
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 7 ವಿಕೆಟ್ಗಳ ಜಯ ಸಾಧಿಸಿದೆ. ಮುಲ್ಲನ್ಪುರ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 157 ರನ್ಗಳಿಸಲಷ್ಟೇ ಶಕ್ತರಾಗಿದ್ದರು.ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡದ ಪರ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 73 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಆರ್ಸಿಬಿ ತಂಡ 18.5 ಓವರ್ಗಳಲ್ಲಿ 159 ರನ್ ಬಾರಿಸಿ 7 ವಿಕೆಟ್ಗಳ ಗೆಲುವು ದಾಖಲಿಸಿತು.ಈ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಗುರಿಯಾಗಿಸಿ ಸಂಭ್ರಮಿಸಿದ್ದರು. ಅತಿರೇಕಕ್ಕೆ ಕಾರಣವಾಗಿದ್ದ ಈ ಸಂಭ್ರಮಾಚರಣೆಯಿಂದ ಅಯ್ಯರ್ ಕೂಡ ಕೋಪಗೊಂಡಿದ್ದರು. ಇದಾಗ್ಯೂ ಪಂದ್ಯದ ಬಳಿಕ ಪಂಜಾಬ್ ಕಿಂಗ್ಸ್ ತಂಡದ ನಾಯಕ ಸಣ್ಣತನ ಮೆರೆದಿಲ್ಲ ಎಂಬುದು ವಿಶೇಷ.ಈ ಸೋಲಿನ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ನಮ್ಮ ತಂಡದ ಹೆಚ್ಚಿನ ಬ್ಯಾಟ್ಸ್ಮನ್ಗಳು ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡುತ್ತಿದ್ದಾರೆ. ಆದರೆ ನಾವು ಮೊದಲು ಬ್ಯಾಟ್ ಮಾಡುವಾಗ ವಿಕೆಟ್ ಅನ್ನು ನಿರ್ಣಯಿಸಲು ಕಷ್ಟಪಡುತ್ತಿದ್ದೇವೆ. ಹೀಗಾಗಿಯೇ ನಾವು ಪಡೆಯುತ್ತಿರುವ ಆರಂಭವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಉತ್ತಮ ಆರಂಭ ಪಡೆದರೂ ಆ ಬಳಿಕ ಸತತ ವಿಕೆಟ್ ಕಳೆದುಕೊಳ್ಳುತ್ತಿರುವುದರಿಂದ ಬೃಹತ್ ಮೊತ್ತಗಳಿಸಲು ಕಷ್ಟಪಡುತ್ತಿದ್ದೇವೆ. ಇದಾಗ್ಯೂ ಈ ಪಂದ್ಯದಲ್ಲೂ ಸಕಾರಾತ್ಮಕ ಅಂಶ ಎಂದರೆರೆ, ನಾವು ಉತ್ತಮ ಆರಂಭ ಪಡೆದಿದ್ದೇವೆ. ಬೌಲರ್ಗಳು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದರು.ನಾವು ವಿಕೆಟ್ಗೆ ಹೊಂದಿಕೊಳ್ಳುವ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ಚೆಂಡು ಹಳೆಯದಾದ ನಂತರ ಅದು ವಿಕೆಟ್ನಿಂದ (ಪಿಚ್) ದೂರ ಹೋಗುವುದಿಲ್ಲ. ಅವರಿಬ್ಬರೂ (ಓಪನರ್ಗಳು) ಉತ್ತಮ ಸ್ಟ್ರೋಕ್ಮೇಕರ್ಗಳು. ನೀವು ಅವರಿಗೆ ನಿಧಾನವಾಗಿ ಆಡಲು ಹೇಳಿದರೆ ಅದನ್ನು ಅರ್ಥಮಾಡಿಕೊಳ್ಳುವುದು ಅವರಿಗೆ ಕಷ್ಟ. ಹೀಗಾಗಿಯೇ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದರು.
ಈ ಪಂದ್ಯದ ಬಳಿಕ ನಮಗೆ ಆರು ದಿನಗಳ ರಜೆ ಇದೆ. ನಾವು ಮತ್ತೆ ತರಬೇತಿಗೆ ಮರಳುವುದು ಮುಖ್ಯ, ನಾವು ರಿಫ್ರೆಶ್ ಮಾಡಿಕೊಳ್ಳುವುಸು ಸಹ ಇಲ್ಲಿ ಮುಖ್ಯವಾಗುತ್ತದೆ. ಮುಂದಿನ ಪಂದ್ಯಕ್ಕೂ ಮೊದಲು ನಾವು ಸಾಧ್ಯವಾದಷ್ಟು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಖಚಿತಪಡಿಸಿಕೊಳ್ಳಬೇಕು. ಹೀಗಾಗಿ ಬಿಡುವಿನ ಸಮಯದಲ್ಲಿ ನಾವು ಮುಂದಿನ ಪಂದ್ಯಕ್ಕಾಗಿ ಪ್ಲ್ಯಾನ್ ರೂಪಿಸುತ್ತೇವೆ ಎಂದು ಅಯ್ಯರ್ ಹೇಳಿದ್ದಾರೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ವಿರಾಟ್ ಕೊಹ್ಲಿ ಕಾರಣ. ಅವರು ಉತ್ತಮ ಇನಿಂಗ್ಸ್ ಆಡಿದರು. ವಿರಾಟ್ ಕೊಹ್ಲಿ ಮತ್ತು ಅವರ ತಂಡದವರಿಗೆ ಅಭಿನಂದಿಸುತ್ತೇನೆ. ಅವರು ಚೆನ್ನಾಗಿ ಆಡಿದರು ಎಂದು ಶ್ರೇಯಸ್ ಅಯ್ಯರ್ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದರು.
ಅತ್ತ ಕಿಚಾಯಿಸಿ ಸಂಭ್ರಮಿಸಿದರೂ, ಪೋಸ್ಟ್ ಮ್ಯಾಚ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿಯನ್ನು ಹೊಗಳಿರುವುದು ವಿಶೇಷ. ಶ್ರೇಯಸ್ ಅಯ್ಯರ್ ಅವರ ಹೊಗಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಇದು ದೊಡ್ಡವರ ಸಣ್ಣತನಕ್ಕೆ, ಸಣ್ಣವರ ದೊಡ್ಡತನಕ್ಕೆ ಸಾಕ್ಷಿ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.