ಬಿಬಿಎಂಪಿ ಕಸದ ಗಾಡಿ ಚಾಲಕರು, ಪೌರ ಕಾರ್ಮಿಕರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಕರ್ನಾಟಕದ ಪೌರಕಾರ್ಮಿಕರ (Pourakarmikas) ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ಅಲ್ಲದೆ, ಬಿಬಿಎಂಪಿ (BBMP) ಕಸದ ಗಾಡಿ ಚಾಲಕರು, ಪೌರ ಕಾರ್ಮಿಕರಿಗೆ ಮುಖ್ಯಮಂತ್ರಿಗಳು ಭರ್ಜರಿ ಘೋಷಣೆ ಮಾಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ಮಹಾಸಂಘದ 25ನೇ ವಾರ್ಷಿಕೋತ್ಸವ ಮತ್ತು ಪೌರ ಕಾರ್ಮಿಕ ಸಮುದಾಯದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಾ ಇದ್ದರು. ಅದನ್ನು ರದ್ದು ಮಾಡಿ ಪುರಸಭೆಗಳು, ನಗರಪಾಲಿಕೆಗಳು ನಗರಸಭೆಗಳು ನೇರವಾಗಿ ವೇತನವನ್ನು ಕೊಡಬೇಕು ಅಂತ ಹೇಳಿ ತೀರ್ಮಾನ ಮಾಡಲಾಗಿದೆ ಎಂದರು.ಸದ್ಯ ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಗುತ್ತಿಗೆದಾರರು ವೇತನ ಕೊಡುತ್ತಿದ್ದರು. ಅವರು ಸರಿಯಾಗಿ ಸಂಬಳ ಕೊಡುತ್ತಾ ಇರಲಿಲ್ಲ ಎಂಬ ಆರೋಪಗಳಿದ್ದವು. ಅಲ್ಲದೆ, ಇವರಿಗೆ ಕನಿಷ್ಠ ವೇತನ ಕಾಯ್ದೆ ಅನ್ವಯ ಆಗುತ್ತಾ ಇರಲಿಲ್ಲ. ಹೀಗಾಗಿ ಕನಿಷ್ಠ ವೇತನ ಕಾಯ್ದೆ ಪ್ರಕಾರ, 7000 ರೂಪಾಯಿ ಇದ್ದ ಸಂಬಳವನ್ನು 17000 ರೂಪಾಯಿಗಳಿಗೆ ಮಾಡಿದ್ದು ಈ ಸಿದ್ದರಾಮಯ್ಯ ಸರ್ಕಾರ ಎಂದು ಅವರು ಹೇಳಿದರು.
ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಬಾರದು ಕಾಯಂ ನೌಕರರಾಗಿ ಮಾಡಬೇಕು ಎಂಬ ಬೇಡಿಕೆ ಇತ್ತು. ಅದರಂತೆ ಈಗಾಗಲೇ ಕೆಲವು ಜನರನ್ನು ಕಾಯಂ ಮಾಡಲಾಗಿದೆ. ಈ ಬಗ್ಗೆ ಈಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಜತೆಗೂ ಮಾತನಾಡಿದ್ದೇನೆ. ಮೇ 1 ರಂದು ಕಾರ್ಮಿಕ ದಿನಾಚರಣೆಯಂದೇ ಕಾಯಮಾತಿ ಪತ್ರ ವಿತರಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ನೀವು ಸ್ವಚ್ಛ ಮಾಡುವವರು. ಈ ಸ್ವಚ್ಛತೆ ಮಾಡುವುದರಿಂದ ಆರೋಗ್ಯ ಸುಧಾರಣೆ ಆಗುತ್ತದೆ. ಪರಿಸರ ಉತ್ತಮವಾಗುತ್ತದೆ. ನೀವೆಲ್ಲರೂ ಕೂಡ ಸ್ವಚ್ಛತೆಯೇ ಕಾಯಕ ಹಾಗೂ ದೇವರು ಎಂದು ಕೆಲಸ ಮಾಡುವವರು. ನಾವೆಲ್ಲ ದೇವಸ್ಥಾನಗಳಿಗೆ, ಚರ್ಚ್ಗಳಿಗೆ, ಗುಡಿಗಳಿಗೆ ದೇವರನ್ನು ಪೂಜಿಸಲು ಹೋಗುತ್ತೇವೆ. ಆದರೆ, ನೀವು ನೀವು ಸ್ವಚ್ಛತೆ ಮಾಡುವ ಕಾಯಕವೇ ದೇವರು ಎಂದು ಕೆಲಸ ಮಾಡುತ್ತೀರಿ ಎಂದರು.
ನೀವು ಕೂಡ ಎಲ್ಲರಂತೆ ಸಮಾನರು. ಆದರೆ, ಬಸವಣ್ಣನವರು ನುಡಿದಂತೆ ಕಾಯಕವೇ ಕೈಲಾಸ ಎಂದು ಸಮಾಜದ ಸ್ವಚ್ಛತೆಗೆ ದುಡಿಯುವರರು ಎಂದು ಸಿದ್ದರಾಮಯ್ಯ ಬಣ್ಣಿಸಿದರು.