Country
Trending

ಆಪರೇಷನ್ ಸಿಂಧೂರ್ ಬಗ್ಗೆ ಪಹಲ್ಗಾಮ್ ದಾಳಿ ಸಂತ್ರಸ್ತರ ಮನೆಯವರು ಹೇಳೋದೇನು? ಇಲ್ಲಿದೆ ವಿವರ

ನವದೆಹಲಿ: ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ (Pakistan) ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಭಾರತೀಯ ಸೇನೆಯ ಕ್ರಮ ಶ್ಲಾಘನಾರ್ಹ. ಆದರೆ, 9 ಸ್ಥಳ ಸಾಲದು. ಇಡೀ ಪಾಕಿಸ್ತಾನವನ್ನು ಧ್ವಂಸ ಮಾಡಬೇಕು ಎಂದು ಪಹಲ್ಗಾಮ್ ದಾಳಿಯಲ್ಲಿ (Pahalgam Attack) ಮೃತಪಟ್ಟ ಸಮೀರ್ ಗುಹಾ (ಕೋಲ್ಕಾತ್ತಾದವರು) ಪತ್ನಿ ಆಗ್ರಹಿಸಿದ್ದಾರೆ. ಈ ದಂಪತಿ ಕೋಲ್ಕಾತ್ತಾದಿಂದ ಕಾಶ್ಮೀರಕ್ಕೆ ಹೋಗಿದ್ದರು. ಆದರೆ ಉಗ್ರರ ಅಟ್ಟಹಾಸಕ್ಕೆ ಪತಿ ಶವವಾಗಿ ವಾಪಾಸ್ ಬಂದಿದ್ದರೆ, ಪತ್ನಿ ಕಣ್ಣೀರಿನಲ್ಲೇ ಕೈತೊಳೆಯುತ್ತಿದ್ದರು. ಇದೀಗ ಭಾರತದ ಮಹಿಳೆಯರ ಸಿಂಧೂರ ಅಳಿಸಿದ್ದಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ.ಭಾರತೀಯ ವಾಯುಸೇನೆಯಲ್ಲಿ ಲೆಫ್ಟಿನೆಂಟ್ ಆಗಿದ್ದ ವಿನಯ್ ನರ್ವಾಲ್ ಕೂಡ ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾಗಿದ್ದರು. ಅವರ ಪತ್ನಿ ಪತಿಯ ಶವದ ಮುಂದೆ ಕುಳಿತಿದ್ದ ದೃಶ್ಯ ವಿಶ್ವದಾದ್ಯಂತ ವೈರಲ್ ಆಗಿತ್ತು. ಆಕೆಯ ಕಣ್ಣೀರಿಗೆ ಇಡೀ ಜಗತ್ತು ಮಮ್ಮಲ ಮರುಗಿತ್ತು. ಮದುವೆಯಾದ ಬರೀ 7 ದಿನಕ್ಕೆ ಆಕೆ ಪತಿಯನ್ನು ಕಳೆದುಕೊಂಡಿದ್ದರು. ಸದ್ಯ ವಿನಯ್ ನರ್ವಾಲ್ ತಾಯಿ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನು ಪಹಲ್ಗಾಮ್ ದಾಳಿಯಲ್ಲಿ ಕಾಶ್ಮೀರದ ಕುದುರೆ ಸವಾರಿ ವ್ಯಾಪಾರಿ ಸೈಯದ್ ಆದಿಲ್ ಹುಸೇನ್ ಶಾ ಕೂಡ ಮೃತಪಟ್ಟಿದ್ದರು. ಏಪ್ರಿಲ್ 22ರಂದು ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ಸುರಿಮಳೆಗೈಯ್ಯುತ್ತಿದ್ದಾಗ ಪ್ರವಾಸಿಗರ ರಕ್ಷಣೆಗಾಗಿ ಅವರಿಗೆ ಅಡ್ಡ ನಿಂತುಕೊಂಡಿದ್ದರು. ಇವರೆಲ್ಲ ನಮ್ಮ ರಾಜ್ಯಕ್ಕೆ ಬಂದ ಪ್ರವಾಸಿಗರು, ಇವರನ್ನು ಕೊಲ್ಲಬೇಡಿ ಎಂದು ಅಂಗಲಾಚಿದ್ದರು. ಆದರೆ ಭಯೋತ್ಪಾದಕರು ಆತನನ್ನು ಕೊಂದು ಅಟ್ಟಹಾಸ ಮೆರೆದಿದ್ದರು. ಇದೀಗ ಆದಿಲ್ ಹುಸೇನ್​ ಸಾವಿಗೆ ನ್ಯಾಯ ಸಿಕ್ಕಂತಾಗಿದೆ. ಮನೆಯ ಆಧಾರ ಸ್ತಂಬವನ್ನೇ ಕಳೆದುಕೊಂಡಿದ್ದವರು ಭಾರತದ ದಾಳಿಗೆ ಸಂತೋಷ ವ್ಯಕ್ತಪಡಿಸಿದ್ದಾರೆ.ಈ ದಾಳಿಯಿಂದ ನಾವು ಖುಷಿಯಾಗಿದ್ದೇವೆ. ನನ್ನ ಮಗ ಸೇರಿದಂತೆ 26 ಜನರನ್ನು ಉಗ್ರರು ಹತ್ಯೆ ಮಾಡಿದ್ದರು. ಈ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ನಾವು ಖುಷಿಯಾಗಿದ್ದೇವೆ. ನಾವು ಈ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ ಎಂದು ಮೃತ ಆದಿಲ್ ಹುಸೇನ್ ತಂದೆ ಹೈದರ್ ಶಾ ಹೇಳಿದ್ದಾರೆ.

ಮಹಾರಾಷ್ಟ್ರದ ಪುಣೆ ಮೂಲದ ಸಂತೋಷ್ ಜಗದಾಳೆ ಕೂಡ ಪ್ರವಾಸಕ್ಕೆ ತೆರಳಿದ್ದರು. ಆಗ ಉಗ್ರರು ಇವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಆಗ ಬಳಿಕ ಸಂತೋಷ್ ಮನೆಯಲ್ಲಿ ಕತ್ತಲೆ ಕವಿದಿತ್ತು. ಸಂತೋಷ್ ಪುತ್ರಿ ನಿತ್ಯ ನರಕದಲ್ಲೇ ಬದುಕು ದೂಡುತ್ತಿದ್ದರು. ದಾಳಿ ನಡೆದ 15 ದಿನದಲ್ಲಿ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ಮೃತ ಸಂತೋಷ್ ಜಗದಾಳೆ ಪುತ್ರಿ ಅವಸಾರಿ ಪ್ರತಿಕ್ರಿಯಿಸಿ, ಮೃತಪಟ್ಟ 26 ಜನರ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ ಎಂದು ನನಗೆ ಅನ್ನಿಸುತ್ತದೆ ಎಂದಿದ್ದಾರೆ.

ಇಷ್ಟೆ ಅಲ್ಲದೆ, ಕೇವಲ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಶುಭಂ ದ್ವಿವೇದಿಯನ್ನು ಉಗ್ರರು ಕೊಂದು ಹಾಕಿದ್ದರು. ಮದುವೆಯ ಖುಷಿಯಲ್ಲಿದ್ದ ಇಡೀ ಕುಟುಂಬದಲ್ಲಿ ಮೌನ ಆವರಿಸಿತ್ತು. ಪತಿ ಜೊತೆಗೆ ಪ್ರವಾಸಕ್ಕೆ ಹೋಗಿದ್ದ ಪತ್ನಿ ಐಶಾನ್ಯಾ ಪಾಡಂತೂ ಕೇಳೋದೇ ಬೇಡ. ಆಕೆಯ ಕಣ್ಣ ಎದುರೇ ಶುಭಂ ಸಾವಿನ ಮನೆ ಸೇರಿದ್ದರು. ಶುಭಂ ಮನೆಗೆ ಇತ್ತೀಚೆಗಷ್ಟೇ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಸದ್ಯ ಈ ಬಗ್ಗೆ ಮಾತನಾಡಿರುವ ಶುಭಂ ಪತ್ನಿ, ನನ್ನ ಗಂಡನ ಆತ್ಮಕ್ಕೆ ಈಗ ಶಾಂತಿ ಸಿಕ್ಕಿತು ಎಂದು ಹೇಳಿದ್ದಾರೆ.ಸೇನೆಗೆ ಧನ್ಯವಾದ ಹೇಳುತ್ತೇನೆ. ತುಂಬಾ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಪತಿಯ ಸಾವಿಗೆ ಅವರು ಪ್ರತೀಕಾರ ತೀರಿಸಿಕೊಂಡಿದ್ದಾರೆ. ಖಂಡಿತ ಇದು ಅಸಲಿ ಶ್ರದ್ಧಾಂಜಲಿ. ಅವರ ಆತ್ಮಕ್ಕೆ ಇವತ್ತು ಶಾಂತಿ ಸಿಕ್ಕಿದೆ ಎಂದು ಅವಸಾರಿ ಹೇಳಿದ್ದಾರೆ.

ಕರ್ನಾಟಕದ ಮೂವರು ಕೂಡ ರಕ್ತಪಿಪಾಸುಗಳಿಗೆ ಬಲಿಯಾಗಿದ್ದರು. ಈ ಪೈಕಿ ಶಿವಮೊಗ್ಗದ ಮಂಜುನಾಥ್ ಕೂಡ ಒಬ್ಬರು. ಮಗನ ಪಿಯುಸಿ ಫಲಿತಾಂಶದ ಸಂಭ್ರಮಾಚರಣೆಯನ್ನು ಕಣಿವೆ ರಾಜ್ಯದಲ್ಲಿ ಮಾಡಬೇಕೆಂದು ಇವರೆಲ್ಲಾ ಕಾಶ್ಮೀರಕ್ಕೆ ತೆರಳಿದ್ದರು. ಆದರೆ ಬಂದೂಕು ಹಿಡಿದು ಬಂದ ಪಾತಕಿಗಳು, ಮಂಜುನಾಥ್ ಪತ್ನಿ ಹಾಗೂ ಮಗನ ಮುಂದೆಯೇ ಉಸಿರು ನಿಲ್ಲಿಸಿಬಿಟ್ಟಿದ್ದರು. ಮಂಜುನಾಥ್ ಪತ್ನಿ, ‘‘ನನ್ನನ್ನೂ ಕೊಲ್ಲಿ’’ ಎಂದಾಗ ಭಯೋತ್ಪಾದಕರು, ‘‘ಮೋದಿಗೆ ಹೇಳು’’ ಎಂದಿದ್ದರು. ಇದೀಗ ತಾಯಿ ಸುಮತಿ ಪ್ರತಿಕ್ರಿಯಿಸಿದ್ದು, ಬೇರೆಯವರ ಮಕ್ಕಳಾದರೂ ಇನ್ನು ನೆಮ್ಮದಿಯಿಂದ ಓಡಾಡಿಕೊಂಡಿರಲಿ ಎಂದಿದ್ದಾರೆ.

ಬೆಂಗಳೂರಿನ ಭರತ್ ಭೂಷಣ್ ಮನೆಯಲ್ಲೂ ಉಗ್ರರ ಸಾವಿಗೆ ಸಂತೋಷ ವ್ಯಕ್ತವಾಗಿದೆ. ಭರತ್ ತಂದೆ ಈ ಬಗ್ಗೆ ಮಾತನಾಡಿ, ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲಾಗಿದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.26 ಸಾವಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಕುಂಕುಮ ಅಳಿಸಿದವರನ್ನು ‘ಆಪರೇಷನ್ ಸಿಂಧೂರ್’ ಹೆಸರಿನಲ್ಲೇ ಸಾವಿನ ಮನೆಗೆ ಸೇರಿಸಿದೆ.

Related Articles

Leave a Reply

Your email address will not be published. Required fields are marked *

Back to top button