
ಆಡಳಿತ ವ್ಯವಸ್ಥೆಯನ್ನು, ನಾಗರಿಕ ಸೇವೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ನಿರಂತರ ಪ್ರಯತ್ನ ಮಾಡುತ್ತಿದೆ. ಇಪಿಎಫ್, ಆಧಾರ್ ಇತ್ಯಾದಿ ಪ್ರಮುಖ ನಾಗರಿಕ ಸೇವೆಗಳಲ್ಲಿ ಸಾಕಷ್ಟು ನಿಯಮ ಮತ್ತು ಕ್ರಮ ಬದಲಾವಣೆಗಳಾಗಿವೆ. ಮುಂದಿನ ದಿನಗಳಲ್ಲಿ ಆಧಾರ್ ವ್ಯವಸ್ಥೆಯನ್ನು (Aadhaar ecosystem) ಸಮರ್ಪಕವಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ನೀವು ಕುಳಿತ ಜಾಗದಲ್ಲೇ ಹಲವು ಕಾರ್ಯಗಳನ್ನು ಮಾಡಲು ಸಾಧ್ಯವಾಗುವ ರೀತಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಲಿದೆ.ವಿವಿಧ ಸೇವೆಗಳಿಗೆ ನೀವು ಆಧಾರ್ ಕಾಪಿಯನ್ನು ಸಲ್ಲಿಸುತ್ತೀರಿ. ಆದರೆ, ಮುಂದಿನ ದಿನಗಳಲ್ಲಿ ನಿಮಗೆ ಇದರ ಪ್ರಮೇಯ ತಪ್ಪಲಿದೆ. ಆಧಾರ್ನ ಫೋಟೋ ಕಾಪಿ ಬದಲು ಇ-ಆಧಾರ್ ನೀಡಿದರೆ ಸಾಕಾಗುತ್ತದೆ. ಕ್ಯುಆರ್ ಕೋಡ್ ಆಧಾರಿತವಾದ ಹೊಸ ಆ್ಯಪ್ ಸಿದ್ಧವಾಗಿದ್ದು ಅದರ ಮೂಲಕ ನೀವು ಆಧಾರ್ ದಾಖಲೆಯ ಸಾಫ್ಟ್ಕಾಪಿ ಕೊಡಬಹುದು. ನಿಮ್ಮ ಪೂರ್ಣ ಆಧಾರ್ ವಿವರ ಮರೆಮಾಚುವ ಮಾಸ್ಕ್ಡ್ ಆಧಾರ್ ಬೇಕಾದರೂ ನೀಡಬಹುದು. ಅದು ಸಿಂಧುವಾಗಿರುತ್ತದೆ. ನವೆಂಬರ್ನಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ.ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಪ್ರಕಾರ, ಹೊಸ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್ಗಳಿಗಾಗಿ ಮಾತ್ರ ನೀವು ಆಧಾರ್ ಸೆಂಟರ್ಗೆ ಹೋಗಬೇಕಾಗಬಹುದು. ಉಳಿದೆಲ್ಲಾ ಆಧಾರ್ ಕಾರ್ಯಗನ್ನು ನೀವು ಕೂತಲ್ಲಿಂದಲೇ ಮಾಡಬಹುದು. ಆಧಾರ್ನಲ್ಲಿನ ವಿಳಾಸ, ಫೋನ್ ನಂಬರ್, ಹೆಸರು, ಜನ್ಮದಿನಾಂಕ ಇತ್ಯಾದಿ ವಿವರಗಳ ಬದಲಾವಣೆಗೆ ನೀವು ಆಧಾರ್ ಸೆಂಟರ್ಗೆ ಹೋಗಬೇಕಾಗುವುದಿಲ್ಲ.ಹಾಗೆಯೇ, ಜನನ ಪ್ರಮಾಣಪತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಪ್ಯಾನ್, ಪಿಡಿಎಸ್, ಮನ್ರೇಗಾ ಇತ್ಯಾದಿ ಲಭ್ಯ ಇರುವ ನಿಮ್ಮ ದಾಖಲೆಗಳು ನಿಮ್ಮ ಆಧಾರ್ಗೆ ಲಿಂಕ್ ಮಾಡುವ ಅವಕಾಶ ಇದೆ. ವಿದ್ಯುತ್ ಬಿಲ್ ಡಾಟಾಬೇಸ್ ಅನ್ನೂ ಲಿಂಕ್ ಮಾಡಬಹುದು. ಈ ಎಲ್ಲಾ ಡಾಟಾಬೇಸ್ ಅನ್ನು ಬಳಸುವುದರಿಂದ ನಿಮ್ಮ ಎಲ್ಲಾ ದಾಖಲೆ ಮತ್ತು ವಿವರಗಳು ಒಟ್ಟಿಗೆ ಲಭ್ಯವಾಗುತ್ತವೆ. ಇದರಿಂದ ಬೇರೆ ಬೇರೆ ಸೇವೆಗಳಿಗೆ ಬೇರೆ ಬೇರೆ ದಾಖಲೆಗಳನ್ನು ಕೊಡುವ ಅವಶ್ಯಕತೆ ಕಡಿಮೆ ಆಗುತ್ತದೆ. ನಕಲಿ ದಾಖಲೆಗಳನ್ನು ಸೃಷ್ಟಿಸುವವರಿಗೆ ಇನ್ಮುಂದೆ ಕಷ್ಟವಾಗಬಹುದು.
ಹೋಟೆಲ್ಗಳಲ್ಲಿ ಚೆಕ್ ಇನ್ ಆಗುವುದರಿಂದ ಹಿಡಿದು ವಿವಿಧ ಕೆಲಸಗಳಿಗೆ ಗುರುತು ದಾಖಲೆ ಅಗತ್ಯ ಇದ್ದ ಸಂದರ್ಭದಲ್ಲಿ ಕ್ಯುಆರ್ ಕೋಡ್ ಆಧಾರಿತ ಮೊಬೈಲ್ ಆ್ಯಪ್ ಅನ್ನು ಬಳಸಬಹುದು. ಆ ಆ್ಯಪ್ ಮೂಲಕ ಆಧಾರ್ ದಾಖಲೆಯನ್ನು ನೀಡಬಹುದು.ಆಸ್ತಿ ನೊಂದಣಿ ವೇಳೆ ಈ ಪ್ರಯೋಗ ಬಹಳ ಉಪಯೋಗಕ್ಕೆ ಬರಲಿದೆ. ಅಧಾರ್ ಅನ್ನು ದುರ್ಬಳಕೆ ಮಾಡಿಕೊಂಡು ಎಸಗಲಾಗುವ ಅಕ್ರಮಕ್ಕೆ ಕಡಿವಾಣ ಬೀಳಬಹುದು.
ಇದೇ ವೇಳೆ, ಶಾಲಾ ಮಕ್ಕಳಿಗೂ ಆಧಾರ್ ಬಯೋಮೆಟ್ರಿಕ್ ಲಿಂಕ್ ಮಾಡುವ ಕಾರ್ಯ ನಡೆಯುತ್ತಿದೆ.


