
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ವಿಚಾರಣೆ ಹಾಜರಾಗದ ಆರೋಪಿ, ನಟ ದರ್ಶನ್ ತೂಗುದೀಪ ಅವರ ವಿರುದ್ಧ ಬೆಂಗಳೂರು ನ್ಯಾಯಾಲಯ ಗರಂ ಆಗಿದೆ. ತಪ್ಪದೇ ಹಾಜರಾಗಬೇಕು ಎಂದು ಎಚ್ಚರಿಕೆ ನೀಡಿ ಕೇಸ್‌ನ ವಿಚಾರಣೆಯನ್ನು ಮುಂದೂಡಿದೆ.
ನಟ ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ಮಾಡಿದ ಆರೋಪವಿದ್ದು, ಎಲ್ಲಾ 17 ಆರೋಪಿಗಳು ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾರೆ. ಜಾಮೀನು ಸಂದರ್ಭದಲ್ಲಿ ಕೇಸ್‌ನ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂಬ ಷರತ್ತುನ್ನು ವಿಧಿಸಲಾಗಿತ್ತು. ಮಂಗಳವಾರ (ಏಪ್ರಿಲ್ 8) ಬೆಂಗಳೂರು ನಗರ ಸಿಸಿಎಚ್ 57ನೇ ನ್ಯಾಯಾಲಯದಲ್ಲಿ ಕೇಸ್‌ನ ವಿಚಾರಣೆ ಇತ್ತು. ಇತರೆ 16 ಆರೋಪಿಗಳು ಹಾಜರಿದ್ದು, ನಟ ದರ್ಶನ್ ಮಾತ್ರ ಗೈರಾಗಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್‌ನ 2 ನೇ ಆರೋಪಿ ದರ್ಶನ್ ಗೈರಾಗಿರುವುದನ್ನು ಗಮನಿಸಿದ ನ್ಯಾಯಾಧೀಶರು ಅವರ ವಕೀಲರಿಗೆ ಎಚ್ಚರಿಕೆ ನೀಡಿದರು. ಪ್ರಕರಣದ ವಿಚಾರಣೆ ಇದ್ದ ದಿನ ಕೋರ್ಟ್‌ಗೆ ಹಾಜರಾಗಬೇಕು. ಯಾವುದೇ ಕಾರಣಕ್ಕೂ ಕೋರ್ಟ್ ವಿಚಾರಣೆಗೆ ಗೈರಾಗಬಾರದು ಎಂದರು. ಈ ಸಂದರ್ಭದಲ್ಲಿ ದರ್ಶನ್ ಪರ ವಕೀಲರು ಅನಾರೋಗ್ಯ ಕಾರಣಕ್ಕೆ ಹಾಜರಾತಿಯಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳು ಕಡ್ಡಾಯ ಹಾಜರು ಇರಬೇಕು ಎಂದು ಸೂಚನೆ ನೀಡಿದ ನ್ಯಾಯಾಧೀಶರು ಪ್ರಕರಣ ವಿಚಾರಣೆಯನ್ನು ಮೇ 20 ಕ್ಕೆ ಮುಂದೂಡಿದ್ದಾರೆ.
ಇತ್ತೀಚೆಗೆ ಡೆವಿಲ್ ಚಿತ್ರದ ಶೂಟಿಂಗ್‌ಗಾಗಿ ನಟ ದರ್ಶನ್ ಕುಟುಂಬ ಸಮೇತ ರಾಜಸ್ಥಾನಕ್ಕೆ ತೆರಳಿದ್ದರು. ಕಳೆದ ವಾರವಷ್ಟೇ ಶೂಟಿಂಗ್‌ನಿಂದ ಬೆಂಗಳೂರಿಗೆ ಹಾಜರಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ಇದ್ದರೂ ಕೋರ್ಟ್‌ಗೆ ಹಾಜರಾಗಿಲ್ಲ. ಇದೇ ಸಂದರ್ಭದಲ್ಲಿ ಅನಾರೋಗ್ಯ ಕಾರಣವನ್ನು ನಟನ ಪರ ವಕೀಲರು ನೀಡಿದ್ದು, ಮತ್ತೆ ದರ್ಶನ್‌ಗೆ ಆರೋಗ್ಯ ಸಮಸ್ಯೆಯಾಗಿದೆ ಎನ್ನಲಾಗಿದೆ. ಇದು ನಟನ ಅಭಿಮಾನಿಗಳಲ್ಲಿ ಆತಂಕ ಉಂಟು ಮಾಡಿದೆ.
ನಟ ದರ್ಶನ್ ಅವರ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 2 ರಂದು ನಡೆಸಿದ ಕೋರ್ಟ್ ನಟನ ಪರ ವಕೀಲರಿಗೆ ಅಗತ್ಯ ದಾಖಲೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಏಪ್ರಿಲ್ 22 ಕ್ಕೆ ಮುಂದೂಡಿತ್ತು.
ನಟ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಅಸಭ್ಯವಾಗಿ ಕಮೆಂಟ್ ಮಾಡಿದ್ದಾನೆ. ಬೇಸರಗೊಂಡ ದರ್ಶನ್ ತನ್ನ ಆಪ್ತರೊಟ್ಟಿಗೆ ಸೇರಿ ರೇಣುಕಾಸ್ವಾಮಿ ಅಪಹರಣ ಮಾಡಿ, ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ನಟ ಸೇರಿ 17 ಆರೋಪಿಗಳನ್ನು ಜೂನ್ 11 ರಂದು ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನ ಹಿನ್ನೆಲೆ 6 ತಿಂಗಳು ಜೈಲಿ ವಾಸದ ಬಳಿಕ ಜಾಮೀನಿನ ಮೇಲೆ ನಟ ಹಾಗೂ ಇತರೆ ಆರೋಪಿಗಳು ಬಿಡುಗಡೆಯಾಗಿದ್ದರು.