Country
Trending

ಮಾರ್ಚ್​​ನಲ್ಲಿ ಶೇ. 2.05ಕ್ಕೆ ಇಳಿದ ಸಗಟು ಹಣದುಬ್ಬರ ದರ

ನವದೆಹಲಿ: ಸಗಟು ದರ ಸೂಚಿ ಆಧಾರಿತ ಹಣದುಬ್ಬರ ಮಾರ್ಚ್ ತಿಂಗಳಲ್ಲಿ ಶೇ. 2.05ರಷ್ಟಿದೆ. ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಡಬ್ಲ್ಯುಪಿಐ ಹಣದುಬ್ಬರ ಶೇ. 2.51 ಮತ್ತು ಶೇ. 2.38ರಷ್ಟಿತ್ತು. ಹಿಂದಿನ ಎರಡು ತಿಂಗಳಿಗಿಂತ ಮಾರ್ಚ್ ತಿಂಗಳಲ್ಲಿ ಹಣದುಬ್ಬರ ತಗ್ಗಿದೆ. ಮುಖ್ಯ ಹಣದುಬ್ಬರವು ಫೆಬ್ರುವರಿಯಲ್ಲಿ ಶೇ. 1.30ರಷ್ಟಿದ್ದದ್ದು ಮಾರ್ಚ್​​ನಲ್ಲಿ ಶೇ. 1.50ಕ್ಕೆ ಇಳಿದಿದೆ. ಉತ್ಪಾದಿತ ವಸ್ತುಗಳ ಬೆಲೆ ಮತ್ತು ಇಂಧನ ಬೆಲೆ ಹೆಚ್ಚಾಗಿದ್ದರೂ ಡಬ್ಲ್ಯುಪಿಐ ಹಣದುಬ್ಬರ ಇಳಿಕೆಯಾಗಿರುವುದು ಗಮನಾರ್ಹ. ಇದಕ್ಕೆ ಕಾರಣ, ಆಹಾರವಸ್ತುಗಳ ಬೆಲೆ ಏರಿಕೆಯ ಬಿಸಿ ಸಾಕಷ್ಟು ಕಡಿಮೆ ಆಗಿರುವುದು.ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶದ ಪ್ರಕಾರ, ಆಹಾರ ವಸ್ತು, ಕಚ್ಛಾ ಪೆಟ್ರೋಲಿಯ ಇತ್ಯಾದಿ ಪ್ರಾಥಮಿಕ ವಸ್ತುಗಳ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 2.81ರಷ್ಟಿದ್ದದ್ದು ಮಾರ್ಚ್​​ನಲ್ಲಿ ಶೇ. 0.76ಕ್ಕೆ ಇಳಿದಿದೆ.ಎಲ್​​ಪಿಜಿ, ಪೆಟ್ರೋಲ್ ಇತ್ಯಾದಿ ಇರುವ ಇಂಧನ ವಿಭಾಗದ ಹಣದುಬ್ಬರವು ಮೈನಸ್ 0.71 ಇದ್ದದ್ದು 0.20ಕ್ಕೆ ಏರಿದೆ. ಅಧಿಕ ವೈಟೇಜ್ ಇರುವ ಉತ್ಪಾದಿತ ವಸ್ತುಗಳ ಹಣದುಬ್ಬರವು ಶೇ. 2.86ರಿಂದ ಶೇ. 3.07ಕ್ಕೆ ಏರಿದೆ.

ಆದರೆ, ಆಹಾರವಸ್ತುಗಳ ಬೆಲೆ ಏರಿಕೆಯು ಗಣನೀಯವಾಗಿ ತಗ್ಗಿರುವ ಕಾರಣದಿಂದ, ಇಂಧನ ಮತ್ತು ಉತ್ಪಾದಿತ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ಎದ್ದುಕಂಡಿಲ್ಲ.

ಆಹಾರವಸ್ತುಗಳ ಪೈಕಿ ಗಣನೀಯವಾಗಿ ಬೆಲೆ ಇಳಿಕೆ ಆಗಿರುವುದು ತರಕಾರಿ, ಈರುಳ್ಳಿ, ಆಲೂಗಡ್ಡೆಯದ್ದು. ತರಕಾರಿಗಳ ಡಬ್ಲ್ಯುಪಿಐ ಹಣದುಬ್ಬರ ಫೆಬ್ರುವರಿಯಲ್ಲಿ ಮೈನಸ್ 5.80 ಇತ್ತು. ಮಾರ್ಚ್​​ನಲ್ಲಿ ಅದು ಮೈನಸ್ 15.88ಕ್ಕೆ ಇಳಿದಿದೆ. ಆಲೂಗಡ್ಡೆ ಬೆಲೆ ಇನ್ನೂ ಪ್ರಚಂಡವಾಗಿ ಇಳಿದಿದೆ. ಫೆಬ್ರುವರಿಯಲ್ಲಿ 27.54 ಇದ್ದ ಹಣದುಬ್ಬರವು ಮಾರ್ಚ್​​ನಲ್ಲಿ ಮೈನಸ್ 6.77ಕ್ಕೆ ಇಳಿದಿದೆ. ಈರುಳ್ಳಿ ಹೋಲ್​​ಸೇಲ್ ಬೆಲೆಯೂ ಕೂಡ ಆಲೂಗಡ್ಡೆಯಂತೆ ಭರ್ಜರಿಯಾಗಿ ಇಳಿದಿದೆ.

ಈ ಕಾರಣಕ್ಕೆ ಒಟ್ಟಾರೆ ಹೋಲ್​​ಸೇಲ್ ಹಣದುಬ್ಬರವು ಮಾರ್ಚ್​​ನಲ್ಲಿ ತುಸು ಕಡಿಮೆ ಆಗಿದೆ. ಇದು ಮಾರ್ಚ್ ತಿಂಗಳ ರೀಟೇಲ್ ಹಣದುಬ್ಬರದ ಮೇಲೂ ಪರಿಣಾಮ ಬಿದ್ದಿರಬಹುದು. ಕೆಲವೇ ದಿನಗಳಲ್ಲಿ ರೀಟೇಲ್ ಹಣದುಬ್ಬರದ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಲಿದೆ.

Related Articles

Leave a Reply

Your email address will not be published. Required fields are marked *

Back to top button