
ಮಾಲೂರು: ಅ.15 ರಂದು ನಡೆಯಲಿರುವ ಸ್ವಾತಂತ್ರ್ಯದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ತಾಲೂಕು ಸೌಧ ಕಚೇರಿಯ ತಹಶೀಲ್ದಾರ್ ಸಭಾಂಗಣದಲ್ಲಿ ಆಗಸ್ಟ್ 15 ರಂದು ನಡೆಯಲಿರುವ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿವರ್ಷ ಸ್ವಾತಂತ್ರ‍್ಯದಿನಾಚರಣೆಯನ್ನು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.15 ರಂದು ಬೆಳಗ್ಗೆ 9 ಗಂಟೆಗೆ ಪಟ್ಟಣದ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಬೆಳಗ್ಗೆ 9ಗಂಟೆಗೆ ಧ್ವಜಾರೋಹಣ ನಂತರ ಶಾಲಾ ಮಕ್ಕಳು, ಪೊಲೀಸ್ ಇಲಾಖೆ, ಎನ್‌ಸಿಸಿ ಪಥಸಂಚಲನೆ ಧ್ವಜವಂದನೆ ನಡೆಸಲು ಸಿದ್ಧತೆಗಳನ್ನು ದೈಹಿಕ ಶಿಕ್ಷಕರು ಮಾಡಿಕೊಳ್ಳುವಂತೆ ಶಾಲಾ ಮಕ್ಕಳದಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆಯವರು ಜವಾಬ್ದಾರಿ ವಹಿಸಿಕೊಳ್ಳಬೇಕು ಶಾಲಾ ಕಾಲೇಜುಗಳಿಗೆ ಮಾಹಿತಿ ನೀಡಬೇಕು, ತಾಲೂಕು ಆಡಳಿತ ಕರೆಯುವ ಸಭೆಗಳಿಗೆ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಎಂ.ವಿ. ರೂಪ, ತಾ ಪಂ ಇ ಒ ಕೃಷ್ಣಪ್ಪ, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಹೀಮ್ ಉಲ್ಲಾ, ದರಕಾಸ್ತು ಸಮಿತಿ ಅಧ್ಯಕ್ಷ ಎಸ್.ಸಿ.ನಾರಾಯಣ ಸ್ವಾಮಿ, ಬೆಸ್ಕಾಂ ಕಾರ್ಯ ಪಾಲಕ ಅಭಿಯಂತರ ಅನ್ಸರ್ ಬಾಷಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಂಜುನಾಥ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ದಿವ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜು ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.


