
ಬೆಂಗಳೂರು : ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಆದಿಚುಂಚನಗಿರಿ ಮಠದ ಆವರಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ, ಮಠದ ಪೀಠಾಧಿಪತಿಗಳಾದ ಡಾ. ನಿರ್ಮಲಾನಂದ ಸ್ವಾಮೀಜಿಗಳು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಕಲವನ್ನೂ ಭಗವಂತ ನೀಡಲಿ ಎಂದು ಆಶೀರ್ವದಿಸಿದ್ದಾರೆ.ಮಠದ ಆವರಣದಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿ, ಶ್ರೀ ಪ್ರಸನ್ನ ಮಹಾಗಣಪತಿ ಮತ್ತು ಶ್ರೀ ಮಾತಾ ಲಲಿತಾಂಬಿಕಾ ದೇವಾಲಯದ ಕುಂಭಾಭಿಷೇಕ ಮಹೋತ್ಸವ ಮತ್ತು ಲೋಕಾರ್ಪಣಾ ಸಮಾರಂಭ ಕಾರ್ಯಕ್ರಮ ಮಂಗಳವಾರ (ಏ. 15) ನಡೆದಿತ್ತು. ಈ ವೇಳೆ, ಶ್ರೀಗಳು, ಡಿಕೆಶಿಯವರನ್ನು ಹರಸಲು ಬಳಸಿದ ಪದಗಳು ವಿಶೇಷವಾಗಿತ್ತು.
” ಶಿವಕುಮಾರ್ ಅವರು ಶ್ರೀಮಠದ ಸದ್ಭಕ್ತರು, ಮಹಾಲಕ್ಷ್ಮೀ ಲೇಔಟಿನ ಈ ಜಾಗವು ಶ್ರೀಮಠಕ್ಕೆ ದೊರಕುವಂತಾಗಲು ಡಿಕೆಶಿಯವರ ಸಹಾಯವೂ ಕಾರಣ. ಅದಕ್ಕಾಗಿ, ಕಾಲಭೈರವೇಶ್ವರಸ್ವಾಮಿ, ಆಂಜನೇಯಸ್ವಾಮಿ ಸಕಲ ಭಾಗ್ಯಗಳನ್ನು ಮತ್ತು ಎಲ್ಲಾ ಅಧಿಕಾರಗಳನ್ನು ಕೊಟ್ಟು ದೇವರು ಅವರನ್ನು ಹರಸಲಿ” ಎಂದು ಆದಿಚುಂಚನಗಿರಿ ಮಠದ ಶ್ರೀಗಳು ಆಶೀರ್ವಚನ ನೀಡಿದ್ದಾರೆ.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, “ದೇವರು ವರ ಹಾಗೂ ಶಾಪ ಎರಡನನ್ನೂ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ನಿಮಗೆ ಸಿಗುವ ಅವಕಾಶದಲ್ಲಿ ನೀವು ಏನು ಮಾಡುತ್ತೀರಿ ಎಂಬುದು ಬಹಳ ಮುಖ್ಯ. ನಮ್ಮ ಹಿರಿಯರು ಮನೆ ಹುಷಾರು, ಮಠ ಹುಷಾರು ಎಂದು ಹೇಳಿದ್ದಾರೆ. ನಾವು ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ಮಠಗಳನ್ನು ಕಾಪಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ.ಡಿ.ಕೆ.ಶಿವಕುಮಾರ್ ಅವರ ಮಾತನ್ನು ಕೇಳಿದ ನಂತರ ನಾನು ಹೆಚ್ಚಿನ ಮಾತನ್ನು ಹೇಳುವ ಅವಶ್ಯಕತೆಯಿಲ್ಲ. ರಾಜಕಾರಣಿಯಾಗಿ ಸಂತನ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಶಿವಕುಮಾರ್ ಅವರು ಈ ರಾಜ್ಯಕ್ಕೆ ಮಂತ್ರಿ ಮಾತ್ರವಲ್ಲ, ಓರ್ವ ತನ್ನನ್ನು ತಾನೇ ಬೆಳೆಸಿಕೊಂಡ ವ್ಯಕ್ತಿ ಎಂದು ಆದಿಚುಂಚನಗಿರಿ ಮಠದ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಯಿತು, ವಿಗ್ರಹ ಕೆತ್ತಿದವರನ್ನು ಗೌರವಿಸಲಾಯಿತು. ವಿಗ್ರಹ ಕೆತ್ತುವುದಕ್ಕೆ ಮುನ್ನ ಯಾವರೀತಿ ಇರುತ್ತದೆ ಎನ್ನುವುದು ನಿಮಗೆಲ್ಲಾ ಗೊತ್ತು. ಹಲವಾರು ಏಟುಗಳನ್ನು ತಿಂದುತಿಂದು ಸಹಿಸಿಕೊಂಡು ವಿಗ್ರಹ ಪೂಜೆಗೆ ಅರ್ಹವಾಗುತ್ತದೆ ಎಂದು ನಿರ್ಮಲಾನಂದ ಶ್ರೀಗಳು ಹೇಳಿದ್ದಾರೆ.ಬದುಕಿನಲ್ಲಿ ಬರುವ ಎಲ್ಲಾ ಬವಣೆ, ಕಷ್ಟಗಳು, ತಿರಸ್ಕಾರ, ಹಿಂಸೆಗಳನ್ನು ಸಹಿಸಿಕೊಂಡ ವ್ಯಕ್ತಿಗಳು, ವಿಗ್ರಹ ಹೇಗೆ ಪೂಜೆಗೆ ಅರ್ಹವಾಗುತ್ತೋ, ಹಾಗೇ ಮೇಲ್ಪಂಕ್ತಿಗೆ ಸೇರುತ್ತಾರೆ. ಇದೇ ರೀತಿ, ಡಿ.ಕೆ.ಶಿವಕುಮಾರ್ ಅವರು ಹಲವು ಕಷ್ಟಗಳನ್ನು ಸಹಿಸಿಕೊಂಡು ಈಗ ಉಪಮುಖ್ಯಮಂತ್ರಿ ಆಗಿದ್ದಾರೆ ಎಂದು ಆದಿಚುಂಚನಗಿರಿ ಮಠದ ಶ್ರೀಗಳು ಹೇಳಿದ್ದಾರೆ.ನಾವು ನಮ್ಮ ಶಕ್ತಿಗೆ ಅನುಸಾರ ನಾವು ಮಠಗಳಿಗೆ ದಾನ ಮಾಡಬೇಕು. ಮನುಷ್ಯನ ಆಸೆಗೆ ಕೊನೆಯಿಲ್ಲ. ನಾವು ನಮ್ಮ ಆಸೆಗಳನ್ನು ಬದಿಗಿಟ್ಟು ಕೈಲಾದಷ್ಟು ದಾನ ಮಾಡಬೇಕು. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ, ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಬಹಳ ಮುಖ್ಯ. ನೀವು ನಿಮ್ಮ ಬದುಕಿನಲ್ಲಿ ಸಮಾಜಕ್ಕೆ ದಾನ ಧರ್ಮ ಮಾಡುವ ಕೆಲಸ ಮಾಡಬೇಕು ಎಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.