
ಪಾಂಡವಪುರ : ತಾಲೂಕಿನ ಕನಗನಮರಡಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರೈತಸಂಘ-ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿ ಅಭಿ ಚನ್ನೇಗೌಡ ಅವಿರೋಧವಾಗಿ ಆಯ್ಕೆಯಾದರು.ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 15 ಸದಸ್ಯರ ಪೈಕಿ 11 ರೈತಸಂಘ-ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿತ ಸದಸ್ಯರು ಹಾಗೂ 4 ಜೆಡಿಎಸ್ ಬೆಂಬಲಿತ ಸದಸ್ಯರ ಬಲ ಇದೆ.
ರೈತಸಂಘ-ಕಾಂಗ್ರೆಸ್ ಮೈತ್ರಿಕೂಟದ ಅಧಿಕಾರದ ಒಡಂಬಡಿಕೆ ಸೂತ್ರಧನ್ವಯ ಈ ಹಿಂದಿನ ಅಧ್ಯಕ್ಷೆ ಪ್ರಮೀಳಾ ಹೇಮಣ್ಣ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ರೈತಸಂಘ-ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿ ಅಭಿ ಚನ್ನೇಗೌಡ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ನರೇಗಾ ಸಹಾಯಕ ನಿರ್ದೇಶಕ ಸುರೇಂದ್ರಕುಮಾರ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಈ ವೇಳೆ ರೈತಸಂಘದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ನೂತನ ಅಧ್ಯಕ್ಷೆ ಅಭಿ ಚನ್ನೇಗೌಡ ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ಪಂಚಾಯಿತಿ ಅಭಿವೃದ್ಧಿ ಪಡಿಸುವ ಜತೆಗೆ ಮಹಿಳೆಯರಿಗೆ ಪಂಚಾಯಿತಿಯಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತೇನೆ ಎಂದರು.
ರೈತಸಂಘದ ಮುಖಂಡ ಬಲರಾಮೇಗೌಡ ಮಾತನಾಡಿ, ರೈತಸಂಘದಲ್ಲಿನ ಒಡಂಬಡಿಕೆಯಂತೆ ಅಧಿಕಾರ ಹಂಚಿಕೆ ಮಾಡಲಾಗಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು 5 ಕೋಟಿ ರೂ. ಅನುದಾನ ನೀಡಿದ್ದು, ಇನ್ನು ಹೆಚ್ಚಿನ ಅನುದಾನ ತಂದು ಗ್ರಾಮಾಭಿವೃದ್ಧಿ ಮಾಡಲಾಗುವುದು ಎಂದರು.
ಈ ವೇಳೆ ಉಪಾಧ್ಯಕ್ಷ ಈರಾಚಾರಿ, ಸದಸ್ಯರಾದ ಕೆ.ಎಸ್.ರಂಗಸ್ವಾಮಿ, ಎಂ.ಕೆ.ಸ್ವಾಮಿಗೌಡ, ವಸಂತ, ಎನ್.ಪಿ.ಸುದರ್ಶನ್, ಭಾಗ್ಯ, ಜಯಲಕ್ಷ್ಮಿ, ಸಿ.ಬಿ.ತಮ್ಮಣ್ಣ, ಮುಖಂಡರಾದ ಬಲರಾಮೇಗೌಡ, ಎಂ.ವಾಸುದೇವ್, ಎಂ.ನಾಗರಾಜು, ಧರ್ಮರತ್ನಾಕರ, ಬೂಸೇಗೌಡ, ಸೋಮಣ್ಣ, ಅಣ್ಣೇಗೌಡ, ಸ್ವಾಮಿಗೌಡ, ಶಿವಕುಮಾರ್, ಕೆ.ಜಿ.ಚಂದ್ರು, ಎಸ್.ಚನ್ನೇಗೌಡ, ಕೆ.ಜೆ.ಹೇಮಂತ್, ಕೃಷ್ಣ, ಮಂಜುಳಾ ಶಂಕರ್ ನಾಗ್, ಕುಳ್ಳಯ್ಯ,ಈರೇಗೌಡ, ಕೆ.ಎಲ್.ಉಮೇಶ್, ಕೃಷ್ಣಮೂರ್ತಿ, ಪಿಡಿಒ ಪುರುಷೋತ್ತಮ ಇತರರಿದ್ದರು.



