
ನವದೆಹಲಿ: ಕಳೆದ ವಾರ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಈಗ ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್ (Domestic LPG cylinder) ಬೆಲೆಯನ್ನೂ ಏರಿಸಿದೆ. 14.2 ಕಿಲೋ ಎಲ್ಪಿಜಿ ಬೆಲೆಯನ್ನು ಸಿಲಿಂಡರ್ಗೆ 50 ರೂನಷ್ಟು ಹೆಚ್ಚಳ ಮಾಡಿದೆ. ಸಾಮಾನ್ಯ ಬಳಕೆದಾರರಿಗೆ ಮಾತ್ರವಲ್ಲ, ಉಜ್ವಲ ಸ್ಕೀಮ್ ಫಲಾನುಭವಿಗಳಿಗೂ ಈ ಬೆಲೆ ಏರಿಕೆಯ ಬಿಸಿ ತಾಕಿದೆ. ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಎಲ್ಪಿಜಿ ಬೆಲೆ ಏರಿಕೆ ಮಾಡಿರುವುದನ್ನು ಇಂದು ಸೋಮವಾರ ತಿಳಿಸಿದ್ದಾರೆ.
14.2 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 803 ರೂ ಇದ್ದದ್ದು 853 ರೂಗೆ ಏರಿಕೆ ಆಗಲಿದೆ. ಉಜ್ವಲ ಸ್ಕೀಮ್ನ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ಎಲ್ಪಿಜಿ ಸಿಗುತ್ತದಾದರೂ ಅವರಿಗೂ ಕೂಡ 50 ರೂ ಏರಿಕೆ ಆಗಿದೆ. 503 ರೂ ಇದ್ದ ಬೆಲೆ 553 ರೂಗೆ ಹೆಚ್ಚಳ ಆಗುತ್ತಿದೆ.ಪೆಟ್ರೋಲ್ ಮತ್ತು ಡೀಸಲ್ ಮೇಲೆ ಕೇಂದ್ರ ಅಬಕಾರಿ ಸುಂಕದಲ್ಲಿ ಎರಡು ರೂ ಏರಿಕೆ ಮಾಡಲಾಗಿರುವ ಸುದ್ದಿ ಬಂದ ಬೆನ್ನಲ್ಲೇ ಜನಸಾಮಾನ್ಯರಿಗೆ ಎಲ್ಪಿಜಿ ಶಾಕ್ ಬಂದಿದೆ.
ಏಪ್ರಿಲ್ 1ರಂದು ವಾಣಿಜ್ಯ ಬಳಕೆಯ ಅನಿಲದ ಬೆಲೆಯನ್ನು ಇಳಿಸಲಾಗಿತ್ತು. 19 ಕಿಲೋ ಮತ್ತು 47.5 ಕಿಲೋ ಕಮರ್ಷಿಯಲ್ ಸಿಲಿಂಡರ್ ಬೆಲೆ ಇಳಿಕೆ ಆಗಿತ್ತು. ಆದರೆ, ಇವತ್ತು ಎರಡೂ ಕಮರ್ಷಿಯಲ್ ಸಿಲಿಂಡರ್ ಬೆಲೆಗಳು ಹೆಚ್ಚಳಗೊಂಡಿವೆ. 19 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ ಸಿಲಿಂಡರ್ಗೆ 5:50 ರೂ ಹೆಚ್ಚಳ ಆಗಿದೆ. 47.5 ಕಿಲೋ ಸಿಲಿಂಡರ್ ಬೆಲೆ 13.50 ರೂನಷ್ಟು ಏರಿಕೆ ಆಗಿದೆ.
ಹೊಸ ಬೆಲೆ ಏರಿಕೆಯು ನಾಳೆಯಿಂದ (ಏ. 8) ಜಾರಿಗೆ ಬರುತ್ತದೆ. ಬೆಂಗಳೂರಿನಲ್ಲಿ ಇವತ್ತಿನ ಎಲ್ಪಿಜಿ ದರಗಳು ಹೀಗಿವೆ:
- 14.2 ಕಿಲೋ ಎಲ್ಪಿಜಿ ಸಿಲಿಂಡರ್ (ಗೃಹ ಬಳಕೆ): 805.50 ರೂ
- 5 ಕಿಲೋ ಎಲ್ಪಿಜಿ ಸಿಲಿಂಡರ್ (ಗೃಹ ಬಳಕೆ): 300.50 ರೂ
- 19 ಕಿಲೋ ಕಮರ್ಷಿಯಲ್ ಎಲ್ಪಿಜಿ: 1,880 ರೂ
- 47.5 ಕಿಲೋ ಕಮರ್ಷಿಯಲ್ ಎಲ್ಪಿಜಿ: 4,696 ರೂ
ಇದರಲ್ಲಿ 14.2 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 50 ರೂ ಏರಿಕೆ ಆಗುತ್ತಿದೆ. ಗೃಹಬಳಕೆಯ 5 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆಯೂ ಏರಿಕೆ ಆಗುತ್ತಿದೆ. ಆದರೆ, ಎಷ್ಟು ಎಂಬುದು ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.


