
ಬೆಂಗಳೂರು: 2025 – 26 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮಕ್ಕಳು ಕೂಡ ಮತ್ತೆ ಶಾಲೆಗಳತ್ತ (School) ಮುಖ ಮಾಡಲು ಸಜ್ಜಾಗುತ್ತಿದ್ದಾರೆ. ಆದರೆ ಶಾಲಾ ಶಿಕ್ಷಣ ಇಲಾಖೆ (Department of School Education) ಮಾತ್ರ ಶಾಲೆಗಳ ಪುನರ್ ಆರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಂತೆ ಕಾಣುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ ಈಗಾಗಲೇ ಇದ್ದು, ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಸಹ ಮುಂದಾಗಿಲ್ಲ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಒಟ್ಟಾರೆ ಶೇ 66 ರಷ್ಟು ವಿಧ್ಯಾರ್ಥಿಗಳು ತೇರ್ಗಡೆಯಾಗಿದ್ದು, ನಿರೀಕ್ಷಿತ ಮಟ್ಟ ತಲುಪಿಲ್ಲ. ಇನ್ನು ಮುಂದಿನ ಶೈಕ್ಷಣಿಕ ವರ್ಷ ಮೇ 29 ರಿಂದ ಆರಂಭವಾಗಲಿದ್ದು, ಮಕ್ಕಳು ಕೂಡ ಶಾಲೆಗಳತ್ತ ಮುಖ ಮಾಡಲು ಸಜ್ಜಾಗುತ್ತಿದ್ದಾರೆ. ಆದರೆ ಈ ಬಾರಿಯೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದ್ದು, ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಖಾಯಂ ಶಿಕ್ಷಕರ ಕೊರತೆ ಈಗಾಗಲೇ ಇದ್ದು, ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಹ ಶಿಕ್ಷಣ ಇಲಾಖೆ ಅಗತ್ಯ ಕ್ರಮ ಇನ್ನೂ ಕೈಗೊಂಡಿಲ್ಲ.ಈ ವಿಚಾರವಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಳವಳ ವ್ಯಕ್ತಪಡಿಸಿದ್ದು, ಸರ್ಕಾರಿ ಶಾಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದ್ದು, ಇದನ್ನು ನೀಗಿಸುವಂತೆ ಮನವಿ ಮಾಡಿದೆ.
ಇನ್ನು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ ಪೋಷಕರ ವಲಯದಲ್ಲಿ ತೀವ್ರ ಆತಂಕ ಎದುರಾಗಿದೆ. ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ ನೀಗಿಸುವಲ್ಲಿ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು, ಇದು ಸರ್ಕಾರಿ ಶಾಲಾ ಮಕ್ಕಳ ಓದಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಅಂತ ಹೇಳಿದ್ದಾರೆ.ಈ ಬಗ್ಗೆ ಮಾತನಾಡಿರುವ ಪೋಷಕರ ಹೋರಾಟ ಸಮಿತಿ ಅಧ್ಯಕ್ಷ ಯೋಗಾನಂದ, ಅತಿಥಿ ಶಿಕ್ಷಕರ ನೇಮಕವು ಕೂಡ ಅವೈಜ್ಞಾನಿಕವಾಗಿದೆ, ನುರಿತ ಶಿಕ್ಷಕರ ನೇಮಕದಿಂದ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಸುಧಾರಣೆ ಆಗಲಿದೆ ಅಂತ ಹೇಳಿದ್ದಾರೆ.
ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಂಠಿತ ಆಗುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳತ್ತ ಪೋಷಕರು ಆಸಕ್ತಿ ತೋರುತ್ತಿದ್ದಾರೆ. ಇಂಥ ಹೊತ್ತಿನಲ್ಲಿ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವುದು ಅಗತ್ಯವಾಗಿ ಆಗಬೇಕಿದೆ. ಮೇ 29 ಕ್ಕೆ ಶಾಲೆಗಳ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಇನ್ನಾದರೂ ಶಾಲಾ ಶಿಕ್ಷಣ ಇಲಾಖೆ ಅದಕ್ಕೆ ಪೂರಕವಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಲ್ಲಿ ಎಂಬುವುದು ಪೋಷಕರ ಆಗ್ರಹವಾಗಿದೆ.


