರ್ಶನದಲ್ಲಿ ಉತ್ತಮ ಅಂಕ ಗಳಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರು ತರಬೇತಿಯ ನಂತರ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಪಡೆಯುತ್ತಾರೆ. ನೌಕಾಪಡೆಯ ಸಬ್-ಲೆಫ್ಟಿನೆಂಟ್ ಶ್ರೇಣಿಯೊಂದಿಗೆ ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಆರಂಭದ ತಿಂಗಳೇ 1 ಲಕ್ಷ ರೂ.ಗಿಂತ ಹೆಚ್ಚು ಸಂಬಳ ಪಡೆಯಲಿದ್ದಾರೆ.
ಕಾರ್ಯನಿರ್ವಾಹಕ, ಶಿಕ್ಷಣ ಮತ್ತು ತಾಂತ್ರಿಕ ವಿಭಾಗಗಳಿಗೆ ನೇಮಕಾತಿ ನಡೆಯುತ್ತಿದೆ. ಎಲ್ಲ ಹುದ್ದೆಗಳು ಲೆವೆಲ್-10 ಸ್ಥಾನಮಾನ ಹೊಂದಿವೆ. ಇವುಗಳ ವಿಶೇಷತೆಯೆಂದರೆ, ಹುದ್ದೆಗಳನ್ನು ಯಾವುದೇ ಪರೀಕ್ಷೆಯಿಲ್ಲದೆ ಕೇವಲ ಸಂದರ್ಶದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಿದವರ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯುತ್ತದೆ. ಆದ್ದರಿಂದ, ಯುಜಿ/ಪಿಜಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದವರಿಗೆ ಹೆಚ್ಚಿನ ಅವಕಾಶವಿರುತ್ತದೆ. ಪ್ರತಿ ಹುದ್ದೆಗೆ ನಿಗದಿತ ಸಂಖ್ಯೆಯ ಅಭ್ಯರ್ಥಿಗಳನ್ನು ಸಂದರ್ಶನಗಳಿಗೆ ಆಹ್ವಾನಿಸಲಾಗುತ್ತದೆ. ಇವುಗಳನ್ನು ಸೇವಾ ಆಯ್ಕೆ ಮಂಡಳಿಯ (ಎಸ್ಎಸ್ಬಿ) ಆಶ್ರಯದಲ್ಲಿ ನಡೆಸಲಾಗುತ್ತದೆ. ಸಂದರ್ಶನದಲ್ಲಿ ಯಶಸ್ವಿಯಾದವರನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಬಳಿಕ ಅಂತಿಮ ನೇಮಕಾತಿಗೆ ಆಯ್ಕೆ ನಡೆಯುತ್ತದೆ.
ತರಬೇತಿ: ಈ ತರಬೇತಿಯನ್ನು ಜೂನ್ 2026ರಿಂದ ಎಳಿಮಲದ ನೌಕಾ ಅಕಾಡೆಮಿಯಲ್ಲಿ ಸಂಬಂಧಿತ ವಿಭಾಗದಲ್ಲಿ 22 ವಾರಗಳ ಕಾಲ ನಡೆಸಲಾಗುತ್ತದೆ. ತದನಂತರ ಸಂಬಂಧಿತ ಇಲಾಖೆಯ ಕೇಂದ್ರದಲ್ಲಿ ಪುನಃ 22 ವಾರಗಳ ಕಾಲ ಎರಡನೇ ತರಬೇತಿ ನೀಡಲಾಗುತ್ತದೆ. ಈ ಎರಡೂ ತರಬೇತಿ ನಂತರ, ಅವರನ್ನು ಸಬ್-ಲೆಫ್ಟಿನೆಂಟ್ ಹುದ್ದೆಯೊಂದಿಗೆ ನಿಯೋಜಿಸಲಾಗುತ್ತದೆ. ಮೂಲ ವೇತನ ರೂ.56,100 ಇರಲಿದೆ. ಇದರ ಜೊತೆಗೆ ಡಿಎ, ಹೆಚ್ಆರ್ಎ ಮತ್ತು ಇತರ ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ. ಈ ಎಲ್ಲ ಅಂಶ ಸೇರಿ ಮೊದಲ ತಿಂಗಳಿನಿಂದ ಅಭ್ಯರ್ಥಿ ರೂ.1,10,000 ವೇತನವನ್ನು ಪಡೆಯಬಹುದು. ಹುದ್ದೆಯನ್ನು ಅವಲಂಬಿಸಿ ಪ್ರೊಬೇಶನ್ ಅವಧಿ ಎರಡು ಅಥವಾ ಮೂರು ವರ್ಷಗಳಾಗಿರುತ್ತದೆ.
ಈ ಹುದ್ದೆಗಳು ಸೀಮಿತ ಅವಧಿಯ ಆಧಾರದ ಮೇಲೆ (ಶಾರ್ಟ್ ಸರ್ವಿಸ್ ಕಮಿಷನ್) ಇರುತ್ತವೆ. ಅಂದರೆ, ಆಯ್ಕೆಯಾದವರು 12 ವರ್ಷಗಳ ಕಾಲ ಸೇವೆಯಲ್ಲಿ ಮುಂದುವರಿಯುತ್ತಾರೆ. ನಂತರ ಈ ಸೇವೆಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಲಾಗುತ್ತದೆ. ಆದ್ದರಿಂದ, ಅವರು ಗರಿಷ್ಠ 14 ವರ್ಷಗಳವರೆಗೆ ತಮ್ಮ ಕೆಲಸದ ಜವಾಬ್ದಾರಿಗಳನ್ನು ನಿರ್ವಹಿಸಬಹುದು. ನಂತರ, ಕರ್ತವ್ಯಗಳಿಂದ ಹೊರಬರಬಹುದು. ಇದರ ಹೊರತು ನೌಕಾಪಡೆಯಲ್ಲಿ ಕೆಲಸದ ಅನುಭವದೊಂದಿಗೆ, ಕರ್ತವ್ಯಗಳಿಂದ ಹೊರಬರುವವರು ಸುಲಭವಾಗಿ ನಾಗರಿಕ ಉದ್ಯೋಗಗಳನ್ನು ಪಡೆಯಬಹುದು.
ಪ್ರಮುಖ ಹುದ್ದೆಗಳ ವಿವರ: ನೇಮಕಾತಿಯಲ್ಲಿ ಸೇರಿಸಲಾದ ಪ್ರಮುಖ ಹುದ್ದೆಗಳೆಂದರೆ ಕಾರ್ಯನಿರ್ವಾಹಕ ಶಾಖೆಯ (ಸಾಮಾನ್ಯ ಸೇವೆ) 57 ಹುದ್ದೆಗಳು, ಪೈಲಟ್ ಶಾಖೆಯ 24 ಹುದ್ದೆಗಳು, ನೇವಲ್ ಏರ್ ಆಪರೇಷನ್ ಆಫೀಸರ್ (ಅಬ್ಸರ್ವರ್) 20, ಏರ್ ಟ್ರಾಫಿಕ್ ಕಂಟ್ರೋಲರ್ (ATC) 20, ಲಾಜಿಸ್ಟಿಕ್ಸ್ 10 ಹುದ್ದೆಗಳು, ನೌಕಾ ಶಸ್ತ್ರಾಸ್ತ್ರ ನಿರೀಕ್ಷಕ ಕೇಡರ್ನಲ್ಲಿ 20 ಹುದ್ದೆಗಳು, ಕಾನೂನು 02, ವಿವಿಧ ವಿಭಾಗಗಳಲ್ಲಿ (ಗಣಿತ, ಭೌತಶಾಸ್ತ್ರ, ಐಟಿ, ಇತ್ಯಾದಿ) 15 (ಅಂದಾಜು), ಎಂಜಿನಿಯರಿಂಗ್ ಶಾಖೆಯಲ್ಲಿ 36 ಹುದ್ದೆಗಳು, ಎಲೆಕ್ಟ್ರಾನಿಕ್ ಶಾಖೆಯ 40 ಹುದ್ದೆಗಳು ಮತ್ತು ನೌಕಾ ನಿರ್ಮಾಣಕಾರನ 16 ಹುದ್ದೆಗಳು ಸೇರಿದಂತೆ ಒಟ್ಟು 260 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಬಿಇ/ಬಿ.ಟೆಕ್, ಎಂಎಸ್ಸಿ, ಎಂಬಿಎ, ಎಂಸಿಎ, ಎಂಟೆಕ್, ಎಲ್ಎಲ್ಬಿ ಸೇರಿದಂತೆ ಕಾನೂನು, ಭೌತಶಾಸ್ತ್ರ, ಎಲೆಕ್ಟ್ರಾನಿಕ್ಸ್, ಐಟಿಯಂತಹ ಕ್ಷೇತ್ರಗಳಲ್ಲಿ ಯಾವುದೇ ಶಾಖೆಯಲ್ಲಿ 60% ಅಂಕಗಳೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗೆ ಅನುಗುಣವಾಗಿ ವಯೋಮಿತಿ ಇರುತ್ತದೆ. ಜುಲೈ 2, 2001 ಮತ್ತು ಜನವರಿ 1, 2007 ರ ನಡುವೆ ಜನಿಸಿದವರು ಹೆಚ್ಚಿನ ಹುದ್ದೆಗಳಿಗೆ ಅರ್ಹರು. ಪ್ರಸ್ತುತ ಅಂತಿಮ ವರ್ಷದ ಕೋರ್ಸ್ಗಳನ್ನು ಓದುತ್ತಿರುವವರು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಎನ್ಸಿಸಿ-ಸಿ ಪ್ರಮಾಣಪತ್ರ ಹೊಂದಿರುವವರಿಗೆ ಶೈಕ್ಷಣಿಕ ಅಂಕಗಳಲ್ಲಿ ಶೇ 5ರಷ್ಟು ಸಡಿಲಿಕೆ ಇರುತ್ತದೆ. ಅಭ್ಯರ್ಥಿಗಳು ಅರ್ಜಿಯಲ್ಲಿ ತಮ್ಮ ಪೋಸ್ಟ್ವಾರು ಆದ್ಯತೆಯನ್ನು ಸೂಚಿಸಬೇಕು. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


