Country
Trending

ಪಹಲ್ಗಾಮ್ ದಾಳಿ ಬಗ್ಗೆ ಎನ್​ಐಎ ತನಿಖೆ ಚುರುಕು

ಬೆಂಗಳೂರು, ಏಪ್ರಿಲ್ 29: ದೇಶವನ್ನೇ ಬೆಚ್ಚಿಬೀಳಿಸಿದ್ದ ಕಾಶ್ಮೀರದ ಪಹಲ್ಗಾಮ್ ದಾಳಿಯ (Pahalgam Terror Attack) ಬಗ್ಗೆ ಎನ್​ಐಎ (NIA) ಅಧಿಕಾರಿಗಳು ತನಿಖೆಗೆ ಆರಂಭಿಸಿದ್ದಾರೆ. ಉಗ್ರರ ಗುಂಡೇಟಿಗೆ ಬಲಿಯಾದ, ಬೆಂಗಳೂರಿನ ಮತ್ತಿಕೆರೆಯ ನಿವಾಸಿ ಭರತ್ ಭೂಷಣ್ (Bharath Bhushan) ಮನೆಗೂ ಎನ್​ಐಎ ಅಧಿಕಾರಿಗಳ ತಂಡ ಆಗಮಿಸಿದೆ. ಭರತ್ ಭೂಷಣ್ ನಿವಾಸಕ್ಕೆ ಭೇಟಿ ನೀಡಿದ ನಾಲ್ವರು ಅಧಿಕಾರಿಗಳು ದಾಳಿ ಬಗ್ಗೆ ಮಹತ್ವದ ಮಾಹಿತಿ ಸಂಗ್ರಹ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ನಾಲ್ವರು ಅಧಿಕಾರಿಗಳ ತಂಡ ಭರತ್ ಭೂಷಣ್ ಪತ್ನಿ ಡಾ.ಸುಜಾತಾರನ್ನು ವಿಚಾರಣೆ ನಡೆಸಿದೆ. ಈ ವೇಳೆ ಘಟನೆ ಬಗ್ಗೆ ಕೆಲ ಮಾಹಿತಿ ಕಲೆ ಹಾಕಿದ ತಂಡ, ಶಂಕಿತ ಉಗ್ರರ ರೇಖಾಚಿತ್ರಗಳನ್ನು ತೋರಿಸಿ ಹೇಳಿಕೆ ಪಡೆದಿದ್ದಾರೆ.

ಭರತ್ ಪತ್ನಿ ಬಳಿ ಎನ್​ಐಎ ಕೇಳಿದ ಪ್ರಶ್ನೆಗಳೇನು?

  • ಕಾಶ್ಮೀರಕ್ಕೆ ಯಾವಾಗ ಹೋಗಿದ್ರು, ಯಾರ್ಯಾರು ಹೋಗಿದ್ರಿ?
  • ಉಗ್ರರು ಬಂದಾಗ ನೀವು ಎಲ್ಲಿದ್ರಿ, ಭರತ್ ಭೂಷಣ್ ಎಲ್ಲಿದ್ರು?
  • ಉಗ್ರರು ಬಂದಾಗ ಯಾವ ಭಾಷೆ ಮಾತಾಡಿದ್ರು, ಎಷ್ಟು ಜನ ಇದ್ರು?
  • ಉಗ್ರರ ಮುಖ ಚಹರೆ, ವೇಷ ಭೂಷಣ ನೆನಪಿದ್ಯಾ?
  • ಉಗ್ರರ ಸ್ಕೇಚ್ ತೋರಿಸಿ ಮಾಹಿತಿ ಸಂಗ್ರಹ
  • ಉಗ್ರರ ಬಳಿಯಿದ್ದ ಆಯುಧವನ್ನ ನೋಡಿದ್ರಾ? ಅದು ಯಾವ ರೀತಿ ಇತ್ತು?

ಹೀಗೆ ಎನ್​ಐಎ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ‌ಉಗ್ರರ ಪೈಶಾಚಿಕ ಕೃತ್ಯವನ್ನು ಕಣ್ಣಾರೆ ಕಂಡಿದ್ದ ಸುಜಾತಾ ಕಂಡಿದ್ದೆಲ್ಲವನ್ನು ವಿವರಿಸಿದ್ದಾರೆ. ಮುಂದೆಯೂ ತನಿಖೆಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಇಷ್ಟಲ್ಲದೇ ಉಗ್ರರ ದಾಳಿಗೆ ಬಲಿಯಾದ ಎಲ್ಲರ ಮನೆಗೂ ಹೋಗಿ ಎನ್​ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.ಉಗ್ರರ ದಾಳಿಯಲ್ಲಿ ಹತರಾಗಿದ್ದ ಶಿವಮೊಗ್ಗದ ಮಂಜುನಾಥ್ ಅವರ ಮನೆಗೂ ತೆರಳಿ ಅವರ ಪತ್ನಿ ಪಲ್ಲವಿ ಅವರಿಂದ ಎನ್​ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕಲಿದ್ದಾರೆ.

ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯ ಪಹಲ್ಗಾಮ್​ನಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದರಲ್ಲಿ 25 ಮಂದಿ ಪ್ರವಾಸಿಗರು ಹಾಗೂ ಒಬ್ಬ ಸ್ಥಳೀಯ ವ್ಯಕ್ತಿ ಸೇರಿದ್ದಾನೆ. ಶಿವಮೊಗ್ಗದ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಸಹ ಘಟನೆಯಲ್ಲಿ ಸಾವಿಗೀಡಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button