
ಬೆಂಗಳೂರು: ಯುಗಾದಿ ಬಳಿಕ ರಾಜ್ಯದಲ್ಲಿ ಸಂಪುಟ ಪುನಾರಚನೆ ಆಗುವ ಸಾಧ್ಯತೆಗಳ ಬಗ್ಗೆ ಅನುಮಾನಗಳಿವೆ. ಕಾಂಗ್ರೆಸ್ ನ ಉನ್ನತ ಮೂಲಗಳ ಪ್ರಕಾರ ಯುಗಾದಿ ಬಳಿಕವೂ ಸಂಪುಟ ಪುನಾರಚನೆ ಆಗುವ ಸಾಧ್ಯತೆಗಳು ಕಡಿಮೆಯಂತೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಈ ವಿಚಾರವಾಗಿ ಭಿನ್ನ ಅಭಿಪ್ರಾಯಗಳು ಇದ್ದು, ಹೈಕಮಾಂಡ್ ನಡೆಯೂ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಸರ್ಕಾರದ ರಚನೆಯಾಗಿ 2 ವರ್ಷಗಳು ಆಗುತ್ತಿವೆ. ಹೀಗಿರುವಾಗ ಸಂಪುಟ ಪುನಾರಚನೆಗೆ ಸೂಕ್ತ ಕಾಲ ಎಂಬ ಅಭಿಪ್ರಾಯಗಳಿವೆ. ಸಾಕಷ್ಟು ಮಂದಿ ಕ್ಯಾಬಿನೆಟ್ ಗೆ ಸೇರಲು ಪ್ರಯತ್ನ ನಡೆಸುತ್ತಿದ್ದಾರೆ. ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಮಾತ್ರ 30 ತಿಂಗಳು ಪೂರ್ಣಗೊಂಡ ಬಳಿಕ ಸಂಪುಟ ಪುನಾರಚನೆ ಆಗಲಿ ಎಂಬ ಮನಸ್ಥಿತಿಯಲ್ಲಿದ್ದಾರೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಈಗಲೇ ಸಂಪುಟ ಪುನಾರಚನೆ ಮಾಡಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ ಎಂಬ ಮಾಹಿತಿ ಇದೆ. ಕನಿಷ್ಠ ನಾಲ್ಕೈದು ಮಂದಿಯನ್ನು ಬದಲಾವಣೆ ಮಾಡಬೇಕು ಎಂಬುವುದು ಡಿಕೆ ಶಿವಕುಮಾರ್ ಲೆಕ್ಕಾಚಾರವಾಗಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರನ್ನು ಡಿಕೆಶಿ ಮನವರಿಕೆ ಮಾಡುತ್ತಿದ್ದಾರೆ ಎನ್ನುತ್ತಿವೆ ಕಾಂಗ್ರೆಸ್ ಉನ್ನತ ಮೂಲಗಳು.ಸಿಎಂ ಸಿದ್ದರಾಮಯ್ಯ ನಿಲುವಿನ ಭಿನ್ನವಾದ ನಿಲುವನ್ನು ಹೈಕಮಾಂಡ್ ಹೊಂದಿದೆ ಎಂಬ ಮಾಹಿತಿ ಇದೆ. ಡಿಕೆಶಿ ಸಂಪುಟ ಪುನಾರಚನೆಗೆ ಒತ್ತಡ ಹೇರುತ್ತಿರುವುದು ಒಂದು ಕಡೆಯಾದರೆ ಹೈಕಮಾಂಡ್ ನಾಯಕರು ಕೂಡಾ ಸಂಪುಟ ಪುನಾರಚನೆಗೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಕನಿಷ್ಠ 5 ರಿಂದ 6 ಸಚಿವರನ್ನು ಬದಲಾವಣೆ ಮಾಡಬೇಕು ಎಂಬ ಉದ್ದೇಶವೂ ಹೈಕಮಾಂಡ್ ಮುಂದಿದೆ. ಆದರೆ ಸಿದ್ದರಾಮಯ್ಯ ಅವರ ಗಟ್ಟಿ ನಿಲುವಿನ ಹಿನ್ನಲೆಯಲ್ಲಿ ಸದ್ಯಕ್ಕೆ ಸಂಪುಟ ಪುನಾರಚನೆಗೆ ಬ್ರೇಕ್ ಬಿದ್ದಿದೆ.
ಸಂಪುಟ ಪುನಾರಚನೆ ಆದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಹೊಸತಾಗಿ ಸಂಪುಟಕ್ಕೆ ಸೇರ್ಪಡೆ ಆಗಲು ಸಾಕಷ್ಟು ಜನರು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಹಿರಿಯ ಶಾಸಕರು ಈ ಪ್ರಯತ್ನದಲ್ಲಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಾಯಕರಿಗೂ ಸವಾಲಾಗಿದೆ. ಎಲ್ಲರನ್ನು ಸರಿದೂಗಿಸಿಕೊಂಡು ಸಂಪುಟ ಪುನಾರಚನೆ ಮಾಡುವುದು ಸುಲಭದ ಕೆಲಸವಲ್ಲ. ಈ ನಿಟ್ಟಿನಲ್ಲಿ ಹೈಕಮಾಂಡ್ ಏನು ಹೆಜ್ಜೆ ಇಡಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.