ನಗರಸಭೆ
Trending

ಮುಡಾದಲ್ಲಿ ಭ್ರಷ್ಟಾಚಾರ ಅಬ್ಬರ, ಕಮಿಷನರ್ ವಿರುದ್ಧವೇ ವಾಮಾಚಾರ ಬೆದರಿಕೆ

ಮಂಗಳೂರು: ಮಂಗಳೂರು (Mangalore) ನಗರಾಭಿವೃದ್ಧಿ ಪ್ರಾಧಿಕಾರ (MUDA) ದಲ್ಲಿ ಭ್ರಷ್ಟಾಚಾರ ಮಿತಿ ಮೀರಿರುವ ಆರೋಪ ಕೇಳಿಬಂದಿದ್ದು, ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಕಮಿಷನರ್​ಗೇ ವಾಮಾಚಾರದ ಬೆದರಿಕೆಯೊಡ್ಡಲಾಗಿದೆ. ಬ್ರೋಕರ್​​ಗಳ ಅಟ್ಟಹಾಸದಿಂದ ಕಂಗಾಲಾದ ಮುಡಾ ಆಯುಕ್ತೆ ನೂರ್ ಝಹರಾ ಖಾನಂ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮುಡಾ ಕಚೇರಿಗೆ ದಲ್ಲಾಳಿಗಳನ್ನು ನಿರ್ಬಂಧಿಸಿದ್ದಕ್ಕೆ ಕಮಿಷನರ್​​​ ಮೇಲೆ ವಾಮಾಚಾರ ಪ್ರಯೋಗದ ಬೆದರಿಕೆಯೊಡ್ಡಲಾಗಿದೆ. ಈ ಬಗ್ಗೆ ಅವರು ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಇಬ್ಬರು ದಲ್ಲಾಳಿಗಳ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.ಬ್ರೋಕರ್ ವಹಾಬ್ (45) ಮತ್ತು ಅಸಿಸ್ಟೆಂಟ್ ಬ್ರೋಕರ್ ಸಾಬಿತ್ (25) ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ. ಮೌಢ್ಯ ನಿರ್ಬಂಧ ಕಾಯ್ದೆ 2020ರ ಅಡಿಯಲ್ಲೇ ಕೇಸು ದಾಖಲಿಸಬೇಕೆಂದು ಕಮಿಷನರ್ ದೂರು ನೀಡಿದ್ದರು. ಸದ್ಯ ಬಿಎನ್​ಎಸ್ ಸೆಕ್ಷನ್ 132, 351, 356(1), 61(2), 352 ರಡಿ ಎಫ್ಐಆರ್ ದಾಖಲಿಸಿರುವ ಉರ್ವಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ದಲ್ಲಾಳಿಗಳು ಒಟ್ಟು ಸೇರಿ ವಾಟ್ಸ್​ಆ್ಯಪ್ ಗ್ರೂಪ್ ರಚಿಸಿ ಅದರಲ್ಲಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಅವಮಾನಕರ ಸಂದೇಶಗಳನ್ನು ಪ್ರಕಟಿಸಿದ್ದಾರೆ ಎಂದು ಕಮಿಷನರ್ ನೂರ್ ಝಹರಾ ಖಾನಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇಷ್ಟೇ ಅಲ್ಲದೆ, ದೂರವಾಣಿ ಮೂಲಕವೂ ಜೀವಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ದಲ್ಲಾಳಿಗಳು ಗುಂಪು ಕಟ್ಟಿಕೊಂಡು ಮುಡಾ ಕಚೇರಿಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಅಧಿಕಾರಿಗಳು ಇಲ್ಲದ ವೇಳೆ ಬ್ರೋಕರ್​​​ಗಳದ್ದೇ ಕಾರುಬಾರು ನಡೆಯುತ್ತಿದೆ ಎಂಬ ಆರೋಪವಿತ್ತು. ಮುಡಾ ಕಚೇರಿಯಲ್ಲಿ ಅಧಿಕಾರಿಯೊಬ್ಬರ ಚೇಂಬರ್​​ನಲ್ಲಿ ಬ್ರೋಕರ್ ಒಬ್ಬ ಕಡತ ತಿದ್ದುಪಡಿ ಮಾಡಿದ್ದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದಲ್ಲದೆ, ವೈರಲ್ ಕೂಡ ಆಗಿತ್ತು. ಬ್ರೋಕರ್ ಕಡತ ಪರಿಶೀಲಿಸಿ ಪೆನ್​ನಲ್ಲಿ ತಿದ್ದುವ ದೃಶ್ಯ ವೈರಲ್ ಆದ ಬೆನ್ನಲ್ಲೇ ಕಮಿಷನರ್ ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು.

ವಿಡಿಯೋ ವೈರಲ್ ಬೆನ್ನಲ್ಲೇ ಮುಡಾ ಕಚೇರಿಗೆ ದಲ್ಲಾಳಿಗಳಿಗೆ ನಿರ್ಬಂಧ ವಿಧಿಸಿ ಕಮಿಷನರ್ ನೂರ್ ಝಹರಾ ಖಾನಂ ಆದೇಶ ಹೊರಡಿಸಿದ್ದರು. ಖಾಸಗಿ ಭದ್ರತಾ ಸಿಬ್ಬಂದಿ ನೇಮಿಸಿ ಬ್ರೋಕರ್​ಗಳ ಮುಡಾ ಪ್ರವೇಶಕ್ಕೆ ತಡೆಯೊ್ಡಿದ್ದರು. ಮಧ್ಯವರ್ತಿಗಳಿಗೆ ಪ್ರವೇಶವಿಲ್ಲ, ಮುಡಾದಲ್ಲಿ ವೈಯಕ್ತಿಕ ಕೆಲಸ ಇರುವವರಿಗಷ್ಟೇ ಕಚೇರಿ ಪ್ರವೇಶಕ್ಕೆ ಅವಕಾಶ ಎಂದಿದ್ದರು. ಈ ನಡೆಯಿಂದ ಕುಪಿತಗೊಂಡಿದ್ದ ಹಲವು ಮುಡಾ ಬ್ರೋಕರ್​ಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಮಂಗಳೂರು ಮುಡಾ ಕಚೇರಿಯಲ್ಲಿ ಅಧಿಕಾರಿ, ಸಿಬ್ಬಂದಿ ಲೆಕ್ಕಿಸದೇ ದಲ್ಲಾಳಿಗಳ ದರ್ಬಾರ್ ನಡೆಯುತ್ತಿರುವ ಬಗ್ಗೆ ಈ ಹಿಂದೆಯೂ ಆರೋಪಗಳು ಕೇಳಿಬಂದಿದ್ದವು. ರಾಜಕೀಯ ನಾಯಕರ ಹೆಸರಿನಲ್ಲಿ ಮಂಗಳೂರು ಮುಡಾ ಕಚೇರಿಯಲ್ಲಿ ಪಾರುಪತ್ಯ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು.

Related Articles

Leave a Reply

Your email address will not be published. Required fields are marked *

Back to top button