ತಮಿಳುನಾಡಿನಲ್ಲಿ ಹಿಂದಿಯ ರೂಪಾಯಿ ಚಿಹ್ನೆಯ ಬದಲು ತಮಿಳು ಭಾಷೆಯ ರೂ. ಬಳಕೆಗೆ ನಿರ್ಧಾರ

ಚೆನ್ನೈ, (ಮಾರ್ಚ್ 13): ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವು ರಾಜ್ಯ ಬಜೆಟ್‌ನ ಅಧಿಕೃತ ಲೋಗೋದಲ್ಲಿ ಭಾರತೀಯ ರೂಪಾಯಿ ಚಿಹ್ನೆಯಾದ ₹ ಬದಲಿಗೆ ತಮಿಳು ಅಕ್ಷರವಾದ ರೂ. ಬಳಸಲು ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ. ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ನಡುವಿನ ಭಾಷಾ ವಿವಾದದ ನಡುವೆ ಈ ಬೆಳವಣಿಗೆ ನಡೆದಿದೆ. ಹಿಂದಿ ಹೇರಿಕೆ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯ ಸುತ್ತ ನಡೆಯುತ್ತಿರುವ ಚರ್ಚೆಗಳ ನಡುವೆ ಈ ನಿರ್ಧಾರವನ್ನು ತಮಿಳು ಭಾಷೆಯ ಹೆಮ್ಮೆಯ ಪ್ರತಿಪಾದನೆಯಾಗಿ ನೋಡಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಸಿಎಂ ಎಂ.ಕೆ. ಸ್ಟಾಲಿನ್ ತಮಿಳು ಕೇವಲ ಭಾಷೆಯಲ್ಲ, ತಮಿಳುನಾಡಿನ ಜನರಿಗೆ ಸಂಸ್ಕೃತಿ, ಇತಿಹಾಸ ಮತ್ತು ಸ್ವಾಭಿಮಾನದ ಸಂಕೇತವಾಗಿದೆ ಎಂದು ವಿವರಿಸಿದ್ದಾರೆ.ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಕುರಿತು ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ವಿವಾದ ತೀವ್ರಗೊಂಡಿದೆ. ಏಕೆಂದರೆ, ತಮಿಳುನಾಡು ರಾಜ್ಯವು ಪ್ರಮುಖ ನಿಬಂಧನೆಗಳನ್ನು ಜಾರಿಗೆ ತರಲು ನಿರಾಕರಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನಿಧಿಯನ್ನು ನೀಡುವ ಪ್ರಮುಖ ಶಿಕ್ಷಣ ಯೋಜನೆಯಾದ ‘ಸಮಗ್ರ ಶಿಕ್ಷಾ ಅಭಿಯಾನ’ (SSA) ಅಡಿಯಲ್ಲಿ ಕೇಂದ್ರ ಸರ್ಕಾರವು 570 ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ತಡೆಹಿಡಿದಿದೆ ಎಂದು ವರದಿಯಾಗಿದೆ.SSA ಅಡಿಯಲ್ಲಿ, 60% ಹಣವನ್ನು ಕೇಂದ್ರವು ಒದಗಿಸುತ್ತದೆ. ಆದರೆ, ಈ ಹಣವನ್ನು ಪಡೆಯಲು ರಾಜ್ಯಗಳು NEP ಮಾರ್ಗಸೂಚಿಗಳನ್ನು ಅನುಸರಿಸುವ ನಿರೀಕ್ಷೆಯಿದೆ. ಸಿಎಂ ಸ್ಟಾಲಿನ್ ನೇತೃತ್ವದ ಸರ್ಕಾರವು ಹಿಂದಿಯೇತರ ಮಾತನಾಡುವ ಜನಸಂಖ್ಯೆಯ ಮೇಲೆ ಅದರಲ್ಲೂ ವಿಶೇಷವಾಗಿ ತಮಿಳರ ಮೇಲೆ ಹಿಂದಿ ಹೇರುವ ಪ್ರಯತ್ನವನ್ನು ಬಲವಾಗಿ ವಿರೋಧಿಸಿದೆ. ರಾಜ್ಯವು ಬಹಳ ಹಿಂದಿನಿಂದಲೂ ದ್ವಿಭಾಷಾ ನೀತಿಯನ್ನು ಅಂದರೆ ತಮಿಳು ಮತ್ತು ಇಂಗ್ಲಿಷ್ ಭಾಷಾ ನೀತಿಯನ್ನು ಉಳಿಸಿಕೊಂಡಿದೆ. ಇದು NEPಯ ತ್ರಿಭಾಷಾ ಸೂತ್ರವನ್ನು ಭಾಷಾ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಿದೆ.ಆದರೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಡಿಎಂಕೆ ಚುನಾವಣಾ ಲಾಭಕ್ಕಾಗಿ ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.