World
Trending

ಮ್ಯಾನ್ಮಾರ್ ನಲ್ಲಿ ಮತ್ತೆ ಭೂಕಂಪ - 4.4ರಷ್ಟು ತೀವ್ರತೆಯಲ್ಲಿ ಕಂಪಿಸಿದ ಭೂಮಿ

ಬ್ಯಾಂಕಾಕ್: ಇದೇ ಮಾ. 28ರಂದು 7.7ರ ತೀವ್ರತೆಯ ಭೂಕಂಪದಿಂದ ತತ್ತರಿಸಿರುವ ಮ್ಯಾನ್ಮಾರ್ ದೇಶದಲ್ಲಿ ಮಾ. 28ರ ತಡರಾತ್ರಿ ಮತ್ತೆ ಭೂಕಂಪ ಸಂಭವಿಸಿದೆ. ಭಾರತೀಯ ಕಾಲಮಾನದ ಪ್ರಕಾರ, ಮಾ. 28ರ ಮಧ್ಯರಾತ್ರಿ 12.30ರ ಸುಮಾರಿಗೆ ಅಲ್ಲಿ ಭೂಮಿ ಕಂಪಿಸಿದೆ. ಅದರಿಂದ ಮತ್ತಷ್ಟು ಕಟ್ಟಡಗಳು ಧರೆಗುರುಳಿವೆ. ಮತ್ತಷ್ಟು ಜನರು ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಒಂದು ಸಾವಿರ ದಾಟುವ ಸಾಧ್ಯತೆಯಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮಾ. 28ರ ಮಧ್ಯಾಹ್ನ ಅಲ್ಲಿನ ಸ್ಥಳೀಯ ಕಾಲಮಾನದ ಪ್ರಕಾರ, 12.30ಕ್ಕೆ ಸಂಭವಿಸಿದ್ದ ಭೂಕಂಪದಿಂದಾಗಿ ನೂರಾರು ಜನರು ಸಾವಿಗೀಡಾಗಿ, ಸಾವಿರಾರು ಜನರು ಗಾಯಗೊಂಡಿದ್ದಾರೆ. ಹಲವಾರು ಕಟ್ಟಡಗಳು ನೆಲಸಮವಾಗಿವೆ. ರಸ್ತೆ, ವಿದ್ಯುತ್, ನೀರು ಮುಂತಾದ ಮೂಲಸೌಕರ್ಯಗಳೆಲ್ಲಾ ಹಾಳಾಗಿ ಜನಜೀವನ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಇದರ ನಡುವೆಯೇ ತಡರಾತ್ರಿ ಮತ್ತೊಂದು ಭೂಕಂಪ ಸಂಭವಿಸಿದ್ದು ಅಲ್ಲಿನ ಸರ್ಕಾರವನ್ನು ಹಾಗೂ ಜನರನ್ನು ಮತ್ತಷ್ಟು ಕಂಗೆಡಿಸಿದೆ. (ಮ್ಯಾನ್ಮಾರ್ ನಲ್ಲಿರುವ ಕನ್ನಡಿಗರು ಹೇಗಿದ್ದಾರೆ)

ಮ್ಯಾನ್ಮಾರ್ ನಲ್ಲಿ ಮಾ. 28ರ ಮಧ್ಯರಾತ್ರಿಯಲ್ಲಿ ಮತ್ತೊಂದು ಭೂಕಂಪ ಸಂಭವಿಸಿದ್ದರೂ ಎಲ್ಲವೂ ಅಲ್ಲಿಗೇ ಮುಗಿದಂತೆ ಕಾಣುತ್ತಿಲ್ಲ. ಹಲವಾರು ಪ್ರಾಂತ್ಯಗಳಲ್ಲಿ ಭೂಮಿ ಮತ್ತೆ ಮತ್ತೆ ನಡುಗಿದ ಅನುಭವ ಆಗುತ್ತಿದೆ. ಅದರಿಂದ ಜನರು ಭಯಭೀತರಾಗಿದ್ದು ಯಾವಾಗ ಏನು ಸಂಭವಿಸುವುದೋ ಎಂಬ ಆತಂಕದಲ್ಲಿದ್ದಾರೆ ಎಂದು ಕೆಲವು ಸುದ್ದಿ ಜಾಲತಾಣಗಳು ವರದಿ ಮಾಡಿವೆ. ಮಾ. 28ರ ಮಧ್ಯಾಹ್ನ ಹಾಗೂ ಮಧ್ಯರಾತ್ರಿ ಸಂಭವಿಸಿದ ಎರಡು ಭೂಕಂಪಗಳ ಹೊರತಾಗಿಯೂ ಮ್ಯಾನ್ಮಾರ್ ನ ಅಲ್ಲಲ್ಲಿ ಲಘು ಭೂಕಂಪಗಳು ಸಂಭವಿಸಿದ್ದು ಒಟ್ಟು 9 ಬಾರಿ ಭೂಕಂಪನವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಮ್ಯಾನ್ಮಾರ್ ರಸ್ತೆಗಳಲ್ಲಿ ಎಲ್ಲೆಡೆ ಅಸ್ತವ್ಯಸ್ತತೆ ಎದ್ದುಕಾಣುತ್ತಿದೆ. ಎಲ್ಲೆಲ್ಲೂ ಧರೆಗುರುಳಿದ ಕಟ್ಟಡಗಳ ಅವಶೇಷಗಳು, ಹಾಳಾದ ರಸ್ತೆಗಳು, ಹಾಳಾದ ಮನೆಗಳು, ಜಖಂ ಆಗಿರುವ ವಾಹನಗಳು ಎದ್ದು ಕಾಣುತ್ತಿವೆ. ಎಲ್ಲೆಲ್ಲೂ ಜನರು ಆಹಾರ, ನೀರಿಗಾಗಿ ಹಾತೊರೆಯುತ್ತಿದ್ದಾರೆ. ಭೂಕಂಪಕ್ಕೆ ಶ್ರೀಮಂತ, ಬಡವರ ಬೇಧವಿಲ್ಲ. ಎಲ್ಲರ ಮನೆಗಳೂ ನೆಲಸಮವಾಗಿವೆ. ಎಲ್ಲರೂ ಸಮಾನರಾಗಿ ನಿಂತು ಸರ್ಕಾರದ ಮುಂದೆ ಸಹಾಯಕ್ಕಾಗಿ ಕೈಯ್ಯೊಡ್ಡುವಂತಾಗಿದೆ.

ಜಪಾನ್ ನ ಪ್ರಧಾನಿ ಶಿಗೆರು ಇಷಿಬಾ ಅವರು ಭೂಕಂಪ ಪೀಡಿತ ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್ ಗೆ ನೆರವಿನ ಹಸ್ತ ಚಾಚಿದ್ದಾರೆ. ಜಪಾನ್ ನಿಂದ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಸಿದ್ಧವಿದೆ ಎಂದು ಹೇಳಿದ್ದಾರೆ. ಥಾಯ್ಲೆಂಡ್ ಗೆ ಕಳುಹಿಸಲಾಗಿರುವ ಮತ್ತೊಂದು ಸಂದೇಶದಲ್ಲಿ ಅಲ್ಲಿ ಸಂಭವಿಸಿರುವ ಸಾವು ನೋವುಗಳ ಬಗ್ಗೆ ತಮಗೂ ಅನುಕಂಪವಿದೆ ಎಂದು ತಿಳಿಸಿರುವ ಇಷಿಬಾ, ಎಲ್ಲಾ ರೀತಿಯ ಮಾನವೀಯ ನೆರವನ್ನು ನೀಡಲು ಜಪಾನ್ ಸಿದ್ಧವಿದೆ ಎಂದು ತಿಳಿಸಿದ್ದಾರೆ.


Leave a Reply

Your email address will not be published. Required fields are marked *

Back to top button