ಇತ್ತೀಚಿನ ಸುದ್ದಿ
Trending

ಭಾರತ-ಜಪಾನ್ ವಾರ್ಷಿಕ ಶೃಂಗಸಭೆ

15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಎರಡು ದಿನಗಳ ಅಧಿಕೃತ ಪ್ರವಾಸ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಟೋಕಿಯೋಗೆ ತಲುಪಿದ್ದಾರೆ. ಸುಮಾರು ಏಳು ವರ್ಷಗಳಲ್ಲಿ ಜಪಾನ್​ಗೆ ಮೋದಿ ಅವರು ನೀಡುತ್ತಿರುವ ಮೊದಲ ಸ್ವತಂತ್ರ ಭೇಟಿ ಇದಾಗಿದೆ.

ಪ್ರಧಾನಿ ಭೇಟಿ ಸಂದರ್ಭದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಜಪಾನ್‌ನೊಂದಿಗೆ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮುನ್ನಡೆಸುವ ಗುರಿಯನ್ನು ಹೊಂದಲಾಗಿದೆ. ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರ ಆಹ್ವಾನದ ಮೇರೆಗೆ ಮೋದಿ ಅವರು ಅಲ್ಲಿಗೆ ಭೇಟಿ ನೀಡಿದ್ದಾರೆ.

ಚೀನಾಕ್ಕೆ ಪ್ರಧಾನಿ ಮೋದಿ ಪ್ರಯಾಣ: ಶೃಂಗಸಭೆಯ ಸಮಯದಲ್ಲಿ, ಪ್ರಧಾನಿ ಮೋದಿ ತಮ್ಮ ಜಪಾನ್ ಪ್ರಧಾನಿ ಜೊತೆ ಸಮಗ್ರ ಮಾತುಕತೆ ನಡೆಸಲಿದ್ದಾರೆ. ಬಹು ಕ್ಷೇತ್ರಗಳಲ್ಲಿನ ಪ್ರಗತಿ ಪರಿಶೀಲನೆಯ ಜೊತೆಗೆ, ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ಜಪಾನ್ ಭೇಟಿಯ ಬಳಿಕ, ಮೋದಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ಪ್ರಯಾಣಿಸಲಿದ್ದಾರೆ.ನವದೆಹಲಿಯಿಂದ ಹೊರಡುವ ಮುನ್ನ, ಪ್ರಧಾನಿ ಮೋದಿ ಪ್ರವಾಸದ ಮಹತ್ವದ ಬಗ್ಗೆ ತಿಳಿಸಿದ್ದಾರೆ. ಕಳೆದ 11 ತಿಂಗಳುಗಳಲ್ಲಿ ಸ್ಥಿರ ಪ್ರಗತಿಯನ್ನು ಕಂಡಿರುವ ತಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ “ಮುಂದಿನ ಹಂತ”ದ ಮೇಲೆ ಭಾರತ ಮತ್ತು ಜಪಾನ್ ಗಮನಹರಿಸಲಿವೆ ಎಂದು ಅವರು ಹೇಳಿದ್ದಾರೆ.

ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಸಂಬಂಧಗಳ ವೃದ್ಧಿ: ಭಾರತ-ಜಪಾನ್ ಸಹಕಾರವನ್ನು ಬಲಪಡಿಸುವ ಮತ್ತು ಉದಯೋನ್ಮುಖ ಜಾಗತಿಕ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಹೊಸ ಉಪಕ್ರಮಗಳ ಆರಂಭಕ್ಕೆ ಈ ಶೃಂಗಸಭೆಯು ಅವಕಾಶ ಒದಗಿಸಲಿದೆ. ಪ್ರಧಾನಿ ಮೋದಿ ಅವರು ಜಪಾನ್‌ನ ರಾಜಕೀಯ ನಾಯಕರು, ವ್ಯಾಪಾರ ಮುಖಂಡರು ಮತ್ತು ಜಪಾನ್‌ನಲ್ಲಿರುವ ಭಾರತದ ಸ್ನೇಹಿತರ ಜೊತೆ ಮಾತುಕತೆ ನಡೆಸಲಿದ್ದಾರೆ. ಎರಡೂ ದೇಶಗಳ ನಡುವೆ ಮತ್ತಷ್ಟು ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಬೆಳೆಸಲಿದ್ದಾರೆ.

2014ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಧಾನಿ ಮೋದಿ ಅವರು ಜಪಾನ್‌ಗೆ ಎಂಟನೇ ಬಾರಿಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಇಶಿಬಾ ಅವರೊಂದಿಗಿನ ಅವರ ಮೊದಲ ವಾರ್ಷಿಕ ಶೃಂಗಸಭೆ ಇದಾಗಿದೆ. ಜಪಾನ್‌ನೊಂದಿಗಿನ ಸಂಬಂಧಕ್ಕೆ ಭಾರತ ನೀಡುವ ಹೆಚ್ಚಿನ ಆದ್ಯತೆಯನ್ನು ಇದು ಒತ್ತಿಹೇಳುತ್ತಿದೆ. ಎರಡೂ ರಾಷ್ಟ್ರಗಳು ರಾಜತಾಂತ್ರಿಕವಾಗಿ ಸುದೀರ್ಘ ಇತಿಹಾಸವನ್ನು ಹೊಂದಿವೆ. ಈ ಹಿಂದೆ ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ, ಹೂಡಿಕೆ, ಶುದ್ಧ ಇಂಧನ, ಮೂಲಸೌಕರ್ಯ ಮತ್ತು ತಂತ್ರಜ್ಞಾನದ ಕುರಿತಂತೆ ಹಲವು ಉನ್ನತ ಮಟ್ಟದ ಭೇಟಿಗಳು ಮತ್ತು ಪಾಲುದಾರಿಕೆಗಳು ಜರುಗಿವೆ.

ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ವ್ಯಾಪಾರವು 2023-24ರಲ್ಲಿ 22.8 ಶತಕೋಟಿ ಡಾಲರ್ ತಲುಪಿದೆ. ಜಪಾನ್ ಭಾರತದ ಐದನೇ ಅತಿದೊಡ್ಡ ವಿದೇಶಿ ನೇರ ಹೂಡಿಕೆಯ ಮೂಲವಾಗಿದ್ದು, ಡಿಸೆಂಬರ್ 2024ರವರೆಗೆ 43.2 ಶತಕೋಟಿ ಡಾಲರ್ ಆಗಿತ್ತು. ಎರಡೂ ದೇಶಗಳು ಅರೆವಾಹಕಗಳು, ನವೋದ್ಯಮಗಳು, ಶುದ್ಧ ಇಂಧನ, ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ, ಕೈಗಾರಿಕಾ ಸ್ಪರ್ಧಾತ್ಮಕತೆ ಮತ್ತು ಕೌಶಲ್ಯ ಅಭಿವೃದ್ಧಿಯಂತಹ ಉದಯೋನ್ಮುಖ ವಲಯಗಳಲ್ಲಿ ಪರಸ್ಪರ ಸಹಕಾರ ಹೊಂದಿವೆ.

ವಿದೇಶಾಂಗ ಸಚಿವಾಲಯದ ಪ್ರಕಾರ, ಪ್ರಧಾನಿ ಮೋದಿಯವರ ಭೇಟಿಯು ಭಾರತ ಮತ್ತು ಜಪಾನ್ ನಡುವಿನ ದೀರ್ಘಕಾಲದ ಸ್ನೇಹವನ್ನು ಇನ್ನಷ್ಟು ಬಲಪಡಿಸಲಿದೆ. ಸಹಕಾರಕ್ಕೆ ಹೊಸ ಮಾರ್ಗಗಳನ್ನು ತೆರೆಯಲಿದ್ದು, ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಅದರಾಚೆಗೆ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಗೆ ಎರಡೂ ದೇಶಗಳ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button