World
Trending

ಭಾರತ-ಪಾಕ್ ನಡುವೆ ನೇರ ಮಾತುಕತೆ ಮೂಲಕ ಕದನವಿರಾಮ

ನವದೆಹಲಿ: ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದೆ ಎಂಬ ಡೊನಾಲ್ಡ್ ಟ್ರಂಪ್ (Donald Trump) ಅವರ ಹೇಳಿಕೆಯನ್ನು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಮತ್ತೊಮ್ಮೆ ನಿರಾಕರಿಸಿದ್ದಾರೆ. ಇದು ಎರಡೂ ದೇಶಗಳ ನಡುವಿನ ನೇರ ಮಾತುಕತೆಯ ಮೂಲಕ ನಡೆದಿದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರು ಮಿಲಿಟರಿ ಸಂವಹನದ ಪಾತ್ರವನ್ನು ಕೂಡ ಎತ್ತಿ ತೋರಿಸಿದ್ದಾರೆ. ಮಾತುಕತೆಗಳ ಸಮಯದಲ್ಲಿ ಅಮೆರಿಕದ ಹಸ್ತಕ್ಷೇಪವಾಗಿಲ್ಲ ಎಂದು ಅವರು ಹೇಳಿದ್ದಾರೆ.ಡಚ್ ಸಾರ್ವಜನಿಕ ಪ್ರಸಾರಕ ಎನ್ಒಎಸ್ ಜೊತೆ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳನ್ನು ನಿರಾಕರಿಸಿದರು. ಯುದ್ಧ ನಿಲ್ಲಿಸುವುದು ಎರಡೂ ದೇಶಗಳ ನಡುವೆ ನೇರವಾಗಿ ಮಾತುಕತೆ ಮೂಲಕ ಮಾಡಿಕೊಳ್ಳಲಾದ ದ್ವಿಪಕ್ಷೀಯ ಒಪ್ಪಂದವಾಗಿದ್ದು, ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇಲ್ಲದೆ ಈ ಒಪ್ಪಂದ ನಡೆದಿದೆ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ನಿಲ್ಲಿಸುವಲ್ಲಿ ತಾನು ಪ್ರಮುಖ ಪಾತ್ರ ವಹಿಸಿದ್ದೇನೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡ ಕೆಲವು ದಿನಗಳ ನಂತರ ಭಾರತ ಈ ಸ್ಪಷ್ಟನೆ ನೀಡಿದೆ. ನೆದರ್ಲ್ಯಾಂಡ್ಸ್ ಮೂಲದ ಪ್ರಸಾರಕ NOSಗೆ ನೀಡಿದ ಸಂದರ್ಶನದಲ್ಲಿ ಸಚಿವ ಜೈಶಂಕರ್, ಪಾಕಿಸ್ತಾನವು ಭಾರತ ಗುಂಡಿನ ದಾಳಿಯನ್ನು ನಿಲ್ಲಿಸಲು ಬಯಸಿದರೆ ಭಾರತದ ಮಿಲಿಟರಿ ನಾಯಕತ್ವವನ್ನು ನೇರವಾಗಿ ಸಂಪರ್ಕಿಸಬೇಕು ಎಂದು ಭಾರತವು ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟವಾಗಿ ತಿಳಿಸಿತ್ತು. ಹೀಗಾಗಿ, ಪಾಕಿಸ್ತಾನ ಮತ್ತು ಭಾರತದ ನಡುವೆ ನೇರ ಮಾತುಕತೆಯ ಮೂಲಕ ಕದನವಿರಾಮ ಘೋಷಿಸಲಾಗಿದೆ ಎಂದು ಒತ್ತಿ ಹೇಳಿದ್ದಾರೆ.ಯುದ್ಧವನ್ನು ಕೊನೆಗೊಳಿಸಲು ಸೇನೆಗಳ ನಡುವೆ ಮಾತುಕತೆ ನಡೆದಿತ್ತಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್, ಅಧಿಕೃತ ಮಿಲಿಟರಿ ಹಾಟ್‌ಲೈನ್ ಮೂಲಕ ಸಂವಹನ ನಿಜವಾಗಿಯೂ ನಡೆದಿದೆ ಎಂದು ದೃಢಪಡಿಸಿದರು. “ಹಾಟ್‌ಲೈನ್ ಆಗಿ ಪರಸ್ಪರ ಮಾತನಾಡಲು ನಮಗೆ ಒಂದು ಕಾರ್ಯವಿಧಾನವಿದೆ. ಆದ್ದರಿಂದ, ಮೇ 10ರಂದು, ಪಾಕಿಸ್ತಾನ ಸೇನೆಯೇ ಗುಂಡಿನ ದಾಳಿಯನ್ನು ನಿಲ್ಲಿಸಲು ಸಿದ್ಧವಾಗಿದೆ ಎಂಬ ಸಂದೇಶವನ್ನು ಕಳುಹಿಸಿತು. ನಾವು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದ್ದೇವೆ” ಎಂದು ಅವರು ಹೇಳಿದರು.

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸುವಲ್ಲಿ ಅಮೆರಿಕದ ಪಾತ್ರದ ಬಗ್ಗೆ ಕೇಳಿದಾಗ, “ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಮತ್ತು ಉಪಾಧ್ಯಕ್ಷ ವ್ಯಾನ್ಸ್ ಕರೆ ಮಾಡಿದ್ದರು ಎಂಬುದು ನಿಜ. ರುಬಿಯೊ ನನ್ನೊಂದಿಗೆ ಮಾತನಾಡಿದ್ದರು, ಜೆ.ಡಿ. ವ್ಯಾನ್ಸ್ ನಮ್ಮ ಪ್ರಧಾನಿಯೊಂದಿಗೆ ಮಾತನಾಡಿದ್ದರು, ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಮ್ಮೊಂದಿಗೆ ಮಾತನಾಡಿದ್ದರು. ಇತರೆ ಕೆಲವು ದೇಶಗಳಂತೆ ಅವರು ಪಾಕಿಸ್ತಾನ ಮತ್ತು ನಮ್ಮ ದೇಶದ ಜೊತೆ ಮಾತನಾಡಿದ್ದರು. ಇದೇ ರೀತಿ ಇನ್ನೂ ಕೆಲವು ದೇಶಗಳು ಕೂಡ ನಮ್ಮೊಂದಿಗೆ ಮಾತನಾಡಿದ್ದವು. ಆದರೆ, ಕದನವಿರಾಮದಲ್ಲಿ ಅವರ ಪಾತ್ರವಿಲ್ಲ” ಎಂದಿದ್ದಾರೆ.ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ಲಷ್ಕರ್-ಎ-ತೈಬಾ (LeT) ರಚಿಸಿದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಗುಂಪು ವಹಿಸಿಕೊಂಡಿದೆ ಎಂದು ಜೈಶಂಕರ್ ಹೇಳಿದರು. ಭಾರತ ದಾಳಿಕೋರರನ್ನು ಗುರುತಿಸಿದೆ. ಅವರು LeTಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಖಚಿತವಾಗಿದೆ. 2023, 2024 ಮತ್ತು 2025ರಲ್ಲಿ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿರ್ಬಂಧ ಸಮಿತಿಗೆ ಟಿಆರ್​ಎಫ್ ಬಗ್ಗೆ ಹೇಗೆ ತಿಳಿಸಿತ್ತು ಎಂಬುದನ್ನು ಅವರು ಮೆಲುಕು ಹಾಕಿದರು. ಸಂದರ್ಶನದ ಸಮಯದಲ್ಲಿ ಅವರು ಪತ್ರಕರ್ತರಿಗೆ ವಿಶ್ವಸಂಸ್ಥೆಯ ಪಟ್ಟಿಯನ್ನು ಸಹ ತೋರಿಸಿದರು.

Related Articles

Leave a Reply

Your email address will not be published. Required fields are marked *

Back to top button