
ದಾವಣಗೆರೆ: ಜನಸಾಮಾನ್ಯರಿಗೆ ತುರ್ತು ಆರೋಗ್ಯ ಸೇವೆ ಸಿಗಲಿ ಅಂತ ಸರ್ಕಾರ ರಾಜ್ಯದಲ್ಲಿ 108 – ಆರೋಗ್ಯ ಕವಚ ಆಂಬ್ಯುಲೆನ್ಸ್ ಒದಗಿಸಿದೆ. ಆದರೆ, ಜಿಲ್ಲೆಯಲ್ಲಿ ಇವುಗಳ ಕೊರತೆಯಿಂದ ಜನಸಾಮಾನ್ಯರಿಗೆ ತುರ್ತು ಆರೋಗ್ಯ ಸೇವೆ ಸಿಗುತ್ತಿಲ್ಲ. ಸಕಾಲಕ್ಕೆ ಘಟನಾ ಸ್ಥಳಕ್ಕೂ ಧಾವಿಸುತ್ತಿಲ್ಲ ಎಂದು ಸ್ಥಳೀಯರು ಬೇಸರ ಹೊರಹಾಕುತ್ತಿದ್ದಾರೆ. ಜಿಲ್ಲೆಗೆ ಕೇವಲ 13 ಆಂಬ್ಯುಲೆನ್ಸ್ ಸೇವೆ ನೀಡುತ್ತಿದ್ದು, ಕೆಲವು ಆಂಬ್ಯುಲೆನ್ಸ್ ರಿಪೇರಿಗೆ ಹೋಗಿವೆ. ಇದರಿಂದ ಈ ಸಮಸ್ಯೆ ಉದ್ಭವಿಸಿರಬಹುದು ಎನ್ನುತ್ತಾರೆ ಡಿಹೆಚ್ಓ.ತುರ್ತು ಆರೋಗ್ಯ ಸೇವೆಗಾಗಿ ಜಿಲ್ಲೆಯಲ್ಲಿ ಕೇವಲ 13 ಆಂಬ್ಯುಲೆನ್ಸ್ ಸೇವೆ ನೀಡುತ್ತಿದ್ದು, ಜನಸಾಮಾನ್ಯರಿಗೆ ತುರ್ತು ಆರೋಗ್ಯ ಸೇವೆ ಸಿಗುತ್ತಿಲ್ಲ. ಸರ್ಕಾರ ನೀಡಿರುವ 19 ರಲ್ಲಿ 6 ಆಂಬ್ಯುಲೆನ್ಸ್ ವಯೋಸಹಜ ಸಮಸ್ಯೆಗಳಿಂದ ಗ್ಯಾರೇಜ್ ಹೋಗಿವೆ. ಹಾಗಾಗಿ ತುರ್ತು ಆರೋಗ್ಯ ಸೇವೆ ಸಿಗುತ್ತಿಲ್ಲ. ಕರೆ ಮಾಡಿದರೆ, ಸಕಾಲಕ್ಕೆ ಘಟನಾ ಸ್ಥಳಕ್ಕೂ ಧಾವಿಸುತ್ತಿಲ್ಲ. ಜಿಲ್ಲಾ ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ಕೆಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಾಲ್ಕೈದು ಆಂಬ್ಯುಲೆನ್ಸ್ ಇದ್ದು, ಕಿ.ಮೀ 10 ರೂ. ಅಂತೆ ಸೇವೆ ನೀಡುತ್ತಿವೆ. ಇಷ್ಟು ದೊಡ್ಡ ಜಿಲ್ಲೆಗೆ 13 ಆಂಬ್ಯುಲೆನ್ಸ್ ಸೇವೆ ತುಂಬಾ ಕಡಿಮೆ. ರಿಪೇರಿಗೆ ಹೋಗಿರುವ 6 ಆಂಬ್ಯುಲೆನ್ಸ್ ಯಾವಾಗ ರಸ್ತೆಗೆ ಇಳಿಯುತ್ತವೆ ಅನ್ನೋದು ಗೊತ್ತಿಲ್ಲ. ಈ ಕಿರಿಕಿರಿ ಪದೇ ಪದೆ ಆಗುತ್ತಿರುವುದರಿಂದ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಸರ್ಕಾರದ ಗಮಕ್ಕೆ ತಂದು ಸುಸ್ತಾಗಿದ್ದಾರೆ ಎಂದು ಸ್ಥಳೀಯರು ಬೇಸರ ಹೊರಹಾಕುತ್ತಿದ್ದಾರೆ.
ಸಮಸ್ಯೆ ಮುಂದುವರೆದರೆ ಹೋರಾಟ: ಸಮಸ್ಯೆ ಹೀಗೆ ಮುಂದುವರೆದರೆ ಹೋರಾಟ ಮಾಡಬೇಕಾಗುತ್ತದೆ. 6 ಆಂಬ್ಯುಲೆನ್ಸ್ ಕೆಟ್ಟು ಗ್ಯಾರೇಜ್ ಸೇರಿರುವುದು ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ. ಸರ್ಕಾರ 19 ಆಂಬ್ಯುಲೆನ್ಸ್ ನೀಡಿದ್ದು, ಅದರಲ್ಲಿ 6 ಕೆಟ್ಟು ನಿಂತಿವೆ. 13 ಆಂಬ್ಯುಲೆನ್ಸ್ ರನ್ನಿಂಗ್ ಇದ್ದು, ದಾವಣಗೆರೆ ದೊಡ್ಡ ಜಿಲ್ಲೆ ಆಗಿದ್ದರಿದ ಸಾಕಾಗಲ್ಲ. ಅಲ್ಲದೇ ಈ ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಘಟನಾ ಸ್ಥಳಕ್ಕೆ ತೆರಳಬೇಕು. ಆದರೆ, ತೆರಳುತ್ತಿಲ್ಲ, ಇದು ತಕ್ಷಣ ಸರಿಯಾಗಬೇಕು ಎನ್ನುತ್ತಾರೆ ಹೋರಾಟಗಾರ ಆವರಗೆರೆ ವಾಸು.
ಹೆರಿಗೆಯಾದ ಬಳಿಕ ಬಾಣಂತಿಯರಿಗೆ ಆಸ್ಪತ್ರೆಯಿಂದ ಮನೆಗೆ ಆಂಬ್ಯುಲೆನ್ಸ್ ಮೂಲಕ ಬಿಟ್ಟು ಬರಬೇಕಾಗುತ್ತದೆ. ಅದರೆ ಆ ಕೆಲಸ ಕೂಡ ಆಗುತ್ತಿಲ್ಲ. ಬಾಣಂತಿಯರು ಬಸ್, ಆಟೋ ಮೂಲಕ ಮನೆ ಸೇರುವ ಪರಿಸ್ಥಿತಿ ಇದೆ. ಬಾಣಂತಿಯರನ್ನು ಆಂಬ್ಯುಲೆನ್ಸ್ ಮನೆಗೆ ಬಿಟ್ಟು ಬರುವ ವ್ಯವಸ್ಥೆ ಮಾಡಬೇಕು. ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶ ಮಾಡಿ ಸರಿಪಡಿಸಬೇಕು. ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ಗೆ ಕಿ.ಮೀ 10 ರೂಪಾಯಿ ನಿಗದಿ ಮಾಡಿದ್ದಾರೆ. ಅದನ್ನು ತಕ್ಷಣ ನಿಲ್ಲಿಸಬೇಕು. ಜಿಲ್ಲಾಡಳಿತ ಪರಿಶೀಲನೆ ನಡೆಸಿ ಇದನ್ನು ನಿಲ್ಲಿಸಬೇಕು. ಸರಿಯಾಗದಿದ್ದರೆ ಹೋರಾಟ ಮಾಡುವುದಾಗಿ ವಾಸು ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 25 ಆಂಬ್ಯುಲೆನ್ಸ್ಗಳಿವೆ. 25ರ ಪೈಕಿ 19 ಆಂಬ್ಯುಲೆನ್ಸ್ಗಳಿದ್ದು, ಅದರಲ್ಲಿ 13 ಚೆನ್ನಾಗಿದ್ದು, 6 ಮೂಲೆಗುಂಪಾಗಿವೆ. ಜಿಲ್ಲಾ ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 6 ಆಂಬ್ಯುಲೆನ್ಸ್ಗಳಿವೆ. ಸರ್ಕಾರಿ ಆಂಬ್ಯುಲೆನ್ಸ್ಗಳಿಗೆ ಚಾಲಕರಿದ್ದಾರೆ. ಇದನ್ನು ಇಎಮ್ಆರ್ಐ ಏಜೆನ್ಸಿಗೆ ನೀಡಲಾಗಿದ್ದು, ಸಿಬ್ಬಂದಿ ಶಿಫ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಆಂಬ್ಯುಲೆನ್ಸ್ ಸರಿಯಾಗಿ ಸಮಯಕ್ಕೆ ಬರುತ್ತಿಲ್ಲವೆಂದು ಜನರು ಹೇಳುತ್ತಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ನಮ್ಮಲ್ಲಿ ಕೆಲವು ಆಂಬ್ಯುಲೆನ್ಸ್ ಕೆಟ್ಟು ನಿಂತಿದ್ದರಿಂದ ಸಮಸ್ಯೆ ಉಂಟಾಗಿರುಬಹುದು. ಅದನ್ನು ಸರಿಪಡಿಸಲಾಗುವುದು. ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಸ್ಪಂದಿಸಬೇಕು. ಅವು ಆನ್ ರೋಡ್ ಇರಬೇಕು. ಕೆಟ್ಟು ನಿಂತಿರುವ ಆಂಬ್ಯುಲೆನ್ಸ್ ಶೀಘ್ರದಲ್ಲೇ ಆನ್ ರೋಡ್ಗೆ ಬರುವಂತೆ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಡಿಹೆಚ್ಓ ಡಾ. ಷಣ್ಮುಖಪ್ಪ.ಎಸ್ ಅವರು ಮಾಹಿತಿ ನೀಡಿದ್ದಾರೆ.