ವಿಧಾನಸಭೆ
Trending

ದ.ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಮರುನಾಮಕರಣಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಮರುನಾಮಕರಣ ಮಾಡುವಂತೆ ಶಾಸಕ ಹರೀಶ್ ಪೂಂಜಾ ವಿಧಾನಸಭೆಯಲ್ಲಿ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ವಿಷಯ ಪ್ರಸ್ತಾಪಿಸಿದ ಅವರು, “ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಮರುನಾಮಕರಣ ಮಾಡಬೇಕು ಎಂದು ಗಮನ ಸೆಳೆದರು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಿಜೆಪಿ ಜನಪ್ರತಿನಿಧಿಗಳು ಮಂಗಳೂರು ಎಂದು ಬದಲಾವಣೆಗೆ ಆಗ್ರಹ ಮಾಡುತ್ತಿದ್ದಾರೆ. ಮಂಗಳೂರು ಅನ್ನೋದು ಒಂದು ಬ್ರಾಂಡ್ ಆಗಿರುವ ಹೆಸರು. ನಾವು ಎಲ್ಲೆಲ್ಲಾ ವ್ಯಾಪಾರ ಮಾಡುತ್ತೇವೆ, ಎಲ್ಲೆಲ್ಲಾ ಇದ್ದೇವೆ, ನಾವು ಮಂಗಳೂರಿನವರು ಎಂದು ಗುರುತಿಸಿಕೊಂಡವರು. 1931ರಿಂದ ಎಸ್.ಯು.ಪಣಿಯಾಡಿ ಅವರ ಕಾಲದಿಂದಲೂ ಮರುನಾಮಕರಣ ಹೋರಾಟ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಸ್ಥಳಗಳನ್ನು ಮಂಗಳೂರು ಹೆಸರಲ್ಲಿ ಕರೆಯಲಾಗುತ್ತದೆ. ಕನ್ನಡದ ಮೊದಲ ಪತ್ರಿಕೆಯೂ ಮಂಗಳೂರು ಸಮಾಚಾರ, ಮಂಗಳೂರು ಎಂಬ ಹೆಸರು ಜಗಜ್ಜಾಹಿರವಾಗಿರುವಂಥ ಹೆಸರಾಗಿದೆ” ಎಂದು ವಿವರಿಸಿದರು.

“ಸೌತ್ ಕೆನರಾ ಎಂದು ಬ್ರಿಟಿಷರು ಉಲ್ಲೇಖ ಮಾಡುತ್ತಿದ್ದದ್ದು, ಬಳಿಕ ದಕ್ಷಿಣ ಕನ್ನಡ ಎಂದು ಆಗಿದೆ. ಮಂಗಳೂರು ಅನ್ನೋದು ತಾಯಿ ಮಂಗಳಾಂಬಿಕೆಯಿಂದ ಸೃಷ್ಟಿಯಾದ ನಗರ.‌ ಈ ತುಳುನಾಡಿಗೆ ಮಂಗಳೂರು ಅಂತ ಆದರೆ, ಜಾಗತಿಕಮಟ್ಟದಲ್ಲಿ ಬ್ರಾಂಡ್ ಬೆಂಗಳೂರು ಮಾಡಲು ಸಹಕಾರಿಯಾಗಲಿದೆ. ಉಡುಪಿಗೆ ಉಡುಪಿ ಜಿಲ್ಲೆ, ಚಿಕ್ಕಮಗಳೂರಿಗೆ ಚಿಕ್ಕಮಗಳೂರು ಜಿಲ್ಲೆ, ಹಾಸನಕ್ಕೆ ಹಾಸನ ಜಿಲ್ಲೆ ಅಂತ ಇದೆ. ಆದರೆ ಮಂಗಳೂರಿಗೆ ದಕ್ಷಿಣ ಕನ್ನಡ ಅಂತ ಇದೆ. ಬ್ರಿಟಿಷರು, ಪೋರ್ಚುಗೀಸರು ಬಿಟ್ಟು ಹೋದ ಹೆಸರನ್ನು ಉಳಿಸಿಕೊಳ್ಳುವ ದಾಸ್ಯದ ಮಾನಸಿಕತೆ ಇರಬಾರದು. ಹೇಗೆ ರಾಮನಗರವನ್ನು ಬೆಂಗಳೂರು ದಕ್ಷಿಣ ಅಂತ ನಾಮಕರಣ ಮಾಡಿದ್ರಿ ಅದೇ ಉತ್ಸಾಹದಿಂದ ಮಂಗಳೂರು ಅಂತ ಮರುನಾಮಕರಣ ಮಾಡಿ” ಎಂದು ವೇದವ್ಯಾಸ ಕಾಮತ್ ಒತ್ತಾಯಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಯು.ಟಿ. ಖಾದರ್, “ಮಂಗಳೂರು ಎಂದರೆ ಒಂದು ಬ್ರಾಂಡ್ ಆಗುತ್ತದೆ ಎಂಬುದು ನಿಮ್ಮ ಅಭಿಪ್ರಾಯವಾಗಿದೆ. ಅದನ್ನು ಕೂತುಕೊಂಡು ಸಾಧಕ ಬಾಧಕವನ್ನು ಚರ್ಚೆ ಮಾಡೋಣ. ಹೆಸರಿಲ್ಲ ಅಂದರು ಈಗ ಮಂಗಳೂರ ಅಂತಾಲೇ ಕರೆಯಲಾಗುತ್ತದೆ. ಹೆಸರಿಗಿಂತ ಊರಿನ ಜನರು ಹುಷಾರಾಗಬೇಕು. ನಾವು ಕರೆಕ್ಟ್ ಇರಬೇಕು. ನಾವು ಅಲ್ಲಿ ಪ್ರೀತಿ ವಿಶ್ವಾಸ ಸೌಹಾರ್ದ ಸಮಾಜವನ್ನು ನಿರ್ಮಾಣ ಮಾಡಬೇಕು” ಎಂದು ಉತ್ತರಿಸಿದರು.

ಕನ್ನಡದ ಮೂಲಕ್ಕೂ ಇದಕ್ಕೂ ಸಂಬಂಧ ಇದೆ: “17 ಶತಮಾನದಿಂದ ಇದನ್ನು ಕ್ಯಾನರೀಸ್​​ ಎಂದು ಕರೆಯಲಾಗುತ್ತಿತ್ತು. ಕನ್ನಡದ ಮೊದಲ ಸಾಮ್ರಾಜ್ಯ ಬನವಾಸಿ ಕದಂಬರದ್ದು. ಅದು ಸದ್ಯ ಕರಾವಳಿಯ ಉತ್ತರ ಕನ್ನಡದಲ್ಲಿದೆ. ಕ್ಯಾನರೀಸ್ ಅಂದರೆ ಅದು ಕನ್ನಡ. ಅಲ್ಲಿಂದ ಅದು ಉತ್ತರ ಕನ್ನಡ ಆಯಿತು. ದಕ್ಷಿಣ ಕನ್ನಡ ಆಯಿತು. ಬನವಾಸಿ ಕದಂಬರ ಕಾಲದಿಂದ ಇದಕ್ಕೆ ಇತಿಹಾಸ ಇದೆ. ಹೊರಗಿನಿಂದ ಬಂದವರು ಇದನ್ನು ಕ್ಯಾನರೀಸ್ ಅಂತ ಕರೆದರು. ಕ್ಯಾನರೀಸ್ ಹೋಗಿ ಕೆನರಾ ಆಯಿತು. ಕನ್ನಡದ ಮೂಲಕ್ಕೂ ಇದಕ್ಕೂ ಸಂಬಂಧ ಇರುವಂತದ್ದು. ಕನ್ನಡ ಅನ್ನೋ ಪದಕ್ಕೂ ಒಂದು ಬಾಂಧವ್ಯದ ಅಟ್ಯಾಚ್ಮೆಂಟ್ ಇದೆ ಅನ್ನೋದನ್ನೂ ಮರೆಯುವುದು ಬೇಡ. ಜಿಲ್ಲಾ ಮಂತ್ರಿಗಳು ಮತ್ತು ಎಲ್ಲರ ಅಭಿಪ್ರಾಯವನ್ನು ಪಡೆದು ಮುಂದಿನ ಹೆಜ್ಜೆ ಇಡುತ್ತೇವೆ.‌ ಅನೇಕ ಕಾಂಗ್ರೆಸ್ ನಾಯಕರು ಕೂಡ ಹೆಸರು ಬದಲಾವಣೆಗೆ ಒತ್ತಾಯಿಸಿದ್ದಾರೆ. ಪರ-ವಿರೋಧ ಪರಿಗಣಿಸಿ ಮುಂದಿನ ಹೆಜ್ಜೆ ಇಡುತ್ತೇವೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದರು.‌

ಈ ವೇಳೆ ಸಚಿವರ ಉತ್ತರಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ರಾಮನಗರ ರಾಮನ ಹೆಸರಿತ್ತು. ಅದನ್ನು ಬದಲಾವಣೆ ಮಾಡಿಲ್ಲವೇ?. ಸಭಾಧ್ಯಕ್ಷರೇ ನಿಮ್ಮ ನೇತೃತ್ವದಲ್ಲಿ ಸಭೆ ಮಾಡಿ ಎಲ್ಲರೂ ಕೂತು ತೀರ್ಮಾನ ಮಾಡೋಣ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಮನವಿ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button