ಇತ್ತೀಚಿನ ಸುದ್ದಿ
Trending

ಸಾಮೂಹಿಕ ವಿವಾಹದಲ್ಲಿ ನಡೆಯುತ್ತಿದ್ದ ಅಪ್ರಾಪ್ತರ ಮದುವೆಗೆ ಅಧಿಕಾರಿಗಳಿಂದ ತಡೆ

ಸಾಮೂಹಿಕ ವಿವಾಹದಲ್ಲಿ ನಡೆಯಬೇಕಿದ್ದ ಎರಡು ಜೋಡಿ ಅಪ್ರಾಪ್ತರ ಮದುವೆಯನ್ನು ಶಿವಮೊಗ್ಗ ತಹಶಿಲ್ದಾರ್ ನೇತೃತ್ವದ ಅಧಿಕಾರಿಗಳ ತಂಡವು ತಡೆದಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ: ಶಿವಮೊಗ್ಗ ನಗರದ ವಿನೋಬನಗರದ ಸಮುದಾಯ ಭವನದಲ್ಲಿ ಬುಧವಾರ ಭಾರತೀಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ 8 ಜೋಡಿಗಳ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು. ಈ ವೇಳೆ ಎರಡು ಜೋಡಿ ಅಪ್ರಾಪ್ತ ವಯಸ್ಕರ ಮದುವೆ ಮಾಡುವ ತಯಾರಿ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದ್ದು, ಅಪ್ರಾಪ್ತರ ಮದುವೆಯನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಹಶಿಲ್ದಾರ್ ರಾಜೀವ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಾಬಾಯಿ, ವಲಯ ಮೇಲ್ವಿಚಾರಕಿ ರೇಖಾ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಯು ವಿನೋಬನಗರ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ, ಇಲ್ಲಿ ಎಂಟು ಜೋಡಿಗಳ ವಿವಾಹ ಕಾರ್ಯಕ್ರಮ ನಡೆಸುತ್ತಿರುವುದಾಗಿ ಆಯೋಜಕರು ತಿಳಿಸಿದ್ದಾರೆ. ಆ ಜೋಡಿಗಳಲ್ಲಿ ಎರಡು ಜೋಡಿಗಳು ಅಪ್ರಾಪ್ತರು ಎಂದು ಕಂಡು ಬಂದಿದೆ. ಇದರಿಂದ ಆರು ಜೋಡಿಗಳ ಮದುವೆ ಮಾಡಲು ಅವಕಾಶ ಮಾಡಿಕೊಟ್ಟು, ಎರಡು ಜೋಡಿಗಳ ಮದುವೆಯನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡು ಜೋಡಿಯಲ್ಲಿ ಅಪ್ರಾಪ್ತರಾಗಿದ್ದವರನ್ನು ಮಕ್ಕಳ ಸಹಾಯವಾಣಿ ಸಿಬ್ಬಂದಿಯು ಕಾನೂನು ಪ್ರಕಾರ ಮಕ್ಕಳ ಮತ್ತು ಮಹಿಳಾ ಇಲಾಖೆಯ ವಶಕ್ಕೆ ನೀಡಿದ್ದಾರೆ. ಅಪ್ರಾಪ್ತರ ಮದುವೆಗೆ ಮುಂದಾಗಿದ್ದ ಕುಟುಂಬದವರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 4 ವರ್ಷಗಳಲ್ಲಿ 2,165 ಬಾಲ್ಯ ವಿವಾಹ: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 2021-22ರಿಂದ 2024-25ರ ವರೆಗೆ ಬರೋಬ್ಬರಿ 2,165 ಬಾಲ್ಯ ವಿವಾಹಗಳು ನಡೆದಿವೆ ಎಂದು ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 2021-22ರಲ್ಲಿ 418 ಬಾಲ್ಯ ವಿವಾಹಗಳು ನಡೆದರೆ, 2022-23ರಲ್ಲಿ 328 ಬಾಲ್ಯ ವಿವಾಹಗಳು ವರದಿಯಾಗಿವೆ. ಕಾಂಗ್ರೆಸ್ ಸರ್ಕಾರದ ಆಡಳಿತ ಆರಂಭವಾದ 2023-24ರಲ್ಲಿ ಬಾಲ್ಯ ವಿವಾಹ ಪ್ರಕರಣ 719ಕ್ಕೆ ಏರಿಕೆಯಾಗಿದೆ. 2024-25ರಲ್ಲಿ 700 ಬಾಲ್ಯವಿವಾಹಗಳು ಸೇರಿ ಕಾಂಗ್ರೆಸ್ ಆಡಳಿತದ ಎರಡು ವರ್ಷಗಳಲ್ಲೇ 1,416 ಬಾಲ್ಯ ವಿವಾಹಗಳು ಜರುಗಿವೆ.

ಬಾಲ್ಯ ವಿವಾಹ ಕಡಿವಾಣಕ್ಕೆ ಕಠಿಣ ಮಸೂದೆ: ರಾಜ್ಯದಲ್ಲಿ ಅಧಿಕಾರಿಗಳು ಎಷ್ಟೇ ಜಾಗೃತಿ ಮೂಡಿಸಿದರೂ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.‌ ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ), 2025 ಕರಡು ಮಸೂದೆ ಸಿದ್ಧಪಡಿಸಿದೆ.‌

ರಾಜ್ಯದ ಪ್ರಸ್ತಾಪಿತ ಹೊಸ ಮಸೂದೆಯಲ್ಲೇನಿದೆ? ಹೊಸ ಕರಡು ಮಸೂದೆ ಪ್ರಕಾರ, ಬಾಲ್ಯ ವಿವಾಹಗಳನ್ನು ಮಾಡಲು ಪ್ರಯತ್ನ, ಸಿದ್ಧತೆ, ನಿಶ್ಚಿತಾರ್ಥ ಮಾಡಲು ಪ್ರಯತ್ನ ಹಾಗೂ ಸಿದ್ಧತೆ ಕೂಡ ಶಿಕ್ಷಾರ್ಹವಾಗಿದೆ.‌ ಆ ನಿಟ್ಟಿನಲ್ಲಿ ರಾಜ್ಯದ ಪ್ರಸ್ತಾಪಿತ ಮಸೂದೆಯಲ್ಲಿ ಸೆಕ್ಷನ್ 9Aನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗುತ್ತಿದೆ. ಕೇಂದ್ರದ ಮೂಲ ಕಾಯ್ದೆಯಲ್ಲಿನ ಸೆಕ್ಷನ್ 9ರಂತೆ ಬಾಲಕಿಯ ಜೊತೆ ವಿವಾಹ ಮಾಡುವ ವಯಸ್ಕ ವ್ಯಕ್ತಿಗೆ ಶಿಕ್ಷೆ ನೀಡುವ ಅಂಶ ಇದೆ. ರಾಜ್ಯದ ಪ್ರಸ್ತಾಪಿತ ಮಸೂದೆಯಲ್ಲಿ ಹೊಸದಾಗಿ ಸೆಕ್ಷನ್ 9A ಸೇರ್ಪಡೆಗೊಳಿಸಿದ್ದು, ಬಾಲ್ಯ ವಿವಾಹಗಳನ್ನು ಮಾಡಲು ಪ್ರಯತ್ನ, ಸಿದ್ಧತೆ ಹಾಗೂ ನಿಶ್ಚಿತಾರ್ಥಕ್ಕೆ ಪ್ರಯತ್ನ ಹಾಗೂ ಸಿದ್ಧತೆ ಮಾಡುವುದು ಕೂಡ ಶಿಕ್ಷಾರ್ಹವಾಗಿರಲಿದೆ.‌ ಅದರಂತೆ ಗರಿಷ್ಠ ಎರಡು ವರ್ಷ ಜೈಲು ಅಥವಾ 1 ಲಕ್ಷ ರೂ.ವರೆಗೆ ದಂಡ ಅಥವಾ ಎರಡೂ ಅನ್ವಯವಾಗಲಿದೆ.

ಬಾಲ್ಯ ವಿವಾಹದ ನಿಶ್ಚಿತಾರ್ಥವೂ ಅನೂರ್ಜಿತ: ಇದರ ಜೊತೆಗೆ, ಪ್ರಸ್ತಾಪಿತ ಮಸೂದೆಯಲ್ಲಿ ಬಾಲ್ಯ ವಿವಾಹವನ್ನು ನೆರವೇರಿಸುವುದರ ಜೊತೆಗೆ ಬಾಲ್ಯ ವಿವಾಹಕ್ಕೆ ಸಿದ್ಧತೆ ಮಾಡುವುದನ್ನೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಕೇಂದ್ರದ ಮೂಲ ಕಾಯ್ದೆಯಲ್ಲಿ ಬಾಲ್ಯ ವಿವಾಹ ನೆರವೇರಿಸುವುದು ಮಾತ್ರ ಶಿಕ್ಷಾರ್ಹ ಅಪರಾಧವಾಗಿದೆ. ರಾಜ್ಯದ ತಿದ್ದುಪಡಿ ಮಸೂದೆಯಲ್ಲಿ ಸಿದ್ಧತೆ ನಡೆಸುವುದನ್ನೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತಿದೆ. ಬಾಲ್ಯ ವಿವಾಹಕ್ಕೆ ಕುಮ್ಮಕ್ಕು ನೀಡುವುದರ ಜೊತೆಗೆ ಬಾಲ್ಯ ವಿವಾಹದ ಸಿದ್ಧತೆಗಳಲ್ಲಿ ಪಾಲ್ಗೊಳ್ಳುವುದು ಮತ್ತು ನಿಶ್ಚಿತಾರ್ಥ ಮಾಡುವುದನ್ನೂ ಶಿಕ್ಷಾರ್ಹ ಅಪರಾಧ ಎಂಬ ಅಂಶವನ್ನು ಸೇರ್ಪಡೆಗೊಳಿಸಲಾಗಿದೆ. ರಾಜ್ಯ ಸಿದ್ಧಪಡಿಸಿರುವ ಹೊಸ ಮಸೂದೆಯಡಿ ಬಾಲ್ಯ ವಿವಾಹದ ನಿಶ್ವಿತಾರ್ಥವನ್ನು ಅನೂರ್ಜಿತ ಎಂದು ಪರಿಗಣಿಸಲಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button