
ಪಾವಗಡ: ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಮತ್ತು ಬರಪೀಡಿತ ತಾಲ್ಲೂಕೆಂದು ಪಾವಗಡವನ್ನು ರಾಜ್ಯ ಸರ್ಕಾರ ಘೋಷಿಸಿದ್ದು, ತಾಲ್ಲೂಕಿನಲ್ಲಿ ಜ್ವಲಂತ ಸಮಸ್ಯೆಯಾದ ಕುಡಿಯುವ ನೀರಿನ ವಿಚಾರವಾಗಿ ಹಲವಾರು ಹೋರಾಟಗಳು ನಡೆದಿವೆ. ಹೋರಾಟಗಳ ಫಲವಾಗಿ ತಾಲ್ಲೂಕಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂದು ಪಾವಗಡ ತಾಲ್ಲೂಕು ಸಮಗ್ರ ನೀರು ಹೋರಾಟ ವೇದಿಕೆ ಅಧ್ಯಕ್ಷ ಎಸ್.ಶಿವಪ್ರಸಾದ್ ಹೇಳಿದರು.ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ವಿಷಯುಕ್ತ ನೀರನ್ನು ಕುಡಿದು ರೋಗ ರುಜಿನಗಳಿಗೆ ತುತ್ತಾಗಿ ತಾಲ್ಲೂಕಿನ ಜನ ಅನೇಕ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ದಶಕಗಳಿಂದ ಈ ಸಮಸ್ಯೆ ನಿವಾರಣೆಯಾಗಬೇಕು ಶುದ್ಧ ಕುಡಿಯುವ ನೀರು ತಾಲ್ಲೂಕಿಗೆ ಬರಬೇಕೆಂದು ಕಳೆದ ಅನೇಕ ವರ್ಷಗಳಿಂದ ವಿವಿಧ ಪಕ್ಷಗಳು, ಸಂಘ ಸಂಸ್ಥೆಗಳು ಹೋರಾಟ ಮಾಡಿಕೊಂಡು ಸರ್ಕಾರಕ್ಕೆ ಒತ್ತಡ ಹಾಕುವಂತಹ ಕೆಲಸ ಮಾಡಿದ್ದಾರೆ.ಶುದ್ಧ ಕುಡಿಯುವ ನೀರಿಗಾಗಿ 2010ರಿಂದ ದೊಡ್ಡ ಮಟ್ಟದಲ್ಲಿ ಹೋರಾಟಗಳು ಪ್ರಾರಂಭವಾದವು. 2012ರಲ್ಲಿ ಪಾವಗಡದಿಂದ ಬೆಂಗಳೂರು ತನಕ ಪಾದಯಾತ್ರೆ ಮಾಡಿ ಸರ್ಕಾರದ ಗಮನ ಸೆಳೆಯಲಾಯಿತು.
2015ರಲ್ಲಿ 37 ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿತ್ತು.ವಿಷಯುಕ್ತ ನೀರಿನಿಂದ ತಾಲ್ಲೂಕಿನ ಜನತೆ ಪಾರಾಗಬೇಕು ಆರೋಗ್ಯವಂತ ಜೀವನ ನಡೆಸಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟಗಳು ನಡೆದಿವೆ.ಅದೇ ರೀತಿಯಲ್ಲಿ ಭದ್ರ ಮೇಲ್ದಂಡೆ ಯೋಜನೆಯಡಿ ಹಂಚಿಕೆಯಾದ 39 ಕೆರೆಗಳಿಗೆ ಮತ್ತು ಎತ್ತಿನಹೊಳೆ ಯೋಜನೆಯಡಿ 19 ಕೆರೆಗಳಿಗೆ ನೀರು ತುಂಬುವ ಕೆಲಸ ಆಗಬೇಕು.ಇನ್ನುಳಿದ ಕೆರೆಗಳಿಗೂ ನೀರು ತುಂಬಿಸಿದಾಗ ಮಾತ್ರ ನಮ್ಮ ಹೋರಾಟ ಯಶಸ್ವಿಯಾಗುತ್ತದೆ.ಹೊಸಪೇಟೆ ಜಲಾಶಯ, ಭದ್ರಾ ಮೇಲ್ದಂಡೆ ಯೋಜನೆ ಮತ್ತು ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳ್ಳಲು ಹೋರಾಟದ ಮೂಲಕ ಒತ್ತಾಯಿಸಿದ ಎಲ್ಲಾ ಸಂಘ ಸಂಸ್ಥೆಗಳ ಹೋರಾಟಗಾರರನ್ನು ವೇದಿಕೆ ವತಿಯಿಂದ ಏ.21 ಸೋಮವಾರದಂದು ಸನ್ಮಾನಿಸಲಾಗುವುದು ಎಂದರು.
ವೇದಿಕೆ ಕಾರ್ಯದರ್ಶಿ ಸೊಗಡು ವೆಂಕಟೇಶ್ ಮಾತನಾಡಿ, ತುಂಗಭದ್ರಾ ಜಲಾಶಯದ ನೀರು ಪಾವಗಡಕ್ಕೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಹೋರಾಟಗಾರರಿಗೆ ಸನ್ಮಾನ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಕ್ಷಾತೀತವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ನಗರಾಲಂಕಾರ ಮಾಡಿಸಿ, 200 ಜನ ಕಲಾ ತಂಡಗಳಿಂದ ಮೆರವಣಿಗೆ ಮೂಲಕ ಗುರುಭವನ ಮೈದಾನದಿಂದ ಹೊರಟು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಸ್.ಎಸ್.ಕೆ ಬಯಲು ರಂಗಮಂದಿರದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಪೂಜಾರಪ್ಪ, ರೈತ ಸಂಘದ ಅಧ್ಯಕ್ಷ ಜಿ.ನರಸಿಂಹರೆಡ್ಡಿ, ಮುಖಂಡರಾದ ಶಿವಕುಮಾರ್ ಸಾಕೇಲ್, ರಾಜಶೇಖರಪ್ಪ, ಪುರುಷೋತ್ತಮ್ ರೆಡ್ಡಿ, ಜಿ.ಟಿ.ಗಿರೀಶ್, ಡಾ.ಕೆ.ಎಂ.ಪ್ರಭಾಕರ್, ಕಾವಲಗೇರಿ ರಾಮಾಂಜಿ, ಬ್ಯಾಡನೂರು ಶಿವು ಮತ್ತಿತರರು ಇದ್ದರು.



