
ಮಂಗಳೂರು(ದಕ್ಷಿಣ ಕನ್ನಡ): “ಅಭಿವೃದ್ಧಿ ಯೋಜನೆಗೆ ಹಣ ಇಲ್ಲ ಎಂಬ ಆರೋಪ ಮಾಡಲಾಗುತ್ತಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ (ಪ್ರಜಾಸೌಧ ಕಟ್ಟಡ) ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
“ಮಾಜಿ ಸಚಿವ ರಮಾನಾಥ ರೈ ಅವರ ಕಾಳಜಿಯಿಂದ ಪ್ರಜಾಸೌಧ ಕಟ್ಟಡಕ್ಕೆ ನಾನೇ ಗುದ್ದಲಿ ಪೂಜೆ ಮಾಡಿದ್ದೆ, ಈಗ ನಾನೇ ಉದ್ಘಾಟಿಸಿದ್ದೇನೆ. ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗುದ್ದಲಿ ಪೂಜೆ ನೆರವೇರಿಸಿ ಮೊದಲ ಹಂತದ ಕಾಮಗಾರಿಗೆ ಹಣ ಬಿಡುಗಡೆ ಮಾಡಿದ್ದೆವು. ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗ ಪ್ರಜಾಸೌಧದ ಕೆಲಸ ನಿಂತು ಹೋಗಿತ್ತು. ಬಿಜೆಪಿ ಸರ್ಕಾರದಲ್ಲಿ ಕಾಮಗಾರಿ ಮುಂದುವರೆಯಲೇ ಇಲ್ಲ. ಇದನ್ನು ಪೂರ್ಣಗೊಳಿಸಲು ಮತ್ತೆ ನಾವೇ ಅಧಿಕಾರಕ್ಕೆ ಬರಬೇಕಾಯಿತು. ಬಿಜೆಪಿ ಅವಧಿಯಲ್ಲಿ ಯಾಕೆ ಉದ್ಘಾಟನೆ ಆಗಲಿಲ್ಲ” ಎಂದು ವೇದಿಕೆಯಲ್ಲೇ ಇದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.”ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4.5 ಲಕ್ಷ ಕೋಟಿ ರೂ. ತೆರಿಗೆ ಕೊಡುತ್ತೇವೆ. ಆದರೆ ಕೇಂದ್ರವು ರಾಜ್ಯಕ್ಕೆ ವಾಪಸ್ ಕೊಡುವುದು, ಸ್ಮಾರ್ಟ್ ಸಿಟಿ ಯೋಜನೆ ಸೇರಿ ಕೇವಲ 65 ಸಾವಿರ ಕೋಟಿ ಮಾತ್ರ. ಶೇ.15-16ರಷ್ಟು ಮಾತ್ರ ವಾಪಸ್ ನೀಡುತ್ತಿದೆ. ಇದು ಕೇಂದ್ರವು ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಅಲ್ಲವೇ” ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, “ಪ್ರಧಾನಿ ಮೋದಿಯವರಿಗೆ ಹೇಳಿ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ನಿಲ್ಲಿಸಿ” ಎಂದು ಶಾಸಕ ವೇದವ್ಯಾಸ ಕಾಮತ್ಗೆ ಕಿವಿ ಮಾತು ಹೇಳಿದರು.
ದಕ್ಷಿಣ ಕನ್ನಡ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ: “ದಕ್ಷಿಣ ಕನ್ನಡವು ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆಯಾಗಲಿದೆ. ಸಚಿವ ಕೃಷ್ಣಬೈರೇಗೌಡರು ವಿಶೇಷ ಕಾಳಜಿ, ಸಾಕಷ್ಟು ಶ್ರಮ ವಹಿಸಿ ಜಿಲ್ಲೆಯನ್ನು ಪೋಡಿಮುಕ್ತ ಮಾಡುವ ದಿಕ್ಕಿನಲ್ಲಿ ಕೆಲಸಗಳು ನಡೆದಿವೆ” ಎಂದು ಶ್ಲಾಘನೆ ವ್ಯಕ್ತಪಡಿಸಿದರು.”ಮನುಷ್ಯರು ಮನುಷ್ಯರನ್ನು ಪ್ರೀತಿಸುವ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಈ ಸಮಾಜವನ್ನು ನಾವು ಇನ್ನಷ್ಟು ಗಟ್ಟಿಗೊಳಿಸೋಣ. ಜೊತೆಗೆ ಅಸಮಾನತೆಯ ಸಮಾಜವನ್ನು ಸುಧಾರಿಸಿ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಸಮಾಜ ಕಟ್ಟೋಣ. ಅತ್ಯಂತ ಪ್ರಜ್ಞಾವಂತರೇ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗಳು ನಡೆಯಬಾರದು” ಎಂದರು.”ನಾವು ನುಡಿದಂತೆ ನಡೆದಿದ್ದೇವೆ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಕೊಡುವ ಭರವಸೆ ನೀಡಿದ್ದೆವು. ಅದರಂತೆ ಪುತ್ತೂರಿಗೂ ಮೆಡಿಕಲ್ ಕಾಲೇಜು ಕೊಟ್ಟಿದ್ದೇವೆ. ಸದ್ಯ 250 ಬೆಡ್ಗಳ ಆಸ್ಪತ್ರೆ ಮಾಡುತ್ತೇವೆ. ಆಮೇಲೆ ಮತ್ತೆ 250 ಬೆಡ್ಗಳನ್ನು ವಿಸ್ತರಿಸುತ್ತೇವೆ” ಎಂದು ಸಿಎಂ ಭರವಸೆ ನೀಡಿದರು.
‘ಪ್ರಜಾಸೌಧ’: ದ.ಕ. ಜಿಲ್ಲಾಡಳಿತ, ಕರ್ನಾಟಕ ಗೃಹ ಮಂಡಳಿ, ಸ್ಮಾರ್ಟ್ ಸಿಟಿ ಲಿಮಿಟೆಡ್ ಆಶ್ರಯದಲ್ಲಿ ಪಡೀಲ್‌ನಲ್ಲಿ ನಿರ್ಮಾಣಗೊಂಡಿರುವ ಮೂರು ಮಹಡಿಗಳ ಈ ಸಂಕೀರ್ಣ ಒಟ್ಟು 2,53,159.67 ಚದರ ಅಡಿ ವಿಸ್ತೀರ್ಣ ಹೊಂದಿದೆ. ಒಟ್ಟು 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಸದ್ಯ ಸುಮಾರು 23 ಇಲಾಖೆಗಳ ಕಾರ್ಯಾಚರಣೆ ಆರಂಭವಾಗಲಿದೆ. ತುಳುನಾಡಿನ ಪಾರಂಪರಿಕ ಶೈಲಿಯಲ್ಲಿ ಈ ಸಂಕೀರ್ಣ ನಿರ್ಮಾಣವಾಗಿದೆ. ಈ ಕಟ್ಟಡಕ್ಕೆ 2016ರಲ್ಲಿ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯರೇ ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಅವರೇ ಕಟ್ಟಡದ ಲೋಕಾರ್ಪಣೆ ಮಾಡಿದ್ದಾರೆ.ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರೊಂದಿಗೆ ಪ್ರವೇಶದ್ವಾರದಿಂದ ಪಿಲಿಕುಳ ದರ್ಶಿನಿಯ ಬಗ್ಗೀಸ್ ಏರಿದರು. ಮುಖ್ಯದ್ವಾರದವರೆಗೆ ಬಗ್ಗೀಸ್‌ನಲ್ಲಿ ಆಗಮಿಸಿದ ಅವರು ಪ್ರಜಾಸೌಧದ ನಾಮಫಲಕ ಅನಾವರಣಗೊಳಿಸಿದರು. ಬಳಿಕ ದೀಪ ಬೆಳಗಿ ಪ್ರಜಾಸೌಧವನ್ನು ಲೋಕಾರ್ಪಣೆಗೊಳಿಸಿದರು. ವೇದಿಕೆಗೆ ಆಗಮಿಸುವ ವೇಳೆ ಮಹಿಳೆಯರು ಸಿಎಂಗೆ ಪೂರ್ಣಕುಂಭದ ಸ್ವಾಗತ ಕೋರಿದರು. ಬಳಿಕ ಸಿದ್ದರಾಮಯ್ಯ ಪೊಲೀಸ್ ಇಲಾಖೆಯಿಂದ ಗೌರವ ರಕ್ಷೆಯನ್ನು ಸ್ವೀಕರಿಸಿದರು. ನಂತರ ವೇದಿಕೆಗೆ ಆಗಮಿಸಿದ ಸಿದ್ದರಾಮಯ್ಯಗೆ ಯಕ್ಷಗಾನದ ಕಿರೀಟದ ಫಲಕವನ್ನು ನೀಡುವ ಮೂಲಕ ಸ್ವಾಗತಿಸಲಾಯಿತು. ವೇದಿಕೆಯಲ್ಲಿ ಸಿದ್ದರಾಮಯ್ಯ 8 ಸಾವಿರ ಮಂದಿಗೆ ಸಾಂಕೇತಿಕವಾಗಿ ಪಹಣಿ ಪತ್ರ ವಿತರಿಸಿದರು.ಈ ವೇಳೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಕಂದಾಯ ಸಚಿವ ಕೃಷ್ಣಭೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ವೇದವ್ಯಾಸ ಕಾಮತ್, ಅಶೋಕ್ ರೈ, ಸಂಸದ ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಎಂಎಲ್‌ಸಿಗಳಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳಾಲದ ಉರೂಸ್ಗೆ ಸಿಎಂ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತವಾಗಿರುವ ಸ್ಯೆಯದ್ ಮಹಮ್ಮದ್ ಶರೀಫುಲ್ ಮದನಿ ದರ್ಗಾದ ಉಳ್ಳಾಲದ ಉರೂಸ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದರು. ಉಳ್ಳಾಲ ಖಾಝಿ ಎ.ಪಿ.ಅಬೂಬಕರ್ ಮುಸ್ಲಿಯಾರ್, ವಿಧಾನಸಭಾ ಸ್ಪೀಕರ್, ಉಳ್ಳಾಲ ಶಾಸಕ ಯು.ಟಿ.ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮುಂತಾದ ಗಣ್ಯರು ಇದ್ದರು.


