
ಲೈಂಗಿಕ ದೌರ್ಜನ್ಯದ ಕುರಿತು 20 ವರ್ಷದ ಬಿಇಡಿ ವಿದ್ಯಾರ್ಥಿನಿ ನೀಡಿದ ದೂರನ್ನು ಸಂಸ್ಥೆಯ ಆತಂರಿಕ ಸಮಿತಿ ಮಾನ್ಯ ಮಾಡದ ಹಿನ್ನೆಲೆಯಲ್ಲಿ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಒಡಿಶಾ ಪೊಲೀಸ್ನ ಕ್ರೈಂ ಬ್ರಾಂಚ್ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಡಿಜಿ ವಿನಯ್ತೋಷ್ ಮಿಶ್ರಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದ ಸಾಕ್ಷಿಗಳ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದಿವೆ ಎಂದು ಹೇಳಿದ್ದಾರೆ. ಕಾಲೇಜಿನ ಅಧಿಕಾರಿಗಳು ದೂರಿನ ಕುರಿತು ಪರಿಶೀಲನೆ ನಡೆಸುತ್ತಿದ್ದ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ಆದರೆ, ಆತಂರಿಕ ಸಮಿತಿ ತನಿಖೆಯಲ್ಲಿ ಆಕೆಯ ದೂರನ್ನು ಮಾನ್ಯ ಮಾಡಲಾಗಿಲ್ಲ. ಇದರಿಂದ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಯಂತಹ ಗಂಭೀರ ಕ್ರಮಕ್ಕೆ ಮುಂದಾದಳು ಎಂದು ತಿಳಿಸಿದ್ದಾರೆ.ಫಕೀರ್ ಮೋಹನ್ (ಸ್ವಾಯತ್ತ) ಕಾಲೇಜಿನ ಇಂಟಿಗ್ರೇಟೆಡ್ ಬಿಇಡಿ ವಿಭಾಗದ ಮುಖ್ಯಸ್ಥೆ ಸಮೀರ ಕುಮಾರ್ ಸಾಹೂ ವಿರುದ್ಧದ ಕ್ರಮ ಕೈಗೊಳ್ಳದೇ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ನೊಂದ ಯುವತಿ ಜುಲೈ 12ರಂದು ಕಾಲೇಜಿನ ಪ್ರಾಂಶುಪಾಲರ ಕಚೇರಿ ಮುಂಭಾಗವೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ತೀವ್ರ ಸುಟ್ಟು ಗಾಯಕ್ಕೆ ಒಳಗಾದ ಯುವತಿ ಜುಲೈ 14ರಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಳು. ಈ ಘಟನೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣದ ವಿರುದ್ಧ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧ ವಿಭಾಗ (ಸಿಎಡಬ್ಲ್ಯೂ ಮತ್ತು ಸಿಡಬ್ಲ್ಯೂ) ತನಿಖೆ ನಡೆಸುತ್ತಿದೆ.
ಜುಲೈ 17ರಂದು ಈ ಪ್ರಕರಣದ ತನಿಖೆಯನ್ನು ಬಾಲಸೋರ್ ಜಿಲ್ಲಾ ಪೊಲೀಸರಿಂದ ಕ್ರೈಂ ಬ್ರಾಂಚ್ ಪಡೆದು ತನಿಖೆಗೆ ಮುಂದಾಗಿದೆ. ಆಂತರಿಕ ದೂರು ಸಮಿತಿ ಮತ್ತು ಪೊಲೀಸರಿಗೆ ಸಾಕ್ಷಿ ನೀಡಿದ ಹೇಳಿಕೆಗಳು ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಅವರ ಪೋಸ್ಟ್‌ಗಳ ನಡುವೆ ವ್ಯತ್ಯಾಸ ಕಂಡು ಬಂದಿದೆ. ಘಟನೆಯ ಮೊದಲು ಮತ್ತು ನಂತರ ವಿಭಿನ್ನ ಅಭಿಪ್ರಾಯಗಳನ್ನು ನೀಡಿದ್ದಾರೆ. ಪ್ರತಿಯೊಂದು ಹೇಳಿಕೆಯ ಸಂಪೂರ್ಣ ವಿಶ್ಲೇಷಣೆ ಅಗತ್ಯವಾಗಿದ್ದು, ಈ ಕುರಿತು ತೀರ್ಮಾನಕ್ಕೆ ಬರಲು ಡಿಜಿಟಲ್ ಪುರಾವೆಗಳ ವಿರುದ್ಧ ಸರಿಯಾದ ವಿಶ್ಲೇಷಣೆ ಅಗತ್ಯವಿದ್ದು, ಸಮಯ ಬೇಕಿದೆ ಎಂದು ಡಿಜಿ ತಿಳಿಸಿದ್ದಾರೆ.ಕಾನೂನಿನ ಪ್ರಕಾರ ಎಲ್ಲರಿಗೂ ನ್ಯಾಯ ಸಿಗುತ್ತದೆ. ಹಾಗೇ ಕಾಲೇಜು ವಿದ್ಯಾರ್ಥಿನಿಯ ಸಾವಿಗೆ ಯಾವುದೇ ನಿರಪರಾಧಿ ವ್ಯಕ್ತಿಯನ್ನು ಹೊಣೆಗಾರರನ್ನಾಗಿ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದೆ. ಸಿಎಡಬ್ಲ್ಯೂ ಮತ್ತು ಸಿಡಬ್ಲ್ಯೂ ಇನ್ಸ್ಪೆಕ್ಟರ್ ಜನರಲ್ ಎಸ್ ಶೈನಿ, ಈ ಪ್ರಕರಣದ ತನಿಖೆಗಾಗಿ ಎರಡು ಬಾರಿ ಬಾಲಸೋರ್ಗೆ ಭೇಟಿ ನೀಡಿದ್ದಾರೆ.
ಇದೊಂದು ಕ್ಲಿಷ್ಟಕರ ಪ್ರಕರಣವಾಗಿದ್ದು, ಸ್ಥಳೀಯ ಪೊಲೀಸರು ಸಾಹೋ ಮತ್ತು ಕಾಲೇಜಿನ ಪ್ರಾಂಶುಪಾಲರಾದ ದಿಲೀಪ್ ಘೋಷ್ ಅವರನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿರುವ ಎಲ್ಲರನ್ನೂ ಗುರುತಿಸುವುದು ಅಪರಾಧ ವಿಭಾಗಕ್ಕೆ ಕಡ್ಡಾಯವಾಗಿದೆ. ಕ್ರೈಂ ಬ್ರಾಂಚ್ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಡಿಜಿಟಲ್ ಪುರಾವೆ ಸಂಗ್ರಹಿಸಿದ್ದು, ಅದನ್ನು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.ಆಂತರಿಕ ದೂರು ಸಮಿತಿ ಸದಸ್ಯರು ಮತ್ತು ಕಾಲೇಜು ಸಿಬ್ಬಂದಿಯ ಹೇಳಿಕೆಗಳನ್ನು ಸಹ ದಾಖಲಿಸಿಕೊಳ್ಳಲಾಗುತ್ತಿದೆ. ಆಕೆಯ ಆತ್ಮಹತ್ಯೆಗೆ ಯಾರಾದರೂ ಪ್ರಚೋದಿಸಿದ್ದಾರಾ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ. ಕ್ರೈಂ ಬ್ರಾಂಚ್ ಈ ಪ್ರಕರಣದಲ್ಲಿ ನ್ಯಾಯ ಸಮ್ಮತ ತನಿಖೆ ನಡೆಸಲಿದ್ದು, 20 ವರ್ಷದ ವಿದ್ಯಾರ್ಥಿನಿಗೆ ನ್ಯಾಯಾ ಕೊಡಿಸುವ ಭರವಸೆ ಹೊಂದಿದೆ ಎಂದರು.

