
ಚಾಮುಂಡಿ ಬೆಟ್ಟದ ದೇವಿಕೆರೆ ಕಟ್ಟೆ ಹಾಗೂ ತಾವರೆಕಟ್ಟೆಯ ಜನವಸತಿ ಪ್ರದೇಶಗಳಲ್ಲಿ ಚಿರತೆ ಓಡಾಡುತ್ತಿದ್ದು, ನಿವಾಸಿಗಳು ಹಾಗೂ ಭಕ್ತರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅರಣ್ಯ ಇಲಾಖೆ, ಚಾಮುಂಡಿ ಬೆಟ್ಟ ಗ್ರಾಮ ಹಾಗೂ ಇಲ್ಲಿನ ನಾಗರಿಕ ಬಂಧುಗಳಿಗೆ ಈ ಮೂಲಕ ತಿಳಿಸುವುದೇನೆಂದರೆ, ಇತ್ತೀಚೆಗೆ ಚಾಮುಂಡಿ ಬೆಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಯ ಚಲನವಲನಗಳು ಕಂಡುಬಂದಿರುವುದಾಗಿ ವರದಿಯಾಗಿದೆ. ಈ ವಿಷಯದ ಕುರಿತು ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಚಾಮುಂಡಿ ಬೆಟ್ಟದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚಿರತೆಯ ಸಂಚಾರವನ್ನು ಪತ್ತೆ ಹಚ್ಚಲು ರಾತ್ರಿ ಗಸ್ತು ಕಾರ್ಯ ನಿರ್ವಹಿಸಲಾಗುತ್ತಿದೆ. ಯಾವುದೇ ಹೊಸ ಮಾಹಿತಿ ಲಭ್ಯವಾದಲ್ಲಿ ತಕ್ಷಣವೇ ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.
ಸಾರ್ವಜನಿಕರಿಗೆ ಸೂಚನೆ: ಸಾಯಂಕಾಲ ಮತ್ತು ಬೆಳಗಿನ ಸಮಯದಲ್ಲಿ, ವಿಶೇಷವಾಗಿ ಕತ್ತಲಾದ ಮೇಲೆ ಒಂಟಿಯಾಗಿ ಹೊರಗೆ ಹೋಗಬೇಡಿ. ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶದ ಸುತ್ತಳತೆ 17ಕಿ.ಮೀ ಇದ್ದು ಅದಕ್ಕೆ ನಾಲ್ಕು ಗೇಟ್ಗಳಿವೆ. ಹೊಸಹುಂಡಿಯಿಂದ ಚಾಮುಂಡಿಬೆಟ್ಟ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆಯ ಸಂಚಾರವನ್ನು ಸಂಜೆ 6 ಗಂಟೆಯಿಂದ ಬೆಳ್ಳಗೆ 6 ರ ವರೆಗೆ ನಿಷೇಧಿಸಲಾಗಿದೆ.
ನಿಮ್ಮ ಮಕ್ಕಳ ಮತ್ತು ಸಾಕು ಪ್ರಾಣಿಗಳ ಮೇಲೆ ನಿಗಾ ಇಡಿ. ನಿಮ್ಮ ಮನೆಯ ಸುತ್ತಮುತ್ತಲಿನ ಪೊದೆಗಳನ್ನು ಸ್ವಚ್ಛವಾಗಿಡಿ. ಚಿರತೆ ಕಾಣಿಸಿಕೊಂಡರೆ, ಯಾವುದೇ ಕಾರಣಕ್ಕೂ ಅದರ ಹತ್ತಿರ ಹೋಗಲು ಪ್ರಯತ್ನಿಸಬೇಡಿ ಅಥವಾ ಅದನ್ನು ಕೆಣಕಲು ಹೋಗಬೇಡಿ. ಯಾವುದೇ ಚಿರತೆಯ ಚಲನವಲನ ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗೆ ಅರಣ್ಯ ಇಲಾಖೆ ಆರ್ಎಒ: 9740117319, ಉಪವಲಯ ಅರಣ್ಯಾಧಿಕಾರಿಗಳ ತಂಡ: 9481990930 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಟ್ಟದ ರಸ್ತೆಯಲ್ಲಿ ಚಿರತೆ: ಕಳೆದು ತಿಂಗಳ ಆಗಸ್ಟ್ನಲ್ಲಿ ಚಾಮುಂಡಿ ಬೆಟ್ಟದ ದೇವಿಕೆರೆ ರಸ್ತೆಯಲ್ಲಿರುವ ತಡೆಗೋಡೆ ಮೇಲೆ ಚಿರತೆ ಪ್ರತ್ಯಕ್ಷವಾಗಿತ್ತು. ಸ್ಥಳೀಯ ನಿವಾಸಿಯೊಬ್ಬರು ಕೆಲಸ ಮುಗಿಸಿಕೊಂಡು ವಾಪಸ್ ಚಾಮುಂಡಿ ಬೆಟ್ಟಕ್ಕೆ ತೆರಳುವಾಗ ರಾತ್ರಿ 11ರ ಸುಮಾರಿಗೆ ಚಿರತೆ ಬೆಟ್ಟದ ದೇವಿಕೆರೆ ರಸ್ತೆಯಲ್ಲಿರುವ ತಡೆಗೋಡೆ ಕಟ್ಟೆಯ ಮೇಲೆ ಆರಾಮವಾಗಿ ಕುಳಿತಿತ್ತು. ಈ ದೃಶ್ಯವನ್ನು ಅವರು ಸೆರೆ ಹಿಡಿದಿದ್ದರು. ಸುಮಾರು 15 ನಿಮಿಷ ಚಿರತೆ ಅಲ್ಲೇ ಇತ್ತು.


