
ಬೆಂಗಳೂರು, ಏಪ್ರಿಲ್ 01: ಹಾಲು, ವಿದ್ಯುತ್ ದರವನ್ನು ಸರ್ಕಾರ ಏರಿಕೆ ಮಾಡಿದ್ದು, ಇಂದಿನಿಂದ ಜಾರಿಗೆ ಬಂದಿದೆ. ಈ ಬೆಲೆ ಏರಿಕೆಯಿಂದ ರಾಜ್ಯದ ಜನರು ರೋಸಿ ಹೋಗಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಜನರು ಮತ್ತು ವಿರೋಧ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಸಕ್ಕೂ ಸುಂಕ ಸಂಗ್ರಹಣೆ ಮಾಡಲು ತೀರ್ಮಾನಿಸಿತ್ತು. ಇದೀಗ, ಗಾಯದ ಮೇಲೆ ಬರೆ ಎಳೆದಂತೆ ಸದ್ದಿಲ್ಲದೆ ಮತ್ತೊಂದು ಸುತ್ತಿನ ತೆರಿಗೆ ಏರಿಕೆಗೆ ಬಿಬಿಎಂಪಿ ಪ್ಲಾನ್ ಮಡಿದೆ. ವಾಹನ ನಿಲ್ದಾಣದ ಹೆಸರಿನಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ಬಿಬಿಎಂಪಿ ಯೋಚಿಸಿದೆ. ವಾಹನ ನಿಲ್ದಾಣದ (Parking) ಪ್ರದೇಶವಾರು ಯೂನಿಟ್ ದರ ನಿರ್ಧರಿಸಲು ಕರಡು ಅಧಿಸೂಚನೆಯನ್ನು ಬಿಬಿಎಂಪಿ ಹೊರಡಿಸಿದೆ. ಅಧಿಸೂಚನೆ ಸಂಬಂಧ ಸಾರ್ವಜನಿಕರು ಸಲಹೆ ಮತ್ತು ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.
ನಿಮ್ಮ ಮನೆಯ ಕಾಂಪೌಂಡ್, ಅಪಾರ್ಟ್‌ಮೆಂಟ್, ಕಮರ್ಷಿಯಲ್ ಕಾಂಪ್ಲೆಕ್ಸ್, ಮಾಲ್ ಸೇರಿದಂತೆ ಎಲ್ಲ ರೀತಿಯ ಕಟ್ಟಡಗಳಿಗೆ ಪಾರ್ಕಿಂಗ್ ದರ ಏರಿಕೆ ಮಾಡಲು ತೀರ್ಮಾನಿಸಿದೆ. ವಸತಿ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 600 ರೂಪಾಯಿ ಪಾರ್ಕಿಂಗ್ ತೆರಿಗೆ (ಆರಂಭಿಕ ದರ) (ಚದರ ಅಡಿಗೆ 2 ರೂ.) ವಸೂಲಿ ಮಾಡಲು ನಿರ್ಧರಿಸಲಾಗಿದೆ. ವಾಣಿಜ್ಯ ಅಥವಾ ವಸತಿಯೇತರ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 1,125 ರೂ. ಪಾರ್ಕಿಂಗ್ ತೆರಿಗೆ (ಆರಂಭಿಕ ದರ) (ಚದರ ಅಡಿಗೆ 3 ರೂ.) ಸಂಗ್ರಹಿಸಲು ಬಿಬಿಎಂಪಿ ನಿರ್ಧರಿಸಿದೆ.
ಮೊದಲೆಲ್ಲ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಕಮರ್ಷಿಯಲ್ ಇದ್ದರೇ, ಕಮರ್ಷಿಯಲ್ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ವಸತಿ ಇದ್ದರೇ ವಸತಿ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕವನ್ನು ತೋಚಿದಷ್ಟು ವಸೂಲಿ ಮಾಡಲಾಗುತ್ತಿತ್ತು. ಆದರೆ, ಇದೀಗ ಪಾರ್ಕಿಂಗ್ಗೆ ಚದರ ಅಡಿ ಲೆಕ್ಕದಲ್ಲಿ ಪಾಲಿಕೆ ದರ ನಿಗದಿ ಮಾಡಿದೆ.
ಮನೆ, ಅಂಗಡಿ ಮುಂಗಟ್ಟಿನ ಕಸಕ್ಕೂ ತೆರಿಗೆ ಪಾವತಿ ಮಾಡಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆ ಸೂಚಿಸಿದೆ. ಈ ವಿಚಾರವಾಗಿ ಬಿಬಿಎಂಪಿ ಬಜೆಟ್ನಲ್ಲೂ ಘೋಷಣೆ ಮಾಡಲಾಗಿದೆ. ಈ ಮೂಲಕ 600 ಕೋಟಿ ರೂಪಾಯಿ ಆದಾಯ ಸಂಗ್ರಹಕ್ಕೆ ಬಿಬಿಎಂಪಿ ಗುರಿ ಹಾಕಿಕೊಂಡಿದೆ.
ಅಂಗಡಿ–ಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ತೆರಿಗೆ ವಸೂಲಿಗೆ ಪಾಲಿಕೆ ಸಜ್ಜಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ ವೆಚ್ಚ ಹೆಚ್ಚಾಗುತ್ತಿದ್ದು, ಈ ಕಾರಣದಿಂದ ತೆರಿಗೆ ವಿಧಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ. ಕಟ್ಟಡದ ವಿಸ್ತೀರ್ಣದ ಆಧಾರತದ ಮೇಲೆ ಕಸದ ಶುಲ್ಕ ನಿಗದಿಪಡಿಸಲಾಗುತ್ತದೆ. ಆಸ್ತಿ ತೆರಿಗೆ ಜೊತೆಯೇ ಕಸ ತೆರಿಗೆಯನ್ನೂ ಪಾಲಿಕೆ ಸಂಗ್ರಹ ಮಾಡಲಿದೆ.