
ಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿಯನ್ನು ಹೆರಿಗೆ ಮಾಡಿಸಿ, ಬಳಿಕ ಮಗುವನ್ನು ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸರು ವೈದ್ಯ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಿ.ಸಿ. ರೋಡಿನ ವೈದ್ಯ ಡಾ. ಸೋಮೇಶ್ ಸೊಲೊಮನ್, ಮಂಗಳೂರಿನಲ್ಲಿ ಪಿಜಿ ನಡೆಸುತ್ತಿರುವ ವಿಜಯಲಕ್ಷ್ಮೀ ಯಾನೆ ವಿಜಯ ಮತ್ತು ಅತ್ಯಾಚಾರ ಎಸಗಿದ ಆರೋಪಿ ನವನೀತ್ ನಾರಾಯಣ (25) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಹರಿರಾಮ್ ಶಂಕರ್ ಮಾಹಿತಿ: “ಆಗಸ್ಟ್ 21ರಂದು ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಗೆ ಮಕ್ಕಳ ರಕ್ಷಣಾ ಕಚೇರಿಯ (CDP) ಓರ್ವ ಸಿಬ್ಬಂದಿ ಒಂದು ದೂರನ್ನು ನೀಡಿದ್ದರು. ಮಂಗಳೂರಿನಲ್ಲಿ ಕೊಲಾಸೋ ಆಸ್ಪತ್ರೆಯಲ್ಲಿ ಆಗಸ್ಟ್ 3ನೇ ದಿನಾಂಕದಂದು ಜನಿಸಿದ ಒಂದು ಮಗುವನ್ನು ಹಲವು ವರ್ಷಗಳಿಂದ ಮಕ್ಕಳಾಗದ ಕಾರಣಕ್ಕೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ 92ನೇ ಹೇರೂರು ಗ್ರಾಮದ ಕಲ್ಲುಗುಡ್ಡೆ ನಿವಾಸಿ ಪ್ರಭಾವತಿ ಹಾಗೂ ರಮೇಶ್ ಮೂಲ್ಯ ದಂಪತಿ ಯಾವುದೇ ಕಾರ್ಯವಿಧಾನವನ್ನು ಅನುಸರಿಸದೇ ಅವರ ಮಗುವೆಂದು ಹೇಳಿ ಅನಧಿಕೃತವಾಗಿ ಇಟ್ಟುಕೊಂಡಿದ್ದಾರೆ ಎಂದು ಮಾಹಿತಿ ಕೊಟ್ಟಿದ್ದರು” ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
“ಈ ದೂರಿನ ಆಧಾರದ ಮೇರೆಗೆ ಎಫ್ಐಆರ್ ದಾಖಲಿಸಿ ಹೆಚ್ಚಿನ ತನಿಖೆಯನ್ನು ನಡೆಸಿದಾಗ ಈ ಪ್ರಕರಣದಲ್ಲಿ ಆ ದಂಪತಿಗೆ ಸುಮಾರು ವರ್ಷದಿಂದ ಮಕ್ಕಳು ಆಗಿರಲಿಲ್ಲ ಎಂಬ ಕಾರಣಕ್ಕೆ ಮಗು ಬೇಕು ಎಂದು ಹುಡುಕುತ್ತಿದ್ದಾಗ ಅವರಿಗೆ ಪರಿಚಯವಿದ್ದ ಪ್ರಿಯಾಂಕ ಎನ್ನುವವರು ಮಂಗಳೂರಿನ ಮೂಲತಃ ವಿಜಯಲಕ್ಷ್ಮಿ ಎಂಬುವವರಿಗೆ ಪರಿಚಯ ಮಾಡಿಸಿಕೊಡುತ್ತಾರೆ. ವಿಜಯಲಕ್ಷ್ಮೀಯ ಪೇಯಿಂಗ್ ಗೆಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಅವಿವಾಹಿತ ಮಗಳು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಆ ಮಗುವನ್ನೇ ನೀಡುವುದಾಗಿ ವಿಜಯಲಕ್ಷ್ಮೀ ದಂಪತಿಗೆ ತಿಳಿಸಿದ್ದರು. ಹೀಗೆ ಗರ್ಭದಲ್ಲಿರುವ ಈ ಮಗುವನ್ನು ಹೆರಿಗೆಯ ಬಳಿಕ ಈ ದಂಪತಿಗೆ ಮಾರಾಟ ಮಾಡಲು ವಿಜಯಲಕ್ಷ್ಮೀ ಹಾಗೂ ಡಾ. ಸೋಮೇಶ್ ಯೋಜನೆ ಹಾಕಿಕೊಂಡಿದ್ದರು. ಗರ್ಭಿಣಿ ಯುವತಿ ಸ್ಕ್ಯಾನಿಂಗ್‌ಗೆ ಹೋದಾಗಲೆಲ್ಲ ಇವರು ಆಕೆಯ ಆಧಾರ್ ಕಾರ್ಡ್ ಬದಲು ಶಿರ್ವದ ಪ್ರಭಾವತಿ ಅವರ ಆಧಾರ್ ಕಾರ್ಡ್ ನೀಡುತ್ತಿದ್ದರು” ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
“ಹೀಗೆ ಗರ್ಭದಲ್ಲಿರುವಾಗಲೇ ಈ ಮಗು ಪ್ರಭಾವತಿ ಅವರದ್ದಾಗಿ ಮಾಡುವ ಪ್ಲಾನ್ ಇವರದ್ದಾಗಿತ್ತು. ಯುವತಿ ಆ.3ರಂದು ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆ ಮಗುವನ್ನು ವಿಜಯಲಕ್ಷ್ಮೀ ಹಾಗೂ ಡಾ. ಸೋಮೇಶ್, ಪ್ರಭಾವತಿ ದಂಪತಿಗೆ 4.5 ಲಕ್ಷ ರೂ. ಹಣಕ್ಕೆ ಮಾರಾಟ ಮಾಡಿದ್ದರು” ಎಂದು ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ.
“ಪೊಲೀಸರು ತನಿಖೆ ನಡೆಸಿದಾಗ ವಿಜಯಲಕ್ಷ್ಮೀಯ ಪೇಯಿಂಗ್ ಗೆಸ್ಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ಅತ್ಯಾಚಾರದಿಂದ ಗರ್ಭವತಿಯಾಗಿದ್ದಳು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಯುವತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಈಕೆಯನ್ನು ಅವರ ಪರಿಚಯದ ನವನೀತ್ ನಾರಾಯಣ ಅತ್ಯಾಚಾರ ಎಸಗಿ ಗರ್ಭವತಿಯನ್ನಾಗಿ ಮಾಡಿದ್ದ. ಇದೇ ಕಾರಣಕ್ಕೆ ಯುವತಿ ಹಾಗೂ ಆಕೆಯ ತಾಯಿಯನ್ನು ವಿಜಯಲಕ್ಷ್ಮೀ ಪೆಯಿಂಗ್ ಗೆಸ್ಟ್‌ನಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದರು” ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.


