ಇತ್ತೀಚಿನ ಸುದ್ದಿ
Trending

ಶಿರಾಡಿ, ಚಾರ್ಮಾಡಿ, ಶಿರೂರಿನಲ್ಲಿ ಭೂಕುಸಿತ

ಉತ್ತರ ಕನ್ನಡ ಜಿಲ್ಲೆಯ ಶಿರೂರು ಭೂಕುಸಿತ (Shirur Landslide) ದುರಂತವಾಗಿ ಇನ್ನೂ ಒಂದು ವರ್ಷ ಕೂಡಾ ಕಳೆದಿಲ್ಲ. ಆಗಲೇ ರಾಜ್ಯದಲ್ಲಿ ಸುರಿಯುತ್ತಿರುವ ಭಯಾನಕ ಮಳೆ ಮತ್ತೆ ಗುಡ್ಡ ಕುಸಿತದ ಭೀತಿ ಸೃಷ್ಟಿಸಿದೆ. ಈಗಾಗಲೇ ಶಿರಾಡಿ ಘಾಟ್‌ (Shoradi Ghat), ಚಾರ್ಮಾಡಿ ಘಾಟ್‌ ಮತ್ತು ಉತ್ತರ ಕನ್ನಡದ ಶಿರೂರಿನಲ್ಲಿ ಹಲವೆಡೆ ಭೂಮಿ ಕುಸಿಯುತ್ತಿದೆ. ಸಂಭಾವ್ಯ ಅಪಾಯಕರ ಜಾಗಗಳನ್ನು ಉತ್ತರಕನ್ನಡ ಜಿಲ್ಲಾಡಳಿತ ಗುರುತಿಸಿದೆ.

ಶಿರೂರು ದುರಂತದಿಂದ ಎಚ್ಚೆತ್ತುಕೊಂಡಿರುವ ಉತ್ತರಕನ್ನಡ ಜಿಲ್ಲಾಡಳಿತ ಸಂಭಾವ್ಯ ಗುಡ್ಡ ಕುಸಿತದ 439 ಸ್ಥಳಗಳನ್ನು ಗುರುತು ಮಾಡಿದೆ. ಈ ಪೈಕಿ 19 ಸೂಕ್ಷ್ಮ ಪ್ರದೇಶಗಳು ಹೆದ್ದಾರಿ ಪಕ್ಕದಲ್ಲಿವೆ. ಹೆದ್ದಾರಿಯ ಈ 19 ಸ್ಥಳಗಳಲ್ಲಿ ವಾಹನ ನಿಲುಗಡೆಯನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್‌ನಲ್ಲಿ ಕಳೆದ ವರ್ಷ ಕುಸಿದ ಜಾಗದಲ್ಲೇ ಮತ್ತೆ ಮಣ್ಣು ಕುಸಿಯುತ್ತಿದೆ. ಆದರೆ, ಅಧಿಕಾರಿಗಳು ಮಣ್ಣು ಕುಸಿಯುತ್ತಿರುವ ಜಾಗವನ್ನು ಪ್ಲಾಸ್ಟಿಕ್‌ನಿಂದ ಮುಚ್ಚಿದ್ದಾರೆ. ಆದರೆ, ತಡೆಗೋಡೆ ಕೂಡಾ ಕುಸಿಯುವ ಸ್ಥಿತಿ ನಿರ್ಮಾಣವಾಗಿದೆ. ಈ ಮಳೆಗಾಲದ ಹೊತ್ತಿಗೆ ಕಾಮಗಾರಿ ಮುಗಿಸುವಂತೆ ಜಿಯಾಲಜಿಕಲ್‌ ಸರ್ವೇ ವಿಜ್ಞಾನಿಗಳು ಹೇಳಿದ್ದರು. ಆದರೆ, ಮಳೆ ಆರಂಭವಾದರೂ ಇನ್ನೂ ಕೂಡಾ ಕೆಲಸ ಮುಗಿದಿಲ್ಲ. ಇದರಿಂದ ಮತ್ತೆ ಆತಂಕ ಸೃಷ್ಟಿಯಾಗಿದೆ.

ಶಿರಾಡಿ ಘಾಟ್‌ನಲ್ಲೂ ಭೂಮಿ ಕುಸಿದಿದೆ. ಭಾರಿ ಮಳೆಯಿಂದ ಶಿರಾಡಿಘಾಟ್‌ನ ಹಲವೆಡೆ ಭೂಕುಸಿತದ ಭೀತಿ ಉಂಟಾಗಿದೆ. ನೂರಾರು ಅಡಿ ಎತ್ತರಕ್ಕೆ ಗುಡ್ಡ ಕಡಿದಿರುವ ಕಾರಣ ಮಣ್ಣು ಕುಸಿಯುವ ಆತಂಕ ಮೂಡಿದೆ. ಆನೆಮಹಲ್‌ ಬಳಿಯೂ ಭಾರಿ ಪ್ರಮಾಣದ ಮಣ್ಣು ರಾಷ್ಟ್ರೀಯ ಹೆದ್ದಾರಿಗೆ ಕುಸಿಯುತ್ತಿದೆ. ಆತಂಕದಲ್ಲೇ ವಾಹನ ಸವಾರರು ಸಂಚರಿಸ್ತಿದ್ದಾರೆ. ಶಿರಾಡಿ ಘಾಟ್‌ ಮಾತ್ರವಲ್ಲ ಸಕಲೇಶಪುರದ ಹಲವೆಡೆ ಇದೇ ರೀತಿಯ ಸ್ಥಿತಿ ನಿರ್ಮಾಣವಾಗಿದೆ. ಮನೆಗಳು ಕೂಡಾ ಕುಸಿಯುವ ಭೀತಿ ಎದುರಾಗಿದೆ.

ಮಳೆ ಅವಾಂತರದ ಬೆನ್ನಲ್ಲೇ ಸಕಲೇಶಪುರ ಭಾಗದ ಶಿರಾಡಿಘಾಟ್‌ಗೆ ಸಂಸದ ಶ್ರೇಯಸ್‌ ಪಟೇಲ್‌ ಸೋಮವಾರ ಭೇಟಿ ನೀಡಿದ್ದಾರೆ. ಇಂದು ವಿಪಕ್ಷ ನಾಯಕ ಆರ್.ಅಶೋಕ್‌ ಕೂಡಾ ಭೂಕುಸಿತ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಶಿರಾಡಿಘಾಟ್‌ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button