ಇತ್ತೀಚಿನ ಸುದ್ದಿ
Trending

ಆಕ್ಷೇಪಾರ್ಹ ಫ್ಲೆಕ್ಸ್​ ತೆರವು ವಿಚಾರ; ಹಿಂದೂ ಮುಖಂಡ ಸತೀಶ್ ಪೂಜಾರಿ ಬಂಧನ, ಬಿಡುಗಡೆ

ಗಣೇಶ ಹಬ್ಬದ ಪ್ರಯುಕ್ತ ಅಳವಡಿಸಲಾಗಿದ್ದ ಆಕ್ಷೇಪಾರ್ಹ ಫ್ಲೆಕ್ಸ್​ ತೆರವುಗೊಳಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಲ್ಲದೇ, ಸ್ಥಳದಲ್ಲಿ ಅಶಾಂತಿ ಮೂಡಿಸಲು ಜನರಿಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಹಿಂದೂ ಮುಖಂಡ ಸತೀಶ್ ಪೂಜಾರಿಯನ್ನು ವಿದ್ಯಾನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ತಡರಾತ್ರಿ ಅವರನ್ನು ಬಿಡುಗಡೆ ಮಾಡಿದ್ದಾರೆ.

ಠಾಣೆ ಎದುರು ಜಮಾಯಿಸಿದ್ದ ಕಾರ್ಯಕರ್ತರು: ಆಕ್ಷೇಪಾರ್ಹ ಫ್ಲೆಕ್ಸ್ ತೆರವು ಮಾಡಿದ್ದನ್ನು ಹಿಂದೂ ಮುಖಂಡರು ಪ್ರತಿಭಟನೆ ಮಾಡುವ ಮೂಲಕ ಖಂಡಿಸಿದ್ದರು. ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಹಿಂದೂ ಜಾಗರಣ ವೇದಿಕೆ ರಾಜ್ಯ ದಕ್ಷಿಣ ವಿಭಾಗೀಯ ಸಹ ಸಂಚಾಲಕ ಸತೀಶ್ ಪೂಜಾರಿ ಅಶಾಂತಿ ಮೂಡಿಸಲು ಜನರಿಗೆ ಪ್ರಚೋದನೆ ಮಾಡಿದ್ದಾರೆ ಎಂಬ ಅರೋಪದ ಹಿನ್ನೆಲೆಯಲ್ಲಿ ವಿದ್ಯಾನಗರ ಪೊಲೀಸರು ಅವರನ್ನು ಬಂಧಿಸಿದ್ದರು. ಮನೆಯಿಂದ ರಾತ್ರಿಯೇ ಠಾಣೆಗೆ ಕರೆತಂದಿದ್ದರು. ಈ ವಿಚಾರ ತಿಳಿದ ನೂರಾರು ಹಿಂದೂ ಕಾರ್ಯಕರ್ತರು, ಯುವಕರು ರಾತ್ರಿಯೇ ವಿದ್ಯಾನಗರ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿ ಹಿಂದೂ ಮುಖಂಡನ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.ಶುಕ್ರವಾರ ರಾತ್ರಿ ಬಂಧಿಸಿದ್ದ ಪೊಲೀಸರು ಬಳಿಕ ಠಾಣೆ ಬೇಲ್ ಮೇಲೆ ತಡರಾತ್ರಿಯೇ ಬಿಡುಗಡೆ ಮಾಡಿ ಕಳಿಸಿದರು. ಸದ್ಯಕ್ಕೆ ಠಾಣೆಯ ಬಳಿ ಬಿಗಿ ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ. ದಾವಣಗೆರೆ ಗ್ರಾಮಾಂತರ ಡಿವೈಎಸ್​​ಪಿ ಬಸವರಾಜ್, ದಾವಣಗೆರೆ ನಗರ ಡಿವೈಎಸ್​​ಪಿ ಶರಣಬಸವೇಶ್ವರ, ಪಿಐ ಕಿರಣ್ ಕುಮಾರ್, ಪಿಐ ಶಿಲ್ವಾ ಸೇರಿದಂತೆ ಡಿಆರ್ ತುಕಡಿ ಠಾಣೆ ಬಳಿ ಮೊಕ್ಕಾಂ ಹೂಡಿದೆ.

ಮನೆಗೆ ತೆರಳುವಂತೆ ಮನವಿ: ಪೊಲೀಸ್​ ಠಾಣೆ ಎದುರು ಜಮಾಯಿಸಿದ್ದ ಯುವಕರನ್ನು ಮನೆಗೆ ತೆರಳುವಂತೆ ಹಾಗೂ ಯಾವುದೇ ಗದ್ದಲಕ್ಕೆ ಆಸ್ಪದ ಮಾಡಿಕೊದಂತೆ ದಾವಣಗೆರೆ ಗ್ರಾಮಾಂತರ ಡಿವೈಎಸ್​​ಪಿ ಬಸವರಾಜ್ ಅವರು ಮನವಿ ಮಾಡಿದರು.”ಸುಮ್ಮನೆ ಸಮಸ್ಯೆ ಮಾಡಿಕೊಳ್ಳಬೇಡಿ, ಇಲ್ಲಿ ಯಾರಾದರೂ ವಿದ್ಯಾರ್ಥಿಗಳಿದ್ದರೆ ಮನೆಗೆ ಹೋಗಿ ಬಿಡಿ, ನಾವು ಕೇಸ್ ಹಾಕಿದರೆ ನಿಮ್ಮ ತಂದೆ-ತಾಯಿ ಹಾಗೂ ಪೋಷಕರು ಠಾಣೆಗೆ ಬಂದು ಗೋಳಾಡುವುದು ಸರಿಯಲ್ಲ. ಇದು ಅಕ್ರಮ ಕೂಟ, ಮೊದಲು ಎಲ್ಲರೂ ಮನೆಗೆ ತೆರಳಿ. ಇಲ್ಲವಾದರೆ ನಮ್ಮ ಬಳಿ ವಿಡಿಯೋ ರೆಕಾರ್ಡ್ ಇದೆ, ವಿನಾಃಕಾರಣ ಯಾರೂ ಸಮಸ್ಯೆ ತಂದುಕೊಳ್ಳಬೇಡಿ. ಠಾಣೆ ಎದುರು ಕಿರುಚಾಡಬೇಡಿ, ಜೈಕಾರ ಹಾಕದಿರಿ, ಠಾಣೆಗೆ ಬರುವವರು ಹೋಗುವವರು ಇರುತ್ತಾರೆ. ಅವರಿಗೆ ತೊಂದರೆ ಕೊಡಬೇಡಿ” ಎಂದು ಡಿವೈಎಸ್​​ಪಿ ಬಸವರಾಜ್ ಕೋರಿದರು.

Related Articles

Leave a Reply

Your email address will not be published. Required fields are marked *

Back to top button