
ಚಿಕ್ಕಮಗಳೂರು: ಕರ್ನಾಟಕದಲ್ಲಿ (Karnataka)ಜಾನುವಾರುಗಳ ಮೇಲಿನ ಕ್ರೌರ್ಯ ಮತ್ತೆ ಮುಂದುವರಿದಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇದೀಗ ಕೆಲವು ಮಂದಿ ದುಷ್ಕರ್ಮಿಗಳು ಹಸುವಿನ ಕೆಚ್ಚಲು ಕತ್ತರಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ. ಚಿಕ್ಕಮಗಳೂರಿನ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಲಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಹಸು ಮೃತಪಟ್ಟಿದೆ. ಇದರೊಂದಿಗೆ, ಬೆಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದ ರೀತಿಯ ಕೃತ್ಯಕ್ಕೆ ಇದೀಗ ಚಿಕ್ಕಮಗಳೂರು ಕೂಡ ಸಾಕ್ಷಿಯಾದಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಮ್ಮಿಹಳ್ಳಿಯಲ್ಲಿ ಶೇಖರಪ್ಪ ಎಂಬುವವರಿಗೆ ಸೇರಿದ ಹಸುವನ್ನು ರಾತ್ರೋರಾತ್ರಿ ಹಸು ಕಳವು ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಆದರೆ, ಕಳ್ಳತನ ಯತ್ನ ವಿಫಲವಾದಾಗ ರೋಷದಿಂದ ಹಸುವಿನ ಕೆಚ್ಚಲು ಕತ್ತರಿಸಿ ಕಳ್ಳರು ಪರಾರಿಯಾಗಿದ್ದಾರೆ. ಪರಿಣಾಮವಾಗಿ ಹಸು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ.ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಿರಂತರವಾಗಿ ಜಾನುವಾರುಗಳ ಕಳ್ಳತನ ಮಾಡಲಾಗುತ್ತಿದೆ. ಆದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಚಾಮರಾಜಪೇಟೆಯ ವಿನಾಯಕನಗರದಲ್ಲಿ ಮೂರು ಹಸುಗಳ ಕೆಚ್ಚಲು ಕತ್ತರಿಸಿ ಕ್ರೌರ್ಯ ಮೆರೆದ ಘಟನೆ ಜನವರಿಯಲ್ಲಿ ನಡೆದಿತ್ತು. ಘಟನೆ ಸಂಬಂಧ ಪೊಲೀಸ್ ದೂರು ಸಹ ದಾಖಲಾಗಿ, ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಾಣಿಗಳ ಮೇಲಿನ ಈ ರೀತಿಯ ಹಿಂಸೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರಿನ ಘಟನೆ ದೇಶದಾದ್ಯಂತ ಸುದ್ದಿಯಾಗಿತ್ತು.
ಅದಾದ ಕೆಲವೇ ದಿನಗಳಲ್ಲಿ ಮೈಸೂರಿನಲ್ಲೂ ಸಹ ಮಚ್ಚಿನಿಂದ ಹಸುವಿನ ಬಾಲ ಕತ್ತರಿಸಿ ವಿಕೃತಿ ಮೆರೆಯಲಾಗಿತ್ತು. ಆ ನಂತರ ಉತ್ತರ ಕನ್ನಡ ಜಿಲ್ಲೆಯಲ್ಲ ಅಂಥದ್ದೇ ಘಟನೆ ವರದಿಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದಲ್ಲಿ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವಿನ ತಲೆ ಕಡಿದು ಬಳಿಕ ಅದರ ದೇಹವನ್ನು ಕೊಂಡೊಯ್ಯಲಾಗಿತ್ತು. ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದ ಪ್ರಕರಣ ಕೂಡ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು.


