
ಭಾರತೀಯ ಜನತಾ ಪಕ್ಷ(BJP) ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್(CP Radhakrishnan) ಅವರನ್ನು ಉಪರಾಷ್ಟ್ರಪತಿ ಹುದ್ದೆಗೆ ಎನ್ಡಿಎ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ನಿರ್ಧಾರವನ್ನು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದ್ದು, ಪಕ್ಷದ ಅದ್ಯಕ್ಷ ಜೆಪಿ ನಡ್ಡಾ ಅವರು ಹೆಸರನ್ನು ಪ್ರಕಟಿಸಿದ್ದಾರೆ.
ಮಂಗಳವಾರ ನಡೆಯಲಿರುವ ಎನ್ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಸಿಪಿ ರಾಧಾಕೃಷ್ಣನ್ ಕೂಡ ಭಾಗವಹಿಸುವ ಸಾಧ್ಯತೆ ಇದೆ. ತಮಿಳುನಾಡು ಮೂಲದ ಸಿಪಿ ರಾಧಾಕೃಷ್ಣನ್ ಅವರನ್ನು ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.
ತಮಿಳುನಾಡಿನ ತಿರುಪ್ಪೂರಿನಲ್ಲಿ 1957 ರ ಅಕ್ಟೋಬರ್ 20 ರಂದು ಜನಿಸಿದ ರಾಧಾಕೃಷ್ಣನ್ ಅವರ ರಾಜಕೀಯ ಜೀವನವು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಮತ್ತು ಜನಸಂಘದೊಂದಿಗೆ ಆರಂಭವಾಯಿತು. ಸಿಪಿ ರಾಧಾಕೃಷ್ಣನ್ 70ರ ದಶಕದಲ್ಲಿ ಆರ್ಎಸ್ಎಸ್ನಲ್ಲಿ ಸಕ್ರಿಯರಾಗಿದ್ದರು.
ಇದಾದ ನಂತರ, ಅವರು ಭಾರತೀಯ ಜನ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದರು ಮತ್ತು ಸಂಘಟನಾ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸಿದರು. ದೀರ್ಘಕಾಲ ಕಾರ್ಯಕರ್ತರಾಗಿ ಕೆಲಸ ಮಾಡಿದ ನಂತರ, 1994 ರಲ್ಲಿ ಅವರನ್ನು ತಮಿಳುನಾಡು ಬಿಜೆಪಿಯ ಕಾರ್ಯದರ್ಶಿಯಾಗಿಯೂ ನೇಮಿಸಲಾಯಿತು.
ಟೇಬಲ್ ಟೆನಿಸ್ ಚಾಂಪಿಯನ್ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಹೇಳುವುದಾದರೆ ಅವರು ಕೊಯಮತ್ತೂರಿನ ವಿಒ ಚಿದಂಬರಂ ಕಾಲೇಜಿನಲ್ಲಿ ಬಿಬಿಎ ಪದವಿ ಪಡೆದಿದ್ದಾರೆ. ರಾಧಾಕೃಷ್ಣನ್ ತಮ್ಮ ಕಾಲೇಜಿನಲ್ಲಿ ಟೇಬಲ್ ಟೆನಿಸ್ ಚಾಂಪಿಯನ್ ಹಾಗೂ ಅತ್ಯುತ್ತಮ ರನ್ನರ್ ಕೂಡ ಆಗಿದ್ದರು. ಅವರಿಗೆ ಕ್ರಿಕೆಟ್ ಹಾಗೂ ವಾಲಿಬಾಲ್ ಕೂಡ ಇಷ್ಟವಂತೆ.
ಮಹಾರಾಷ್ಟ್ರ ರಾಜ್ಯಪಾಲರು ರಾಧಾಕೃಷ್ಣನ್ 2024ರ ಜುಲೈ 31ರಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾರೆ. ಇದಕ್ಕೂ ಮೊದಲು ಫೆಬ್ರವರಿ 18, 2023 ರಿಂದ ಜುಲೈ 30, 2024 ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಅವರು ತೆಲಂಗಾಣ ಮತ್ತು ಪುದುಚೇರಿಯಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದರು.


