ಇತ್ತೀಚಿನ ಸುದ್ದಿ
Trending

ಅರ್ಜೆಂಟ್ ಕರೆ ಮಾಡುತ್ತೇನೆಂದು ಮೊಬೈಲ್ ಪಡೆದು ಭಟ್ಕಳ ಠಾಣೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

ಭಟ್ಕಳ ನಗರದ ಪೊಲೀಸರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆವೊಡ್ಡಿದ್ದ ಆರೋಪಿತನನ್ನು ಭಟ್ಕಳ ಶಹರ್​ ಠಾಣೆ ಪೊಲೀಸರು ತಮಿಳುನಾಡಿನಿಂದ ಪತ್ತೆಹಚ್ಚಿ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬೆದರಿಕೆಯ ಇ-ಮೇಲ್ ಸಂದೇಶ: ಜುಲೈ 10 ರಂದು, ಭಟ್ಕಳ ಶಹರ್​ ಪೊಲೀಸ್ ಠಾಣೆಯ ಅಧಿಕೃತ ಇ-ಮೇಲ್ ವಿಳಾಸ bhatkaltownkwr@ksp.gov.in ಗೆ ಎರಡು ಹುಸಿ ಬಾಂಬ್ ಬೆದರಿಕೆಯ ಇ-ಮೇಲ್‌ಗಳು ಬಂದಿದ್ದವು. ಮೊದಲ ಇ-ಮೇಲ್‌ನಲ್ಲಿ “We will plant bomb in Bhatkal town” ಎಂದು, ಹಾಗೂ ಎರಡನೇ ಇ-ಮೇಲ್‌ನಲ್ಲಿ “All the bombs will blast within 24 hours” ಎಂಬ ಸಂದೇಶಗಳಿದ್ದು, ಈ ಎರಡು ಇ-ಮೇಲ್‌ಗಳು kannannandika@gmail.com ಎಂಬ ಇ-ಮೇಲ್ ವಿಳಾಸದಿಂದ ಬಂದಿರುವುದು ದೃಢಪಟ್ಟಿತ್ತು ಎಂದು ಪೊಲೀಸರು ತಿಳಿಸಿದರು.

ಸರ್ಕಾರಿ ಸಂಸ್ಥೆಗಳ ಭದ್ರತೆಗೆ ಭಂಗ ಉಂಟುಮಾಡುವ ಉದ್ದೇಶದಿಂದ ಬಂದ ಈ ಬೆದರಿಕೆ ಸಂದೇಶಗಳ ಹಿನ್ನೆಲೆಯಲ್ಲಿ ಭಟ್ಕಳ ಶಹರ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 84/2025 ಬಿಎನ್ಎಸ್ ಸೆಕ್ಷನ್ 351(4) ಅಡಿಯಲ್ಲಿ ಕೇಸ್​ ದಾಖಲಾಗಿತ್ತು. ತನಿಖೆಯಲ್ಲಿ ಈ ಇ-ಮೇಲ್ ಕಳುಹಿಸಿದ ವ್ಯಕ್ತಿ ಕಣ್ಣನ್ ಗುರುಸ್ವಾಮಿ ಎಂದು ಗುರುತಿಸಲಾಗಿತ್ತು.

ಆರೋಪಿತನನ್ನು ಪತ್ತೆ ಹಚ್ಚಲು ಭಟ್ಕಳ ಶಹರ್​ ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಸ್. ನೇತ್ರತ್ವದಲ್ಲಿ, ಪಿ.ಎಸ್.ಐ ನವೀನ್ ನಾಯ್ಕ ಹಾಗೂ ಸಿಬ್ಬಂದಿ ದಿನೇಶ್ ನಾಯಕ ಮತ್ತು ನಾಗರಾಜ ಮೊಗೇರ ಅವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ತಮಿಳುನಾಡಿಗೆ ಕಳುಹಿಸಲಾಯಿತು. ಈ ತಂಡವು ತಮಿಳುನಾಡು ರಾಜ್ಯದ ತೆನಿ ಜಿಲ್ಲೆಯ ಬೊಡಿನಾಯಕನೂರು ಪಟ್ಟಣದ ತಿರುಮಲಾಪುರಂ ಪ್ರದೇಶದಲ್ಲಿ ಇರುವ ವಿಳಾಸಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದೆ.

ಬಂಧನದ ಬಳಿಕ ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದ್ದು, ಅದರಲ್ಲಿ ದಿನಾಂಕ 10/07/2025 ರಂದು ಬೆಳಗ್ಗೆ 7:22 ಮತ್ತು 7:23ಕ್ಕೆ ಭಟ್ಕಳ ಶಹರ್​ ಠಾಣೆ ಪೊಲೀಸರಿಗೆ ಕಳುಹಿಸಿದ ಬೆದರಿಕೆ ಮೆಸೇಜ್‌ಗಳು ಪತ್ತೆಯಾಗಿವೆ. ಆದರೆ ವಿಚಾರಣೆ ವೇಳೆ ಆರೋಪಿಯು, ತನ್ನ ಮೊಬೈಲ್‌ನ್ನು ಮುನ್ನಾರ ಎಂಬ ಪ್ರದೇಶದಲ್ಲಿ ಏಕಾಂಗಿಯಾಗಿ ನಿಂತಿದ್ದ ವ್ಯಕ್ತಿಯೊಬ್ಬರು ‘ಅರ್ಜೆಂಟ್ ಕರೆ ಮಾಡಲು’ ತೆಗೆದುಕೊಂಡು ಈ ಸಂದೇಶ ಕಳುಹಿಸಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದನು. ಈ ಕುರಿತು ಪರಿಶೀಲಿಸಿದಾಗ ಮುನ್ನಾರ ಠಾಣೆಯ ಪೊಲೀಸರು ತಿಳಿಸಿದಂತೆ, ಸಂಶಯಾಸ್ಪದ ವ್ಯಕ್ತಿ ನಿತೀನ್ ಶರ್ಮಾ ಅಲಿಯಾಸ್ ಖಾಲೀದ್ ಎಂಬಾತನಾಗಿದ್ದು, ಈತನ ವಿರುದ್ಧ ವಿವಿಧ ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುವ ಮಾಹಿತಿ ಲಭ್ಯವಾಗಿತ್ತು ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

ನಿತೀನ್ ಶರ್ಮಾ ವಿರುದ್ಧ ಈಗಾಗಲೇ ಕರ್ನಾಟಕ, ಕೇರಳ, ದೆಹಲಿ, ಮಧ್ಯಪ್ರದೇಶ, ಪುದುಚೇರಿ, ಉತ್ತರಾಖಂಡ, ಒಡಿಶಾ, ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆ ಒಟ್ಟು 16 ಪ್ರಕರಣಗಳು ದಾಖಲಾಗಿದ್ದು, ಈತನು ಇ-ಮೇಲ್ ಮೂಲಕ ಹಲವಾರು ರಾಜ್ಯಗಳ ಪೊಲೀಸರಿಗೆ ಹುಸಿ ಬಾಂಬ್ ಬೆದರಿಕೆ ಹಾಕುತ್ತಿದ್ದನು ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಈತ ಈವರೆಗೆ ನೈನಿತಾಲ್ ಸೇರಿದಂತೆ ಹಲವು ಸ್ಥಳಗಳಲ್ಲಿ ಬೆದರಿಕೆ ಹಾಕಿದ ಆರೋಪದ ಮೇಲೆ ಶಿಕ್ಷೆಗೂ ಒಳಗಾಗಿದ್ದಾನೆ ಎಸ್​ಪಿ ತಿಳಿಸಿದರು.

ಆರೋಪಿತ ನಿತೀನ್ ಶರ್ಮಾ ಪ್ರಸ್ತುತ ಮೈಸೂರು ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿ ಯು.ಟಿ.ಪಿ ನಂ: 1962 ಅಡಿಯಲ್ಲಿ ಬಂಧನದಲ್ಲಿದ್ದಾನೆ. ಭಟ್ಕಳ ಶಹರ್​ ಪೊಲೀಸ್ ಠಾಣೆಯ ಪ್ರಕರಣ ಸಂಖ್ಯೆಯ 84/2025 ರಂತೆ ಈತನನ್ನು ಬಾಡಿ ವಾರೆಂಟ್ ಮೇಲೆ ಕರೆತಂದು ತನಿಖೆ ಮುಂದುವರಿಸಲು ಯೋಜನೆ ರೂಪಿಸಲಾಗಿದೆ.

ಈ ಸಂಕೀರ್ಣ ಹಾಗೂ ಗಂಭೀರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಹೆಚ್ಚುವರಿ ವರಿಷ್ಠಾಧಿಕಾರಿ ಎಂ. ಕೃಷ್ಣಮೂರ್ತಿ ಮತ್ತು ಭಟ್ಕಳ ಉಪ ವಿಭಾಗದ ಉಪಾಧೀಕ್ಷಕ ಮಹೇಶ್​ ಎಂ ಅವರು ಅಭಿನಂದಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button