ರೈತರ ಬೆಳೆಗಳಿಗೆ ನೀರು ಹರಿಸುವಂತೆ ಹೇಳಿದ್ದ ಕೋರ್ಟ್ ಆದೇಶಕ್ಕೂ ಅಡ್ಡಗಾಲು ಹಾಕಿದ ಸರ್ಕಾರ

ಯಾದಗಿರಿ: ತಮ್ಮ ಬೆಳೆಗಾಗಿ ರೈತರು (Farmers) ಕೋರ್ಟ್ ಮೂಲಕ ನೀರು(Water) ಪಡೆದುಕೊಳ್ಳುತ್ತಿರುವುದಕ್ಕೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕಿದೆ. ಇದರಿಂದ ರೈತರ ಆಕ್ರೋಶ ಭುಗಿಲೆದ್ದಿದೆ. ನೀರಿಲ್ಲದೇ ತಮ್ಮ ಬೆಳೆಗಳು ಒಣಗುತ್ತಿವೆ ಎಂದು ರೈತರು ಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಪರಿಗಣಿಸಿದ್ದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠವು ರೈತರ ಮನವಿಗೆ ಸ್ಪಂದಿಸಿದ್ದು, ಆಲಮಟ್ಟಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿನ ಬೆಳೆದು ನಿಂತಿರುವ ಬೆಳೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಏ.4 ಇದೇ ಏ. 6ರವರೆಗೆ ಬಸವಸಾಗರ (ನಾರಾಯಣಪುರ) ಜಲಾಶಯದಿಂದ (Basava Sagar Reservoir) ಕಾಲುವೆಗಳಿಗೆ ನೀರು ಹರಿಸುವಂತೆ ಆದೇಶಿಸಿತ್ತು. ಆದ್ರೆ, ರಾಜ್ಯ ಸರ್ಕಾರಕ್ಕೆ ಇದರ ವಿರುದ್ಧ ಮೇಲ್ಮನವಿ ಹೋಗಿ ದ್ವಿಸದಸ್ಯ ಪೀಠದಿಂದ ತಡೆಯಾಜ್ಞೆ ತಂದಿದೆ. ಇದರಿಂದ ರೈತರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಬೆಳೆಗಳಿಗೆ ನೀರು ಕೊಡಿ ಎಂದು ರೈತರು ಪ್ರತಿಭಟನೆ, ಹೋರಾಟಗಳನ್ನು ಮಾಡಿದರೂ ಸಹ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಕೊನೆಗೆ ಹುಣಸಗಿ ತಾಲೂಕಿನ ಮಲ್ಲಿಕಾರ್ಜುನ ಎಂಬ ರೈತ ಸರ್ಕಾರದ ವಿರುದ್ಧ ಕಲಬುರಗಿ ಹೈಕೋರ್ಟ್ ನಲ್ಲಿ ರೀಟ್ ಅರ್ಜಿ ಸಲ್ಲಿಸಿದ್ದರು. ಈ ನಿನ್ನೆ (ಏಪ್ರಿಲ್ 03) ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಏಪ್ರಿಲ್ 04 ರಿಂದ ಏಪ್ರಿಲ್ 6ರ ತನಕ ಜಲಾಶಯ ಎಡ ಮತ್ತು ಬಲ ದಂಡೆ ಕಾಲುವೆಗಳಿಗೆ ನಿರಂತರವಾಗಿ 0.8 ಟಿಎಂಸಿ ನೀರು ಹರಿಸುವಂತೆ ಆದೇಶಿಸಿತ್ತು. ಇದರಿಂದ ಫುಲ್ ಖುಷ್ ಆಗಿದ್ದರು. ಆದ್ರೆ, ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ದ್ವಿಸದಸ್ಯ ಪೀಠ, ನೀರು ಹರಿಸುವ ಆದೇಶಕ್ಕೆ ಏಪ್ರಿಲ್ 9ರವರೆಗೂ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ರೈತರನ್ನ ಉಳಿಸಬೇಕಿದ್ದ ಸರ್ಕಾರವೇ ಈ ತಡೆಯಾಜ್ಞೆ ತಂದಿರುವುದಿರಂದ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನಾರಾಯಣಪುರದ ಬಸವಸಾಗರ ಜಲಾಶಯದ ರೈತರು ಸರ್ಕಾರ ನಡೆಯನ್ನು ಖಂಡಿಸಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ಜು ಈ ಬಗ್ಗೆ ಮಾಜಿ ಶಾಸಕ ರಾಜುಗೌಡ ಪ್ರತಿಕ್ರಿಯಿಸಿದ್ದು, ನಿನ್ನೆ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಮತ್ತೆ ಸರ್ಕಾರಕ್ಕೆ ಮೇಲ್ಮನವಿ ಹೋಗಬೇಡಿ ಎಂದು ನಾವು ಮನವಿ ಮಾಡಿದ್ವಿ. ಆದ್ರೆ ಸರ್ಕಾರ ಕೋರ್ಟ್ ಮೊರೆ ಹೋಗಿ ಸ್ಟೇ ತರುವ ಕೆಲಸ ಮಾಡಿದೆ. ಸರ್ಕಾರ ಈ ರೀತಿ ಬಂಡತನಕ್ಕೆ ಹೋಗುತ್ತೆ ಎಂದು ಅಂದುಕೊಂಡಿರಲಿಲ್ಲ. ನೀರು ಬಿಡೋಕೆ ರೆಡಿ ಇದ್ದೇವೆ. ಎಷ್ಟು ಲಭ್ಯತೆ ಇದೆ ಎಂದು ನೋಡಿ ಬಿಡುವುದಕ್ಕೆ ಸ್ಟೇ ತಂದಿದ್ದಾರೆ. ನೀರು ಬಿಡುವುದೇ ಆದ್ರೆ ಸ್ಟೇ ತಂದಿರುವುದು ಏಕೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.ನಿಮ್ಮ ಉದ್ದೇಶ ಎಡ ಮತ್ತು ಬಲದಂಡೆ ಕಾಲುವೆ ರೈತರ ಜೀವ ತೆಗೆಯುವುದು ಇದೆಯಾ? ಈ ಸರ್ಕಾರ ರೈತರ ವಿರೋಧಿ ಸರ್ಕಾರ. ತೆಲಂಗಾಣಕ್ಕೆ ನೀರು ಬಿಡಲು ಇವರಿಗೆ ಬಹಳ ಪ್ರೀತಿಯಿತ್ತು. ಆದ್ರೆ ನಮ್ಮ ರೈತರಿಗೆ ನೀರು ಬಿಡಲು ಪ್ರೀತಿ ಇಲ್ಲ. ನನಗೆ ನೀರು ಬಿಡಿಸುವ ಕ್ರೆಡಿಟ್ ಬೇಕಾಗಿಲ್ಲ. ಸದ್ಯ ಯಾವುದೇ ಚುನಾವಣೆಗಳು ಇಲ್ಲ. ನಾನೇ ಒಂದೇ ವರ್ಷದಲ್ಲಿ ಎರಡು ಚುನಾವಣೆ ಸೋತಿದ್ದೆನೆ. ಚುನಾವಣೆಗೆ ಇನ್ನು ಮೂರು ವರ್ಷವಿದೆ ಮುಂದೆ ನೋಡೋಣಾ. ನಾವು ಅನುಕಂಪದ ಮೇಲೆ ಗೆದ್ದಿರುವ ವ್ಯಕ್ತಿ ಅಲ್ಲ. ಈ ಕೋರ್ಟ್ ನಲ್ಲಿ ಏಪ್ರಿಲ್ 9 ವರೆಗೆ ಸ್ಟೇ ತಂದಿದ್ದಾರೆ. ಮುಂದೆ ಕೂಡ ನಾನು ಕಾನೂನಾತ್ಮಕ ಹೋರಾಟ ಮತ್ತು ಪ್ರತಿಭಟನೆಗೆ ಬದ್ಧನಾಗಿದ್ದೆನೆ ಎಂದರು.