
ಬಜೆಟ್ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿನ ಬಂಡವಾಳ ವೆಚ್ಚ ಬಳಕೆ ಮಾಡುವಲ್ಲಿ ರಾಜ್ಯ ಸರ್ಕಾರ ಹಿಂದೆ ಬಿದ್ದಿದೆ. ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅತ್ಯಲ್ಪ ಹಣವನ್ನು ಬಂಡವಾಳ ವೆಚ್ಚಕ್ಕಾಗಿ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಯ ಹೊರೆಯ ಮಧ್ಯೆ ಆಡಳಿತ ನಡೆಸುತ್ತಿದೆ. ಒಂದೆಡೆ ಅಭಿವೃದ್ಧಿ ಖರ್ಚು ಕುಂಠಿತವಾಗದಂತೆ ಪಂಚ ಗ್ಯಾರಂಟಿ ಮುಂದುವರಿಸುವುದು ಕಾಂಗ್ರೆಸ್ ಸರ್ಕಾರದ ಹೊಣೆಗಾರಿಕೆಯಾಗಿದೆ. ಈಗಾಗಲೇ ವಿಪಕ್ಷಗಳು ಮಾತ್ರವಲ್ಲ ಸ್ವಪಕ್ಷೀಯರೇ ಸರ್ಕಾರದ ವಿರುದ್ಧ ಅಭಿವೃದ್ಧಿ ಕುಂಠಿತ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಶಾಸಕರು ಅನುದಾನ ಕೊರತೆ ಬಗ್ಗೆ ತಮ್ಮ ಅಸಮಾಧಾನವನ್ನು ಆಗಾಗ್ಗೆ ಹೊರ ಹಾಕುತ್ತಿದ್ದು, ಈ ಬಾರಿಯೂ ಕಾಂಗ್ರೆಸ್ನ ಕೆಲ ಶಾಸಕರುಗಳೇ ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ.
ರಾಜ್ಯ ಸರ್ಕಾರ 2025-26 ಸಾಲಿನ ಬಜೆಟ್ನಲ್ಲಿ 71,336 ಕೋಟಿ ರೂ. ಬಂಡವಾಳ ವೆಚ್ಚದ ಅಂದಾಜು ಮಾಡಿದೆ. ರಾಜ್ಯದ ಆಸ್ತಿ ಸೃಜನೆ, ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿನ ಖರ್ಚನ್ನು ಬಂಡವಾಳ ವೆಚ್ಚ ಎಂದು ಹೇಳಲಾಗುತ್ತದೆ. ಬಂಡವಾಳ ವೆಚ್ಚ ಹೆಚ್ಚಿದಷ್ಟು ಅಭಿವೃದ್ಧಿ ವೇಗ ಹೆಚ್ಚುತ್ತದೆ. ಹಾಗಾಗಿ ಪ್ರಸಕ್ತ ಬಜೆಟ್ ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ಪಂಚ ಗ್ಯಾರಂಟಿಗಳಿಗಾಗಿ ಸುಮಾರು 51,034 ಕೋಟಿ ರೂ. ಅನುದಾನ ನೀಡಿದ್ದಾರೆ. ಬಂಡವಾಳ ವೆಚ್ಚಕ್ಕಾಗಿ ಅಂದಾಜು 71,336 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಇದೀಗ ಬಜೆಟ್ ವರ್ಷದ ಮೊದಲ ತ್ರೈಮಾಸಿಕ ಮುಕ್ತಾಯವಾಗಿದ್ದು, ಬಂಡವಾಳ ವೆಚ್ಚದ ರೂಪದಲ್ಲಿ ಹಣ ವ್ಯಯಿಸಿರುವುದು ಅತ್ಯಲ್ಪವಾಗಿದೆ.
ಮೊದಲ ತ್ರೈಮಾಸಿಕದಲ್ಲಿ ಕೇವಲ ಶೇ.7.56 ಬಂಡವಾಳ ವೆಚ್ಚ: 2025-26 ಬಜೆಟ್ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಬಂಡವಾಳ ವೆಚ್ಚ ಮಾಡುವಲ್ಲಿ ಹಿಂದೆ ಬಿದ್ದಿದೆ. ಹಣಕಾಸು ಇಲಾಖೆ ನೀಡಿದ ಅಂಕಿ- ಅಂಶದಂತೆ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಕೇವಲ 7.56% ಬಂಡವಾಳ ವೆಚ್ಚಮಾಡಿದೆ. ಏಪ್ರಿಲ್-ಜೂನ್ ವರೆಗೆ ಬಂಡವಾಳ ವೆಚ್ಚವಾಗಿ ಕೇವಲ 5,396 ಕೋಟಿ ರೂ. ಖರ್ಚು ಮಾಡಿದೆ. ಕಳೆದ ಬಜೆಟ್ ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ 8.24% ಬಂಡವಾಳ ವೆಚ್ಚ ಮಾಡಲಾಗಿತ್ತು. ಅಂದರೆ ಕಳೆದ ಬಜೆಟ್ ವರ್ಷಕ್ಕೆ ಹೋಲಿಕೆ ಮಾಡಿದರೂ ಬಂಡವಾಳ ವೆಚ್ಚದ ಪ್ರಗತಿ ಮಂದಗತಿಯಲ್ಲಿದೆ.
ಮೂರು ತಿಂಗಳಲ್ಲಿ ರಾಜ್ಯ ಸರ್ಕಾರ ರಾಜಸ್ವ ವೆಚ್ಚ ಅಂದರೆ ನೌಕರರ ವೇತನ, ಪಿಂಚಣಿ, ಸಹಾಯಧನ, ಪಂಚ ಗ್ಯಾರಂಟಿ ಒಳಗೊಂಡಂತೆ ಸುಮಾರು 61,651 ಕೋಟಿ ರೂ. ಖರ್ಚು ಮಾಡಿದೆ. ಪ್ರಸಕ್ತ ಬಜೆಟ್ ವರ್ಷದಲ್ಲಿ ಒಟ್ಟು ರಾಜಸ್ವ ವೆಚ್ಚವಾಗಿ 3,11,738 ಕೋಟಿ ಅಂದಾಜು ಮಾಡಿದೆ. ಈ ಪೈಕಿ ಮೊದಲ ತ್ರೈಮಾಸಿಕದಲ್ಲಿ ಸುಮಾರು 20% ವ್ಯಯಿಸಲಾಗಿದೆ. ಆದರೆ, ಬಂಡವಾಳ ವೆಚ್ಚದ ರೂಪದಲ್ಲಿ ಕೇವಲ 7.56% ಮಾತ್ರ ಹಣ ಖರ್ಚು ಮಾಡಲಾಗಿದೆ.
ಹಣಕಾಸು ಇಲಾಖೆ ನೀಡಿದ ಅಂಕಿ- ಅಂಶದಂತೆ ಏಪ್ರಿಲ್ನಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗಾಗಿನ ಬಂಡವಾಳ ವೆಚ್ಚದ ರೂಪದಲ್ಲಿ ಕೇವಲ 79.92 ಕೋಟಿ ರೂ. ಖರ್ಚು ಮಾಡಿದೆ. ಮೇ ತಿಂಗಳಲ್ಲಿ ರಾಜ್ಯ ಸರ್ಕಾರ 1,923 ಕೋಟಿ ರೂ. ಬಂಡವಾಳ ವೆಚ್ಚ ಮಾಡಿತ್ತು. ಅದೇ ಜೂನ್ ತಿಂಗಳಲ್ಲಿ 3,392 ಕೋಟಿ ರೂ. ಬಂಡವಾಳ ವೆಚ್ಚ ಮಾಡಲಾಗಿದೆ. ಒಟ್ಟು ಬಂಡವಾಳ ವೆಚ್ಚದ ಮುಂದೆ ಮೊದಲ ತ್ರೈಮಾಸಿಕದಲ್ಲಿ 7.56% ಪ್ರಗತಿ ಕಂಡಿದೆ.
ಅದೇ 2024-25ರಲ್ಲಿ ಒಟ್ಟು 55,877 ಕೋಟಿ ರೂ. ಬಂಡವಾಳ ವೆಚ್ಚ ಅಂದಾಜು ಮಾಡಲಾಗಿತ್ತು. ಈ ಪೈಕಿ ಏಪ್ರಿಲ್ನಲ್ಲಿ 2,027 ಕೋಟಿ ರೂ., ಮೇ ತಿಂಗಳಲ್ಲಿ 586 ಕೋಟಿ ರೂ, ಜೂನ್ನಲ್ಲಿ 1,993 ಕೋಟಿ ರೂ. ಬಂಡವಾಳ ವೆಚ್ಚ ಮಾಡಲಾಗಿತ್ತು. ಒಟ್ಟು ಬಂಡವಾಳ ವೆಚ್ಚದ ಮುಂದೆ ಮೊದಲ ತ್ರೈಮಾಸಿಕದಲ್ಲಿ 8.24% ಪ್ರಗತಿ ಸಾಧಿಸಲಾಗಿತ್ತು.
ಪಂಚ ಗ್ಯಾರಂಟಿಗಳಿಗೆ ಒತ್ತು: 2025-26 ಸಾಲಿನಲ್ಲಿ ಈವರೆಗೆ ವ್ಯಯಿಸಿದ ಬಂಡವಾಳ ವೆಚ್ಚ ಅತ್ಯಲ್ಪವಾಗಿದೆ. ಆದರೆ, ಅದೇ ಇತ್ತ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆರ್ಥಿಕ ಇಲಾಖೆಯ ಅಂಕಿಅಂಶದಂತೆ ಬಂಡವಾಳ ವೆಚ್ಚಕ್ಕೆ ತ್ರೈಮಾಸಿಕದಲ್ಲಿ ಖರ್ಚು ಮಾಡಿದ್ದು ಕೇವಲ 5,396 ಕೋಟಿ ರೂ. ಅದೇ ಪಂಚ ಗ್ಯಾರಂಟಿಗಳಿಗೆ ಮೂರು ತಿಂಗಳಲ್ಲಿ ಸುಮಾರು 6,321 ಕೋಟಿ ರೂ. ಹಣ ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಾಗಿ ಬಹುತೇಕ ಸಂಪನ್ಮೂಲ ಬಳಕೆ ಮಾಡುತ್ತಿರುವುದು ಅಭಿವೃದ್ಧಿಗಾಗಿ ಹಣ ಬಿಡುಗಡೆ ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ ಎಂಬುದು ವಿಪಕ್ಷ ಹಾಗೂ ಸ್ವಪಕ್ಷೀಯರ ಆರೋಪ, ಆಕ್ರೋಶ.
2025-26 ಸಾಲಿನ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಒಟ್ಟು ಇಲಾಖಾವಾರು ಬಿಡುಗಡೆಯಾದ ಅನುದಾನದ ಪೈಕಿ 8.30% ಅನುದಾನ ಪಂಚ ಗ್ಯಾರಂಟಿಗಳಿಗೇ ಬಿಡುಗಡೆಯಾಗಿದೆ. ಏಪ್ರಿಲ್-ಜೂನ್ ವರೆಗೆ ಇಲಾಖಾವಾರು ಒಟ್ಟು 76,154 ಕೋಟಿ ಅನುದಾನ ಬಿಡುಗಡೆಯಾಗಿದೆ. ಆ ಪೈಕಿ ಪಂಚ ಗ್ಯಾರಂಟಿಗಳಿಗೆ ಒಟ್ಟು 6,321 ಕೋಟಿ ರೂ. ಬಿಡುಗಡೆಯಾಗಿದೆ. ಪಂಚ ಗ್ಯಾರಂಟಿಗಳಿಗೆ ಹಂಚಿಕೆ ಮಾಡಲಾದ 51,034 ಕೋಟಿ ರೂ. ಪೈಕಿ ಮೊದಲ ತ್ರೈಮಾಸಿಕದಲ್ಲಿ 6,321 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಂದರೆ ಒಟ್ಟು ಹಂಚಿಕೆ ಪೈಕಿ 12.40% ಅನುದಾನ ಬಿಡುಗಡೆ ಮಾಡಿದೆ. ಅಭಿವೃದ್ಧಿಗಾಗಿನ ಬಂಡವಾಳ ವೆಚ್ಚಕ್ಕೆ ಈವರೆಗೆ ಕೇವಲ 7.56% ಪ್ರಗತಿ ಸಾಧಿಸಿದ್ದರೆ, ಪಂಚ ಗ್ಯಾರಂಟಿಯಲ್ಲಿ 12.40% ಪ್ರಗತಿ ಸಾಧಿಸಲಾಗಿದೆ.


