ನಗರಸಭೆ
Trending

ಇತ್ತ ಡಿಕೆಶಿ ವಿರುದ್ಧ ಸಂಘರ್ಷ, ಅತ್ತ ಡಿಸಿಎಂ ಸಂಬಂಧಿ ರಂಗನಾಥ್‌ ಜತೆ ಒಡನಾಟ!

ಬೆಂಗಳೂರು: ಡಿಕೆ ಸಹೋದರರು ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ನಡುವೆ ಸಂಘರ್ಷ ಮುಂದುವರಿದಿರುವ ಬೆನ್ನಲ್ಲೆ ಕಳೆದ ಮೂರು ದಿನಗಳಿಂದ ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಸೋದರ ಸಂಬಂಧಿಯೂ ಆದ ಕುಣಿಗಲ್‌ ಶಾಸಕ ಡಾ. ರಂಗನಾಥ್‌ ಹಾಗೂ ಮುನಿರತ್ನ ನಡುವಿನ ನಿರಂತರ ಒಡನಾಟ ಹಾಗೂ ಆಪ್ತ ಸಮಾಲೋಚನೆ ಕುತೂಹಲ ಮೂಡಿಸಿದೆ.ವಿಧಾನಸಭೆಯಲ್ಲಿ ಮುನಿರತ್ನ ಅಸನದ ಬಳಿಗೆ ಹೋಗಿ ಚರ್ಚಿಸುವುದು ಹಾಗೂ ರಂಗನಾಥ್‌ ಬಳಿಗೆ ಮುನಿರತ್ನ ಹೋಗಿ ಚರ್ಚಿಸುವುದು ಮೂರು ದಿನಗಳಿಂದ ನಡೆಯುತ್ತಲೇ ಇದೆ.ಶುಕ್ರವಾರ ಡಾ. ರಂಗನಾಥ್‌ ಅವರು ಪ್ರತಿಪಕ್ಷ ಸಾಲಿನತ್ತ ಬಂದು ಡಾ. ಅಶ್ವಥನಾರಾಯಣ ಅವರನ್ನು ಮಾತನಾಡಿಸಿ, ಮುನಿರತ್ನ ಅವರಿಗೆ ಕೈಸನ್ನೆ ಮಾಡಿದರು. ಬಳಿಕ, ಇಬ್ಬರೂ ಜೆಡಿಎಸ್‌ ಸಾಲಿನ ಹಿಂಬದಿ ಆಸನಗಳಲ್ಲಿ ಕುಳಿತು ಗಹನ ಚರ್ಚೆಯಲ್ಲಿ ತೊಡಗಿದ್ದು ಕಂಡುಬಂತು.ಡಿಸಿಎಂ ಡಿ.ಕೆ. ಶಿವಕುಮಾರ್‌, ಡಿ.ಕೆ. ಸುರೇಶ್‌ ಸೋದರರು ಹಾಗೂ ಮುನಿರತ್ನ ನಡುವೆ ಬಹುದಿನಗಳಿಂದ ಸಂಘರ್ಷ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಕಮಿಷನ್‌ ದಂಧೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಬೆಂಗಳೂರು ನಗರ ಉಸ್ತುವಾರಿ ಬದಲಿಸುವಂತೆ ಮುನಿರತ್ನ ಅವರು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಡಿಸಿಎಂ ವಿರುದ್ಧ ನೇರವಾಗಿ ತಿರುಗಿಬಿದ್ದಿದ್ದರು. ಈ ಬೆಳವಣಿಗೆ ನಡುವೆಯೇ ರಂಗನಾಥ್‌ ಮತ್ತು ಮುನಿರತ್ನ ಮಾತುಕತೆ ಗಮನ ಸೆಳೆದಿದೆ.

ಬೆಂಗಳೂರಿನ ಒಳಿತಿನ ದೃಷ್ಟಿಯಿಂದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಂದ ಬೆಂಗಳೂರು ಉಸ್ತುವಾರಿ ಖಾತೆ ಹಿಂಪಡೆದು ಬೇರೆಯವರಿಗೆ ನೀಡುವಂತೆ ಬಿಜೆಪಿ ಶಾಸಕ ಮುನಿರತ್ನ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು.ಈ ಸಂಬಂಧ ಪತ್ರ ಬರೆದಿದ್ದ ಮುನಿರತ್ನ, ಡಿಸಿಎಂ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದ್ದರು. 2025-26ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ನೀಡುವ ಅನುದಾನದಡಿ ಗುತ್ತಿಗೆ ಪಡೆಯಲು ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳ ಸಹಚರರು, ಪ್ರಭಾವಿ ಗುತ್ತಿಗೆದಾರರು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದ್ದ ಅವರು, ಈಗಾಗಲೇ ಆ ಗುತ್ತಿಗೆದಾರರು ಶೇಕಡಾ 12ರಷ್ಟು ಮುಂಗಡ ನೀಡಿದ್ದಾರೆ. ಕಾರ್ಯಾದೇಶ ಪತ್ರ ನೀಡಿದ ಬಳಿಕ ಶೇಕಡಾ 8ರಷ್ಟು ಹಣ ಹಾಗೂ ಅನುದಾನ ಬಿಡುಗಡೆಗೆ ಶೇಕಡಾ 15ರಷ್ಟು ಹಣ ಸೇರಿದಂತೆ ಒಟ್ಟು ಶೇಕಡಾ 35ರಷ್ಟು ಹಣ ನೀಡಲಾರಂಭಿಸಿದ್ದಾರೆ ಎಂದು ಮುನಿರತ್ನ ಗಂಭೀರ ಆಪಾದನೆ ಮಾಡಿದ್ದರು,ನಗರದಲ್ಲಿಅಪಾರ್ಟ್‌ಮೆಂಟ್‌ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿಗೆ ಮುಂಚಿತವಾಗಿ ಪ್ರತಿ ಚದರ ಅಡಿಗೆ 150 ರೂಪಾಯಿ ಕಮಿಷನ್‌, ಎಲ್‌ಒಸಿ ನೀಡಿಕೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ದೂರಿದ್ದ ಅವರು, ಇದರಿಂದ ಐಟಿ, ಬಿಟಿ ಕಂಪನಿಗಳು ಹೈದರಾಬಾದ್‌ಗೆ ವಲಸೆ ಹೋಗುತ್ತಿವೆ ಎಂದು ಹೇಳಿದ್ದರು.ಮುಂದುವರಿದು ಬೆಂಗಳೂರು ನಗರಕ್ಕೆ ಒಳ್ಳೆಯ ಹೆಸರು ಬರಬೇಕೆಂದರೆ ಬೆಂಗಳೂರು ಉಸ್ತುವಾರಿ ಖಾತೆಯನ್ನು ಸಚಿವರಾದ ರಾಮಲಿಂಗಾರೆಡ್ಡಿ ಇಲ್ಲವೇ ಕೆಜೆ ಜಾರ್ಜ್‌ ಅವರಿಗೆ ನೀಡಬಹುದು. ಇಲ್ಲವೇ ಕೃಷ್ಣ ಬೈರೇಗೌಡ, ಎಂ ಕೃಷ್ಣಪ್ಪ, ದಿನೇಶ್‌ ಗುಂಡೂರಾವ್‌ ಅವರಿಗೆ ಕೊಡಬಹುದು ಎಂದು ಸಲಹೆಯನ್ನೂ ನೀಡಿದ್ದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳುತ್ತಿರುವ 2 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಲ್ಲಿಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಶೇಕಡಾ 15 ಕಮಿಷನ್‌ ಪಡೆದು ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ ಮುನಿರತ್ನ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೂ ದೂರು ನೀಡಿದ್ದರು.‘‘ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಗುತ್ತಿಗೆಯನ್ನು ಆಂಧ್ರಪ್ರ ದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರ ಸಂಬಂಧಿಗಳಿಗೆ ಗುತ್ತಿಗೆ ನೀಡಲು ಡಿಕೆ ಶಿವಕುಮಾರ್‌ ಮುಂದಾಗಿದ್ದಾರೆ,” ಎಂದು ಹೇಳಿದ್ದ ಅವರು, “ಡಿಕೆ ಶಿವಕುಮಾರ್‌ ಅವರ ಪರವಾಗಿ ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್‌ಗೌಡ ಗುತ್ತಿಗೆದಾರರಿಂದ ಶೇಕಡಾ 15 ಕಮಿಷನ್‌ ಈಗಾಗಲೇ ಪಡೆದಿದ್ದಾರೆ,’’ ಎಂದು ದೂರಿನಲ್ಲಿ ಆರೋಪಿಸಿದ್ದರು.‘‘ವಿವಿಧ ಕಾಮಗಾರಿಗಳ ಗುತ್ತಿಗೆ ನೀಡಲು ಟೆಂಡರ್‌ ಅನ್ನು ಕರೆಯದೆ ಗುತ್ತಿಗೆ ನೀಡುವ ತೀರ್ಮಾನ ಕೈಗೊಂಡು ಅಕ್ರಮ ನಡೆಸಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ನೇರವಾಗಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ರಾಜ್ಯದ ಗುತ್ತಿಗೆದಾರರ ಬಿಡ್‌ಗಳನ್ನು ಅನಗತ್ಯವಾಗಿ ತಿರಸ್ಕರಿಸುತ್ತಿದ್ದಾರೆ. ಕೆಲವು ಕಾಮಗಾರಿಗಳ ಲ್ಲಿತಮ್ಮದೇ ಬೇನಾಮಿ ಕಂಪನಿಗಳ ಮೂಲಕ ಟೆಂಡರ್‌ ಪ್ರಕ್ರಿಯೆಯಲ್ಲಿಯೂ ಭಾಗಿಯಾಗಿದ್ದು, ಗುತ್ತಿಗೆ ಪಡೆದಿದ್ದಾರೆ,’’ ಎಂದು ಹೇಳಿದ್ದರು.‘‘ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸ್ಟಾರ್‌ ಚಂದ್ರು ಅವರ ಸ್ಟಾರ್‌ ಬಿಲ್ಡರ್ಸ್‌ಗೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 232 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳ ಗುತ್ತಿಗೆ ನೀಡಲಾಗಿದ್ದು, ಈ ಅಕ್ರಮಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು,’’ ಎಂದು ದೂರಿನಲ್ಲಿ ಕೋರಿದ್ದರು.


Related Articles

Leave a Reply

Your email address will not be published. Required fields are marked *

Back to top button