ಇತ್ತೀಚಿನ ಸುದ್ದಿ

ಬೆಂಗಳೂರಲ್ಲಿನ್ನು ವಾಹನ ಬಿಟ್ಟು ರಸ್ತೆಗಿಳಿಯಲಿದ್ದಾರೆ ಪೊಲೀಸ್‌ ವೃಂದ

ರಾಜಧಾನಿಯಲ್ಲಿ ಅಪರಾಧ ತಡೆ ಹಾಗೂ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಬಲಗೊಳಿಸಲು ಮುಂದಾಗಿರುವ ನಗರ ಪೊಲೀಸ್‌ ವಿಭಾಗ, ‘ಕಾಲ್ನಡಿಗೆ ಗಸ್ತು’ ವ್ಯವಸ್ಥೆ ಜಾರಿಗೊಳಿಸಿದೆ. ಪರಿಣಾಮ ನಗರದ ಪ್ರಮುಖ ಪ್ರದೇಶಗಳಲ್ಲಿ ಇನ್ಮುಂದೆ ಪೊಲೀಸರ ಓಡಾಟ ಹೆಚ್ಚಾಗಲಿದ್ದು, ಅಪರಾಧಿಗಳ ಮೇಲೆ ಹದ್ದಿನ ಕಣ್ಣಿರಲಿದೆ.ಕಾನೂನು ಮತ್ತು ಸುವ್ಯವಸ್ಥೆ ಸದೃಧಿಢಗೊಳಿಸುವ ನಿಟ್ಟಿನಲ್ಲಿ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಬೀಟ್‌ ಸಿಬ್ಬಂದಿ, ಹೊಯ್ಸಳ ಜತೆಗೆ ಪಿಎಸ್‌ಐಗಳು ಪ್ರತಿನಿತ್ಯ ಬೆಳಗ್ಗೆ ಹಾಗೂ ಸಾಯಂಕಾಲ ಕಡ್ಡಾಯವಾಗಿ ಕಾಲ್ನಡಿಗೆ ಗಸ್ತು ತಿರುಗುವಂತೆ ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಸೂಚಿಸಿದ್ದಾರೆ.ನಗರದ ಕೇಂದ್ರ ವಾಣಿಜ್ಯ ಪ್ರದೇಶಗಳಾದ ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಅಶೋಕನಗರ, ಚಿಕ್ಕಪೇಟೆ, ಉಪ್ಪಾರಪೇಟೆ, ಮೆಜೆಸ್ಟಿಕ್‌, ಇಂದಿರಾನಗರ ಸೇರಿ ಹೆಚ್ಚು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಕಾಲ್ನಡಿಗೆ ಗಸ್ತು ಆರಂಭವಾಗಿದೆ. ಇದರಿಂದ ಸಣ್ಣಪುಟ್ಟ ಅಪರಾಧಗಳು ತಕ್ಷಣ ಪೊಲೀಸರ ಗಮನಕ್ಕೆ ಬರುತ್ತಿವೆ. ನಾಗರಿಕರಿಗೂ ಪೊಲೀಸರ ಮೇಲೆ ವಿಶ್ವಾಸ ಹೆಚ್ಚುತ್ತಿದೆ. ಹೀಗಾಗಿ, ನಗರದಾದ್ಯಂತ ಕಾಲ್ನಡಿಗೆ ಗಸ್ತು ಜಾರಿಯಾಗಲಿದೆ ಎಂದು ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ತಿಳಿಸಿದರು.

ವಾಣಿಜ್ಯ ಪ್ರದೇಶಗಳಾದ ಕೋರಮಂಗಲ, ಎಂಜಿ ರಸ್ತೆ, ಇಂದಿರಾನಗರ, ಮೆಜೆಸ್ಟಿಕ್‌, ಚಿಕ್ಕಪೇಟೆಯಂತಹ ಪ್ರದೇಶಗಳಲ್ಲಿ ಕಾಲ್ನಡಿಗೆ ಗಸ್ತು ಹೆಚ್ಚಾಗಲಿದೆ. ಪ್ರಮುಖವಾಗಿ ಹಬ್ಬ, ವಿಶೇಷ ದಿನಗಳಂದು ಈ ಪ್ರದೇಶಗಳಲ್ಲಿ ಹೆಚ್ಚು ಜನ ಸೇರಲಿದ್ದಾರೆ. ವೀಕೆಂಡ್‌ನಲ್ಲಿಯೂ ಜನರ ಪ್ರಮಾಣ ಅಧಿಕವಾಗಿರಲಿದೆ. ಹೀಗಾಗಿ, ಸಣ್ಣಪುಟ್ಟ ಸಂಭಾವ್ಯ ಅಪರಾಧಗಳನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ, ಪೊಲೀಸರು ಅಂತಹ ಪ್ರದೇಶಗಳಲ್ಲಿ ಗಸ್ತಿನಲ್ಲಿದ್ದರೆ ಅಪರಾಧಗಳು ಘಟಿಸುವುದನ್ನು ತಪ್ಪಿಸಬಹುದಾಗಿದೆ. ಜತೆಗೆ, ಅಹಿತಕರ ಘಟನೆಗಳಿಗೆ ತಕ್ಷಣ ಪೊಲೀಸರ ಸ್ಪಂದನೆ ಸಿಗಲಿದೆ. ಅಲ್ಲದೆ, ನಗರದ ಪ್ರಾರ್ಥನಾ ಮಂದಿರಗಳು, ಮಾಲ್‌ಗಳು, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿಯೂ ಕಾಲ್ನಡಿಗೆ ಗಸ್ತು ಹೆಚ್ಚಿಸಲಾಗಿದೆ ಎಂದು ಎಂದು ಆಯುಕ್ತರು ಹೇಳಿದರು.

ನಗರದಲ್ಲಿ ಯಾವುದೇ ಅಪರಾಧ ಸಂಭವಿಸಿದರೆ ಸಂತ್ರಸ್ತರು ಹಾಗೂ ನಾಗರಿಕರು 112ಕ್ಕೆ ಕರೆ ಮಾಡುತ್ತಾರೆ. ಈ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದರು. ಇದರಿಂದ ಅಪರಾಧ ತಡೆ ಸಾಧ್ಯವಿರಲಿಲ್ಲ. ಆದರೆ, ಪೊಲೀಸರು ಅಂತಹ ಪ್ರದೇಶಗಳಲ್ಲಿ ಗಸ್ತಿನಲ್ಲಿದ್ದರೆ ತಕ್ಷಣ ಸಂತ್ರಸ್ತರಿಗೆ ನೆರವು ಸಿಗಲಿದೆ. ಅಪರಾಧಗಳೂ ಘಟಿಸುವುದಿಲ್ಲ. ಇದರಿಂದ ನಾಗರಿಕರಿಗೆ ಪೊಲೀಸರ ಮೇಲೆ ಹೆಚ್ಚು ವಿಶ್ವಾಸವೂ ಬರಲಿದೆ. ಇ-ಬೀಟ್‌ ಸಿಬ್ಬಂದಿ, ಹೊಯ್ಸಳ ಹಾಗೂ ಚೀತಾ ಸಿಬ್ಬಂದಿ ಈಗಾಗಲೇ ವಾಹನಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಇದರ ಜತೆಗೆ ಕಾಲ್ನಡಿಗೆ ಗಸ್ತು ನಡೆಸಿದಾಗ ಆ ಪ್ರದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗಲಿದೆ. ಜನರ ಜತೆಗಿನ ಒಡನಾಟ ಹೆಚ್ಚಲಿದೆ. ಪೊಲೀಸ್‌ ಹಾಗೂ ಜನರ ನಡುವಣ ಅಂತರ ಕಡಿಮೆಯಾಗಲಿದ್ದು, ಜನಸ್ನೇಹಿ ಪೊಲೀಸಿಂಗ್‌ಗೆ ಅನುಕೂಲವಾಗಲಿದೆ ಎಂದು ಪೊಲೀಸ್‌ ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದರು.

ನಗರ ವ್ಯಾಪ್ತಿಯ ಪ್ರತಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ಸ್ ಹಾಗೂ ಎಸಿಪಿಗಳು ಅವರ ವ್ಯಾಪ್ತಿಯಲ್ಲಿನ ರೌಡಿಗಳು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಎಂಒಬಿಗಳ ಪಟ್ಟಿ ತಯಾರಿಸಿ ಅವರ ಚಲನವಲನಗಳ ಮೇಲೆ ನಿಗಾ ಇಟ್ಟಿರಬೇಕು. ಜತೆಗೆ, ಠಾಣಾ ವ್ಯಾಪ್ತಿಯಲ್ಲಿಯಾವ ನಿರ್ದಿಷ್ಟ ಸ್ಥಳಗಳಲ್ಲಿಅಪರಾಧ ಹೆಚ್ಚು ನಡೆಯುತ್ತಿವೆ. ಯಾವ ಸಮಯದಲ್ಲಿಅಪರಾಧಗಳು ಘಟಿಸಿವೆ ಎಂಬುದನ್ನು ವಿಶ್ಲೇಷಣೆ ಮಾಡಿ ಅಂತಹ ಪ್ರದೇಶಗಳಲ್ಲಿ ಕಾಲ್ನಡಿಗೆ ಬೀಟ್‌ ಹೆಚ್ಚಿಸಿ ಅಪರಾಧ ಕೃತ್ಯಗಳನ್ನು ತಡೆಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ.


Related Articles

Leave a Reply

Your email address will not be published. Required fields are marked *

Back to top button