
ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಲರ್ಟ್ ಘೋಷಣೆ: ಗೌರಿ-ಗಣೇಶ ಹಬ್ಬದ ನಂತರ ಮಳೆ ಹೆಚ್ಚಾಗಲಿದ್ದು ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಳಗಾವಿ, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮಳೆ ಮುನ್ಸೂಚನೆ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ವಿಜಯಪುರ, ವಿಜಯನಗರ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲೂ ಸಹ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಭಾನುವಾರ ಎಲ್ಲೆಲ್ಲಿ ಮಳೆ?: ಆಗುಂಬೆ, ಸಿದ್ದಾಪುರ, ಲೋಂಡಾ, ಕದ್ರಾ, ಗೇರುಸೊಪ್ಪ, ಕ್ಯಾಸಲ್ರಾಕ್, ಪುತ್ತೂರು, ಮೂಡುಬಿದಿರೆ, ಕಾರ್ಕಳ, ಶೃಂಗೇರಿ, ಹೊನ್ನಾವರ, ಕೋಲಾರ, ಸಿಂಧನೂರು ಹಾಗೂ ದಾವಣಗೆರೆಯಲ್ಲಿ ಭಾನುವಾರ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಲ್ಲಿ ಹೇಗಿದೆ ವಾತಾವರಣ?: ನಗರದಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಹಾಗೂ 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹೆಚ್ಎಎಲ್ನಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 28.8ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಹಾಗೂ 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 29.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಉತ್ತರದಲ್ಲಿ ಮಳೆ: ಜಮ್ಮು ಮತ್ತು ಕಾಶ್ಮೀರದ ಕೆಲವೆಡೆ ಇತ್ತೀಚಿಗೆ ಧಾರಾಕಾರ ಮಳೆ ಸುರಿದಿದೆ. ಜಮ್ಮುನಲ್ಲಿ ಅನೇಕ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಜೊತೆಗೆ, ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಭಾರತೀಯ ಹವಾಮಾನ ಇಲಾಖೆ ಕಳೆದ ಭಾನುವಾರ ಎಲ್ಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿ, ಗುಡುಗುಸಹಿತ ಮಳೆಯಾಗುವ ಮುನ್ಸೂಚನೆ ಕೊಟ್ಟಿತ್ತು. ಸಂಭಾವ್ಯ ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತಗಳ ಬಗ್ಗೆಯೂ ಎಚ್ಚರಿಕೆ ನೀಡಿತ್ತು. ಇದರ ಜೊತೆಗೆ ನದಿ ಪ್ರವಾಹ ಮತ್ತು ಭೂಕುಸಿತ ಪೀಡಿತ ಪ್ರದೇಶಗಳತ್ತ ತೆರಳಂತೆ ಜನರಿಗೆ ಎಚ್ಚರಿಕೆ ನೀಡಿತ್ತು.
ಭಾರೀ ಮಳೆಯಿಂದಾಗಿ ಜಮ್ಮು-ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿ ಮತ್ತು ಕಥುವಾ ಜಿಲ್ಲೆಯ ಸಹರ್ ಖಾದ್ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಪ್ರಮುಖ ಸೇತುವೆಗೆ ಹಾನಿಯಾಗಿದೆ. ಇದರಿಂದಾಗಿ ಸೇತುವೆಗಳ ಮೇಲೆ ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


